
ನವದೆಹಲಿ (ಜು.24) ಪೇಪರ್ ಲೀಕ್, ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ಕಾವು ತೀವ್ರಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮಧ್ಯರಾತ್ರಿ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಭರ್ಜರಿ ಲೈಕ್ಸ್, ವೀಕ್ಷಣೆ, ಕಮೆಂಟ್ಸ್ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಂದು ತಡ ರಾತ್ರಿ ಪ್ರಧಾನಿ ಮೋದಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಥಾಂಕ್ಯೂ ಫ್ರೆಂಡ್ಸ್ ಎಂದು ಆರಂಭಿಸುತ್ತಾ ಮಹತ್ವದ ಸಂದೇಶ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿ ಹೊಸ ಸೆಲ್ಫಿ ವೀಡಿಯೋ ಶೇರ್ ಮಾಡುವ ಮೂಲಕ ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ಹಿಂದಿನ ವೀಡಿಯೋಗೆ ಲಕ್ಷಾಂತರ ಯುವಕರು ವ್ಯಕ್ತಪಡಿಸಿದ ಅಭೂತಪೂರ್ವ ಬೆಂಬಲ ಹಾಗೂ ನೀಡಿದ ಸಕಾರಾತ್ಮಕ ಸಲಹೆಗಳನ್ನು ಪ್ರಧಾನಿ ಮುಕ್ತವಾಗಿ ಶ್ಲಾಘಿಸಿದ್ದಾರೆ.
ನಿಮ್ಮ ಜೊತೆ ತಡ ರಾತ್ರಿ ಮಾತನಾಡುವ ಅವಕಾಶ ನಿನ್ನೆ ಲಭಿಸಿತ್ತು ಎಂದು ಮೋದಿ ಮಾತು ಆರಂಭಿಸಿದ್ದಾರೆ. ಥ್ಯಾಂಕ್ ಯು ಫ್ರೆಂಡ್ಸ್, ನಾನು ಪೋಸ್ಟ್ ಮಾಡಿದ್ದ ವೀಡಿಯೋಗೆ ನೀವು ತೋರಿದ ಸ್ಪಂದನೆ ಮತ್ತು ನೀಡಿದ ಮೌಲ್ಯಯುತ ಸಲಹೆಗಳಿಗೆ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಈ ಪ್ರೀತಿ ಮತ್ತು ಬೆಂಬಲ ಹೀಗೆಯೇ ಮುಂದುವರಿಯಲಿದೆ. ನಮ್ಮ ನಡುವಿನ ನಂಟು ಮತ್ತಷ್ಟು ಗಟ್ಟಿಯಾಗಲಿದೆ ಎಂದು ಮೋದಿ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ.
ಮೋದಿ ಎರಡನೇ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ನಿಮಿಷಘಲ್ಲಿ 2 ಮಿಲಿಯನ್ ಲೈಕ್ಸ್ ಪಡೆದಿದೆ. ಕ್ಷಣಕ್ಷಣಕ್ಕೂ ಮೋದಿ ವಿಡಿಯೋ ವೀಕ್ಷಣೆ ಲಕ್ಷ ಲಕ್ಷ ಸಂಖ್ಯೆ ಹೆಚ್ಚುತ್ತಿದೆ. ಈ ವಿಡಿಯೋಗೂ ಭರ್ಜರಿ ಕಮೆಂಟ್ಸ್ ವ್ಯಕ್ತವಾಗುತ್ತಿದೆ. ಇದೀಗ ಮೋದಿ ಇನ್‌ಸ್ಟಾಗ್ರಾಂ ಮೂಲಕ ಜೆನ್‌ಝಿ ಸಮೂಹವನ್ನು ರೀಚ್ ಆಗುತ್ತಿರುವುದು ಮಾತ್ರವಲ್ಲ, ನಿರಂತರ ಸಂಪರ್ಕದಲ್ಲಿರುವಂತೆ ಮಾಡಿದ್ದಾರೆ.
ಜುಲೈ 23ರ ತಡರಾತ್ರಿ ಇನ್‌ಸ್ಟಾಗ್ರಾಂ ಮೂಲಕ ಸೆಲ್ಫಿ ವಿಡಿಯೋ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆ ಪತ್ರಿಕೆ ಸೋರಿಕೆ ಸಾಮಾನ್ಯ ಹಾಗೂ ಸಣ್ಣ ವಿಷಯವಲ್ಲ. ಅತ್ಯಂತ ಗಂಭೀರ ವಿಷಯವಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದಿದ್ದರು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ತೀವ್ರ ಯಾತನೆಯಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಶೀಘ್ರದಲ್ಲೇ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ ಹಾಗೂ ಹೊಸ ಕಠಿಣ ಕಾನೂನನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿ ಭರವಸೆ ನೀಡಿದ್ದರು.
ಪ್ರಧಾನಿ ಮೋದಿ ಅವರ ಈ ವಿಶಿಷ್ಟ ಸೆಲ್ಫಿ ಶೈಲಿಯ ವೀಡಿಯೋಗಳು ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಯುವಜನತೆ ತಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸಕಾರಾತ್ಮಕ ಚರ್ಚೆಗೆ ಕಾರಣವಾಗಿದೆ. ದೇಶಾದ್ಯಂತ ನೀಟ್ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿಯವರ ಈ ಸರಣಿ ವೀಡಿಯೋ ಸಂದೇಶಗಳು ಭಾರೀ ರಾಜಕೀಯ ಹಾಗೂ ಸಾರ್ವಜನಿಕ ಗಮನ ಸೆಳೆದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ