
ನವದೆಹಲಿ (ಏ. 25): ಕೊರೋನಾ ವೈರಸ್ ಭಾರತಕ್ಕೆ ಸ್ವಾವಲಂಬನೆಯ ಪಾಠ ಕಲಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಕೊರೋನಾವನ್ನು ದೂರ ಮಾಡಲು ಗ್ರಾಮೀಣ ಭಾರತವು ‘2 ಅಡಿ ಅಂತರ’ (ಸಾಮಾಜಿಕ ಅಂತರ) ಕಾಯ್ದುಕೊಳ್ಳುವ ನೀತಿ ಆರಂಭಿಸಿದ್ದು, ಇದು ಪ್ರಶಂಸನೀಯ ವಿಚಾರ ಎಂದು ಹೇಳಿದ್ದಾರೆ.
ಕೊರೋನಾ ಹರಡುವ ಈ ಸಂದರ್ಭದಲ್ಲಿ ಜನರ ಕೌಶಲ್ಯ ಹಾಗೂ ಜ್ಞಾನದ ಪರೀಕ್ಷೆ ನಡೆದಿದೆ. ಆದರೆ ಭಾರತದ ಗ್ರಾಮಗಳು ಈ ನಿಟ್ಟಿನಲ್ಲಿ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿ ಕೊರೋನಾ ವಿರುದ್ಧ ಹೋರಾಡಿವೆ ಎಂದು ಮೋದಿ ಶ್ಲಾಘಿಸಿದ್ದಾರೆ.
ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ಗ ಗೌರಿ ಬಿದನೂರು ವಾಟದಹಳ್ಳಿ ಗ್ರಾಪಂ ಅಧ್ಯಕ್ಷ ಆಯ್ಕೆ
ಪಂಚಾಯ್ತಿ ದಿವಸದ ನಿಮಿತ್ತ ಗ್ರಾಮ ಪಂಚಾಯ್ತಿ ಸದಸ್ಯರ ಜತೆ ಮೋದಿ ಅವರು ಶುಕ್ರವಾರ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಅವರು, ಗ್ರಾಮಗಳು ತಮ್ಮ ಸಾಂಪ್ರದಾಯಿಕ ಮೌಲ್ಯಗಳು ಹಾಗೂ ತತ್ವಗಳನ್ನು ಪ್ರದರ್ಶಿಸಿ ವ್ಯಾಧಿಯ ವಿರುದ್ಧ ಹೋರಾಟ ನಡೆಸಿವೆ ಎಂದರು.
ಕೊರೋನಾದಿಂದ ಹಿಂದೆಂದೂ ಕಂಡು ಕೇಳರಿಯದ ಸವಾಲುಗಳು ಎದುರಾಗಿವೆ. ಆದರೆ ಇದು ಅನೇಕ ಹೊಸ ಪಾಠಗಳನ್ನೂ ಕಲಿಸಿದೆ. ಸ್ವಾವಲಂಬನೆ ಎಂಬುದು ಇದು ಕಲಿಸಿರುವ ದೊಡ್ಡ ಪಾಠ. ಗ್ರಾಮಗಳು ಕೂಡ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸ್ವಾವಲಂಬಿ ಆಗಿವೆ ಎಂದರು.
ಲಾಕ್‌ಡೌನ್ ಬಗ್ಗೆ ಪ್ರಸ್ತಾಪಿಸಿದ ಅವರು, ‘ಭಾರತ ಕೊರೋನಾ ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿಶ್ವವೇ ಶ್ಲಾಘಿಸಿದೆ. ತೊಂದರೆಗಳಿಗೆ ಬಲಿ ಆಗುವ ಬದಲು, ಲಭ್ಯ ಸಂಪನ್ಮೂಲಗಳಲ್ಲೇ ಜನರು ಸವಾಲು ಸ್ವೀಕರಿಸುತ್ತಿದ್ದಾರೆ’ ಎಂದು ಕೊಂಡಾಡಿದರು.
‘ಕೊರೋನಾ ಎಂಬುದು ತಾನಾಗೇ ಅಂಟಿಕೊಳ್ಳಲ್ಲ. ನೀವು (ಜನ) ನಿರ್ಲಕ್ಷ್ಯ ಮಾಡಿದರೆ ಅದು ಮನೆ ಸೇರಿಕೊಳ್ಳುತ್ತದೆ. ಕೊರೋನಾ ಬಗ್ಗೆ ಹರಡಿರುವ ವದಂತಿ ಹಾಗೂ ತಪ್ಪುಕಲ್ಪನೆ ಹೋಗಲಾಡಿಸಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.
‘ಸ್ವಾಸ್ಥ್ಯ ಕಾಪಾಡಲು ಉತ್ತಮ ಆಹಾರ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ತುಳಸಿ ಹಾಗೂ ದಾಲ್ಚಿನ್ನಿ ಹಾಕಿ ತಯಾರಿಸುವ ‘ಕಢಾ’ (ಕಷಾಯ) ಕುಡಿಯಬೇಕು’ ಎಂದು ಮೋದಿ ಕರೆ ನೀಡಿದರು.
ಈ ವೇಳೆ, ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು ಕೊರೋನಾ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಆ್ಯಪ್ ಬಿಡುಗಡೆ:
ಮೋದಿ ಅವರು ಇದೇ ಸಂದರ್ಭದಲ್ಲಿ ಇ ಗ್ರಾಮಸ್ವರಾಜ್ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದರು. ಇದರಿಂದ ಗ್ರಾಮ ಪಂಚಾಯಿತಿಗಳು ಡಿಜಿಟಲ್ ವಿಧಾನದಲ್ಲಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗಲಿದೆ. ಇದೇ ವೇಳೆ, ಗ್ರಾಮೀಣ ಪ್ರದೇಶದ ಜನವಸತಿ ಪ್ರದೇಶಗಳನ್ನು ಡ್ರೋನ್ ಮೂಲಕ ಗುರುತಿಸಿ, ಜಾಗದ ವಿಸ್ತೀರ್ಣದ ಅಳತೆ ಮಾಡುವ ಸ್ವಮಿತ್ವ ಯೋಜನೆಯನ್ನೂ ಮೋದಿ ಉದ್ಘಾಟಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ