ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್: ಭಾರತೀಯರಿಗೆ ಪ್ರಧಾನಿ ಮೋದಿ ವಿಶೇಷ ಮನವಿ

Published : May 11, 2026, 06:38 PM IST
Narendra Modi

ಸಾರಾಂಶ

ಮೇ 10ರ ಭಾನುವಾರದಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದಿನಲ್ಲಿ ಒಂದು ವಿಭಿನ್ನವಾದ ಹೇಳಿಕೆ ನೀಡಿದರು. ಮೋದಿಯವರ ಹೇಳಿಕೆ ಬಹುಮಟ್ಟಿಗೆ ಕೋವಿಡ್ ಲಾಕ್‌ಡೌನ್ ದಿನಗಳನ್ನು ನೆನಪಿಸಿದವು.

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮೇ 10ರ ಭಾನುವಾರದಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದಿನಲ್ಲಿ ಒಂದು ವಿಭಿನ್ನವಾದ ಹೇಳಿಕೆ ನೀಡಿದರು. ಮೋದಿಯವರ ಹೇಳಿಕೆ ಬಹುಮಟ್ಟಿಗೆ ಕೋವಿಡ್ ಲಾಕ್‌ಡೌನ್ ದಿನಗಳನ್ನು ನೆನಪಿಸಿದವು. ತೆಲಂಗಾಣದಲ್ಲಿ 9,400 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಆರಂಭಿಸುವ ಸಂದರ್ಭದಲ್ಲಿ, ಪ್ರಧಾನಿ ಪ್ರತಿಯೊಬ್ಬ ಭಾರತೀಯನಿಗೂ ಇಂಧನ ಬಳಕೆ, ಚಿನ್ನ ಖರೀದಿ, ಅಡುಗೆ ತೈಲ ಮತ್ತು ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಕನಿಷ್ಠ ಮುಂದಿನ ಒಂದು ವರ್ಷದ ಅವಧಿಗೆ ಕಡಿಮೆಗೊಳಿಸುವಂತೆ ಕರೆ ನೀಡಿದರು.

ಕಳೆದ 70ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಅಮೆರಿಕ - ಇರಾನ್ ಯುದ್ಧ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಗಂಭೀರ ದುಷ್ಪರಿಣಾಮ ಬೀರಿರುವುದು ಇದಕ್ಕೆ ಕಾರಣವಾಗಿದೆ. ದೇಶಪ್ರೇಮ ಎನ್ನುವುದು ದೇಶಕ್ಕಾಗಿ ಪ್ರಾಣ ಅರ್ಪಿಸುವುದು ಮಾತ್ರವಲ್ಲ, ಬದಲಿಗೆ ಕಷ್ಟಕರ ಸಂದರ್ಭಗಳಲ್ಲಿ ಜವಾಬ್ದಾರಿಯುತವಾಗಿ ಜೀವಿಸುವುದೂ ಹೌದು ಎಂದು ಪ್ರಧಾನಿ ಸಂದೇಶ ನೀಡಿದ್ದಾರೆ.

ಇಂಧನ ಯಾಕೆ ಮುಖ್ಯ?

ಭಾರತದ ಬಳಿ ತನ್ನ ಯಾವುದೇ ದೊಡ್ಡ ತೈಲ ನಿಕ್ಷೇಪವಿಲ್ಲ. ನಾವು 88%ಕ್ಕಿಂತಲೂ ಹೆಚ್ಚಿನ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತೇವೆ. ಯುದ್ಧದ ಪರಿಣಾಮವಾಗಿ, ಜಗತ್ತಿನ ಬಹುತೇಕ 20% ಕಚ್ಚಾ ತೈಲವನ್ನು ಸಾಗಿಸುವ ಪ್ರಮುಖ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿ ಎರಡು ತಿಂಗಳ ಅವಧಿಯಿಂದ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ, ಯುದ್ದಕ್ಕೆ ಮುನ್ನ ಪ್ರತಿ ಬ್ಯಾರಲ್‌ಗೆ 70 ಡಾಲರ್ ಬೆಲೆ ಹೊಂದಿದ್ದ ಜಾಗತಿಕ ತೈಲ ದರ ಈಗ 126 ಡಾಲರ್ ತಲುಪಿದೆ.

ಸಾರ್ವಜನಿಕರನ್ನು ಬೆಲೆ ಏರಿಕೆಯ ಬಿಸಿಯಿಂದ ರಕ್ಷಿಸುವ ಸಲುವಾಗಿ, ಇಂಡಿಯನ್ ಆಯಿಲ್, ಬಿಪಿಸಿಎಲ್, ಮತ್ತು ಎಚ್‌ಪಿಸಿಎಲ್‌ನಂತಹ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳೂ ಬಹುತೇಕ 30,000 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಸಹಿಸಿಕೊಳ್ಳುತ್ತಿವೆ. ಭಾರತ ಪ್ರತಿದಿನವೂ 1,600ರಿಂದ 1,700 ಕೋಟಿ ರೂಪಾಯಿಗಳನ್ನು ಪ್ರತಿದಿನವೂ ವೆಚ್ಚ ಮಾಡುತ್ತಿದ್ದು, ಜನ ಸಾಮಾನ್ಯರ ಮೇಲೆ ಹೊರೆಯಾಗದಂತೆ ತಡೆಯುತ್ತಿದೆ. ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24 ರೂಪಾಯಿ ಮತ್ತು ಡೀಸೆಲ್ ಮೇಲೆ 30 ರೂಪಾಯಿ ಭರಿಸುತ್ತಿದೆ.

ಆದ್ದರಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರೂ ಮೆಟ್ರೋ ರೈಲುಗಳನ್ನು ಬಳಸಿ, ಕಾರ್ ಪೂಲಿಂಗ್ ನಡೆಸಿ, ವಿದ್ಯುತ್ ಚಾಲಿತ ವಾಹನಗಳನ್ನು ಬಳಸಿ, ಮನೆಯಿಂದಲೇ ಕೆಲಸ ಮಾಡಿ, ಆನ್‌ಲೈನ್ ಮೀಟಿಂಗ್ ಮತ್ತು ವೀಡಿಯೋ ಕಾನ್ಫರೆನ್ಸ್ ನಡೆಸಿ ಎಂದು ಕರೆ ನೀಡಿದ್ದು, ಇದು ಕೋವಿಡ್ ಅವಧಿಯನ್ನು ನೆನಪಿಸುತ್ತಿದೆ. ಥೈಲ್ಯಾಂಡ್, ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶಗಳು ಈಗಾಗಲೇ ಇಂತಹ ಕ್ರಮಗಳನ್ನು ಕೈಗೊಂಡಿವೆ. ಇಷ್ಟಾದರೂ, ಮೇ 15ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 4-5 ರೂಪಾಯಿ, ಎಲ್‌ಪಿಜಿ ಸಿಲಿಂಡರ್ 40-50 ರೂಪಾಯಿ ಹೆಚ್ಚಾಗಬಹುದು ಎನ್ನಲಾಗಿದೆ.

ಚಿನ್ನದ ಕಥೆ

ಭಾರತ ಜಗತ್ತಿನಲ್ಲೇ ಚಿನ್ನವನ್ನು ಅತ್ಯಂತ ಹೆಚ್ಚು ಇಷ್ಟಪಡುವ ದೇಶ. ನಾವು ಪ್ರತಿವರ್ಷವೂ 700-800 ಟನ್ ಚಿನ್ನ ಬಳಸುತ್ತೇವೆ. ಆದರೆ, ಭಾರತದಲ್ಲಿ ಉತ್ಪಾದನೆಯಾಗುವುದು ಕೇವಲ 1-2 ಟನ್‌ಗಳಷ್ಟು ಚಿನ್ನ ಮಾತ್ರ. ಮಿಕ್ಕುಳಿದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಕೇವಲ ಕಳೆದ ಒಂದು ವರ್ಷದಲ್ಲಿ, ಭಾರತ ಚಿನ್ನದ ಆಮದಿಗೆ ಬಹುತೇಕ 72 ಬಿಲಿಯನ್ ಡಾಲರ್ (ಅಂದಾಜು 6.7 ಲಕ್ಷ ಕೋಟಿ ರೂಪಾಯಿ) ವೆಚ್ಚ ಮಾಡಿದ್ದು, ಇದು ಪ್ರತಿ ತಿಂಗಳು 55,800 ಕೋಟಿ ರೂಪಾಯಿಯಷ್ಟಿತ್ತು. ಕುಟುಂಬಗಳು ಮದುವೆಗಾಗಿ ಆಮದು ಚಿನ್ನವನ್ನು ಖರೀದಿಸಿದಾಗ, ಡಾಲರ್ ಭಾರತದಿಂದ ಹೊರಹೋಗಿ, ರೂಪಾಯಿ ದುರ್ಬಲವಾಗಿ, ಚಿನ್ನ ಇನ್ನಷ್ಟು ದುಬಾರಿಯಾಗುತ್ತದೆ.

ಇದೊಂದು ವಿಷಮ ಚಕ್ರದಂತೆ ಮುಂದುವರಿಯುತ್ತದೆ. ಹೆಚ್ಚಿನ ಬೆಲೆಯ ಕಾರಣದಿಂದಾಗಿ ಚಿನ್ನದ ಆಮದು ಈಗಾಗಲೇ ಕಡಿಮೆಯಾಗಿದ್ದು, ಜನವರಿ 2026ರಲ್ಲಿ ಬಹುತೇಕ 100 ಟನ್‌ಗಳಿಂದ ಎಪ್ರಿಲ್ 2026ರಲ್ಲಿ ಕೇವಲ 15 ಟನ್‌ಗಳಿಗೆ ಇಳಿಕೆ ಕಂಡಿದ್ದು, ಕಳೆದ 30 ವರ್ಷಗಳಲ್ಲಿ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ. ಆದ್ದರಿಂದಲೇ ಪ್ರಧಾನಿ ಒಂದು ವರ್ಷ ಕಾಲ ಚಿನ್ನ ಖರೀದಿ ನಡೆಸದಂತೆ ಕರೆ ನೀಡಿದ್ದಾರೆ. ಚಿನ್ನ ಖರೀದಿಯನ್ನು ನಿರುತ್ತೇಜಿಸಲು ಸರ್ಕಾರ ಈಗಾಗಲೇ ಇರುವ 6% ಆಮದು ದರವನ್ನು ಇನ್ನಷ್ಟು ಹೆಚ್ಚಿಸಬಹುದು. ಯಾವಾಗ ಆರ್‌ಬಿಐ ರಾಷ್ಟ್ರೀಯ ನಿಧಿಗಾಗಿ ಚಿನ್ನವನ್ನು ಖರೀದಿಸುತ್ತದೋ (ಈಗ 880 ಟನ್, ವಿದೇಶೀ ವಿನಿಮಯದ 16.7%), ಅದು ದೇಶವನ್ನು ಭದ್ರಪಡಿಸುತ್ತದೆ. ಆದರೆ, ಜನಸಾಮಾನ್ಯರು ಆಮದು ಚಿನ್ನವನ್ನು ಖರೀದಿಸುವಾಗ, ಡಾಲರ್ ಹೊರಹೋಗಿ, ರುಪಾಯಿ ದುರ್ಬಲಗೊಳ್ಳುತ್ತದೆ.

ಖಾದ್ಯ ತೈಲ - ಪ್ರತಿದಿನದ ಹೊರೆ

ಅಡುಗೆ ಎಣ್ಣೆ ಭಾರತದ ಪ್ರತಿ ಅಡುಗೆಮನೆಗೂ ಪ್ರತಿದಿನವೂ ಬೇಕಾಗುತ್ತದೆ. ಭಾರತ ಪಾಮ್ ಎಣ್ಣೆಯನ್ನು ಇಂಡೋನೇಷ್ಯಾ ಮತ್ತು ಮಲೇಷ್ಯಾಗಳಿಂದ ಆಮದು ಮಾಡಿಕೊಂಡರೆ, ಸೂರ್ಯಕಾಂತಿ ಎಣ್ಣೆಯನ್ನು ರಷ್ಯಾ ಮತ್ತು ಉಕ್ರೇನಿನಿಂದ ಖರೀದಿಸುತ್ತದೆ. ಚಿನ್ನ ಅಥವಾ ಪೆಟ್ರೋಲಿನಂತೆ ಅಡುಗೆ ಎಣ್ಣೆ ಖರೀದಿಯನ್ನು ಮುಂದೂಡಲು ಅಥವಾ ತಪ್ಪಿಸಲು ಸಾಧ್ಯವಿಲ್ಲ. ಪ್ರತಿಯೊಂದು ಕುಟುಂಬವೂ 10% ಅಡುಗೆ ಎಣ್ಣೆಯನ್ನು ಕಡಿಮೆಗೊಳಿಸಿದರೆ, ಬಹುದೊಡ್ಡ ವಿದೇಶೀ ವಿನಿಮಯ ಉಳಿಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಇದನ್ನು ದುಪ್ಪಟ್ಟು ದೇಶಪ್ರೇಮ ಎಂದು ಪ್ರಧಾನಿ ಕರೆದಿದ್ದು, ಕಡಿಮೆ ತೈಲದ ಆಹಾರದಿಂದ ಬೊಜ್ಜು ಬೆಳೆಯುವುದು ಮತ್ತು ಆರೋಗ್ಯ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ. ಇದು ಕುಟುಂಬದ ಆರೋಗ್ಯ ವೃದ್ಧಿಸಿ ಮತ್ತು ದೇಶದ ವೆಚ್ಚವನ್ನೂ ಕಡಿಮೆಗೊಳಿಸುತ್ತದೆ.

ರಸಗೊಬ್ಬರ ಮತ್ತು ಕೃಷಿ

ಕೃಷಿ ಕ್ಷೇತ್ರದಲ್ಲಿ ಭಾರತ ಅಪಾರ ಹಣ ಖರ್ಚು ಮಾಡುತ್ತದೆ. ಭಾರತ ಅಪಾರ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತದೆ. ಪ್ರಧಾನಿ ಮೋದಿ ರೈತರಿಗೆ 20ರಿಂದ 50% ರಸಗೊಬ್ಬರ ಬಳಕೆಯನ್ನು ಕಡಿಮೆಗೊಳಿಸುವಂತೆ ಕರೆ ನೀಡಿದ್ದು, ನೈಸರ್ಗಿಕ ಮತ್ತು ಸಾವಯವ ಕೃಷಿ ಮಾಡುವಂತೆ ಕರೆ ನೀಡಿದ್ದಾರೆ. ಇದು ವಿದೇಶೀ ವಿನಿಮಯವನ್ನು ಉಳಿಸಿ, ಮಣ್ಣಿನ ಆರೋಗ್ಯ ರಕ್ಷಿಸಿ, ಪರಿಸರವನ್ನು ಮುಂದಿನ ತಲೆಮಾರುಗಳಿಗೆ ಉಳಿಸುತ್ತದೆ.

ದೊಡ್ಡ ಚಿತ್ರಣ

ಇಲ್ಲೊಂದು ಒಳ್ಳೆಯ ಸುದ್ದಿ ಎಂದರೆ, ಭಾರತದ ವಿದೇಶೀ ವಿನಿಮಯ ಪ್ರಮಾಣ ಮಾರ್ಚ್ 2026ರ ವೇಳೆಗೆ 691.11 ಬಿಲಿಯನ್ ಡಾಲರ್ (ಅಂದಾಜು 64.27 ಲಕ್ಷ ಕೋಟಿ ರೂಪಾಯಿ) ಇದ್ದು, ಇದು 11 ತಿಂಗಳ ಆಮದಿಗೆ ಸಾಕಾಗುವಷ್ಟಿತ್ತು. ಆದರೆ, ಭಾರತಕ್ಕೆ ಒತ್ತಡ ಹೆಚ್ಚಾಗುತ್ತಿದ್ದು, ಕಳೆದ 10 ವಾರಗಳಲ್ಲಿ ಆಮದು ದುಬಾರಿಯಾಗಿ, ರೂಪಾಯಿ ಮೌಲ್ಯ ಕಡಿಮೆಯಾಗಿರುವುದರಿಂದ ಬಹುತೇಕ 1 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಿದೆ. ಸರ್ಕಾರ ವ್ಯಾಸಂಗ, ಪ್ರವಾಸ, ಅಥವಾ ಆಸ್ತಿಗಾಗಿ ಭಾರತೀಯರು ಪ್ರತಿ ವರ್ಷವೂ ವಿದೇಶಕ್ಕೆ 2,50,000 ಡಾಲರ್ (ಅಂದಾಜು 2.32 ಕೋಟಿ ರೂಪಾಯಿ) ಕಳುಹಿಸಲು ಇರುವ ಅನುಮತಿಯನ್ನು ಬಿಗಿಗೊಳಿಸುವ ಸಾಧ್ಯತೆಗಳಿವೆ. ಪ್ರಧಾನಿ ನರೇಂದ್ರ ಮೋದಿಯವರ ಸಂದೇಶ ಸ್ಪಷ್ಟ ಮತ್ತು ಸರಳವಾಗಿದೆ. ಈಗ ನಾವು ಜಾಗರೂಕವಾಗಿ ಜೀವಿಸಿ, ಬುದ್ಧಿವಂತಿಕೆಯಿಂದ ವೆಚ್ಚ ಮಾಡಿ, ಭಾರತೀಯ ನಿರ್ಮಾಣದ ವಸ್ತುಗಳನ್ನು ಆಯ್ಕೆ ಮಾಡುವ ಸಮಯ ಬಂದಿದೆ. ನಾವೆಲ್ಲರೂ ಒಂದೇ ದೇಶವಾಗಿ ನಿಲ್ಲಬೇಕಿದೆ. ಇಂದು ನಡೆಸುವ ಸಣ್ಣಪುಟ್ಟ ತ್ಯಾಗಗಳು ಭಾರತವನ್ನು ನಾಳೆ ಭದ್ರವಾಗಿಸಲಿವೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಏರ್ ಇಂಡಿಯಾದಿಂದ 1 ಸಾವಿರ ಸಿಬ್ಬಂದಿಗಳ ವಜಾ, ಭವಿಷ್ಯದಲ್ಲಿ ಕಷ್ಟದ ದಿನಗಳು ಬರದಂತೆ ಈ ನಿರ್ಧಾರವೆಂದ ಸಿಇಒ!
Thalapathy Vijay:‌ ತಪ್ಪಾದ ಮುಹೂರ್ತದಲ್ಲಿ ದಳಪತಿ ವಿಜಯ್‌ ಸಿಎಂ; 5 ವರ್ಷ ಕಂಪ್ಲೀಟ್‌ ಮಾಡಲ್ವಾ? ಜ್ಯೋತಿಷಿ ಏನಂದ್ರು?