ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರೆ ಸೇವಿಸಿ ನಿದ್ರೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದರು.
ಜೈಪುರ (ಏ.05): ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರೆ ಸೇವಿಸಿ ನಿದ್ರೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಯೋಚಿಸದೇ ಗಾಂಧಿ ಕುಟುಂಬವನ್ನು ನಿಂದಿಸುತ್ತಾರೆ. 56 ಇಂಚಿನ ಎದೆಯಿದೆ, ಹೆದರುವುದಿಲ್ಲ ಎಂದು ಮೋದಿ ಹೇಳುತ್ತಾರೆ. ನಿಮಗೆ ಭಯವಿಲ್ಲದಿದ್ದರೆ ನಮ್ಮ ಭೂಮಿಯನ್ನು ಚೀನಾಕ್ಕೆ ಏಕೆ ಬಿಟ್ಟಿದ್ದೀರಿ. ಅವರು ಒಳಗೆ ಬರುತ್ತಿದ್ದಾರೆ, ನೀವು ಮಲಗುತ್ತಿದ್ದೀರಿ. ನಿದ್ರೆಮಾತ್ರೆ ತೆಗೆದುಕೊಂಡಿದ್ದೀರಾ? ಮೋದಿ ಯಾವಾಗಲೂ ಸುಳ್ಳು ಹೇಳುತ್ತಿರುತ್ತಾರೆ ಸುಳ್ಳುಗಾರರ ಸರದಾರ ಎಂದು ಹೇಳಿದರು.
ಇಂಡಿಯಾ ಕೂಟ ರಣಕಹಳೆ: ಲೋಕಸಭಾ ಚುನಾವಣೆ ಕಾವೇರಿರುವ ನಡುವೆಯೇ ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿರುವ ಇಂಡಿಯಾ ಮೈತ್ರಿಕೂಟದ 27 ರಾಜಕೀಯ ಪಕ್ಷಗಳು ‘ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಸಲುವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕಬೇಕು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಇಂಡಿಯಾ ಕೂಟವನ್ನು ಆಯ್ಕೆ ಮಾಡಿ ಸಂವಿಧಾನ ರಕ್ಷಿಸಬೇಕು ಎಂದು ಕರೆಕೊಟ್ಟಿವೆ. ಅಲ್ಲದೆ ಚುನಾವಣಾ ಆಯೋಗ ಕೂಡಲೇ ಮಧ್ಯಪ್ರವೇಶಿಸಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿವೆ.
ಕಳೆದ ಮಾ.17ರಂದು ಮುಂಬೈನಲ್ಲಿ ಬೃಹತ್ ಸಮಾವೇಶದ ಮೂಲಕ ಲೋಕಸಭಾ ಪ್ರಚಾರಕ್ಕೆ ಚಾಲನೆ ನೀಡಿದ್ದ ಮೈತ್ರಿಕೂಟದ ಪಕ್ಷಗಳು, ಭಾನುವಾರ ನವದೆಹಲಿ ರಾಮ್‌ಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದವು. ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಷದಂತಿವೆ. ಅದರ ರುಚಿ ನೋಡಬೇಡಿ. ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು. ಇದು ಪ್ರಜಾಪ್ರಭುತ್ವ, ದೇಶ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆ.
ಸಿಎಎ ಜಾರಿ ‘ಮೋದಿ ಗ್ಯಾರಂಟಿ’: ಪ್ರಧಾನಿ ನರೇಂದ್ರ ಮೋದಿ ಗುಡುಗು
ಇಬ್ಬರು ಸಿಎಂಗಳ ಬಂಧನದಿಂದ ಪ್ರಜಾಪ್ರಭುತ್ವಕ್ಕೆ ಇರುವ ಬೆದರಿಕೆ ಸಾಬೀತಾಗಿದೆ. ನಾವು ಒಗ್ಗಟ್ಟಾದರೆ ಮಾತ್ರ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯ, ಪರಸ್ಪರ ಹೊಡೆದಾಡಿಕೊಂಡರೆ ಯಶಸ್ವಿಯಾಗಲ್ಲ’ ಎಂದು ಹೇಳಿದರು. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್‌ಫಿಕ್ಸಿಂಗ್‌ಗೆ ಯತ್ನಿಸುತ್ತಿದ್ದಾರೆ. ಒಂದು ವೇಳೆ ಈ ಸಾಹಸದ ಮೂಲಕ ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಅವರು ಸಂವಿಧಾನವನ್ನು ಬದಲಾಯಿಸಲಿದ್ದಾರೆ, ಬಳಿಕ ದೇಶದ ಕಥೆ ಮುಗಿದು ಹೋಗಲಿದೆ’ ಎಂದು ಆರೋಪಿಸಿದರು.