ಬಿಜೆಪಿ ಕಾರ್ಯಕರ್ತರಿಗೆ 5 ಟಾಸ್ಕ್‌ ನೀಡಿದ ಮೋದಿ!

By Kannadaprabha NewsFirst Published Apr 7, 2020, 7:37 AM IST
Highlights

ಬಿಜೆಪಿ ಕಾರ್ಯಕರ್ತರಿಗೆ 5 ಟಾಸ್ಕ್‌ ನೀಡಿದ ಮೋದಿ|  ಆಹಾರ, ಮಾಸ್ಕ್‌ ಹಂಚುವ ಟಾಸ್ಕ್‌| ಸರ್ಕಾರಕ್ಕೂ ದೇಣಿಗೆ ಕೊಡಿಸುವ ಜವಾಬ್ದಾರಿ|  ಬಿಜೆಪಿ 40ನೇ ಸಂಸ್ಥಾಪನಾ ದಿನ ಅಂಗವಾಗಿ ಮೋದಿ ಹೇಳಿಕೆ| ಕೊರೋನಾ ವೈರಸ್‌ ವಿರುದ್ಧದ ಹೋರಾಟ ಸುದೀರ್ಘ, ಆದರೂ ಗೆಲ್ಲುತ್ತೇವೆ-ಪ್ರಧಾನಿ ವಿಶ್ವಾಸ

ನವದೆಹಲಿ(ಏ.07): ಮಾರಕ ಕೊರೋನಾ ವೈರಸ್‌ ವಿರುದ್ಧದ ಹೋರಾಟ ಸುದೀರ್ಘವಾಗಿರಲಿದೆ. ಇದರಲ್ಲಿ ಭಾರತ ಜಯಿಸಲಿದೆ. ಹೀಗಾಗಿ ಜನರು ನಿರಾಶರಾಗಬಾರದು. ಸೋತ ಮನೋಭಾವ ಬೆಳೆಸಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ಮಾಡಿದ್ದಾರೆ. ಇದೇ ವೇಳೆ, ಕೊರೋನಾ ವಿರುದ್ಧದ ಹೋರಾಟದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಳಸಿಕೊಳ್ಳಲು ಐದು ಪ್ರಮುಖ ಹೊಣೆಗಳನ್ನು ಅವರಿಗೆ ನೀಡಿದ್ದಾರೆ.

"

ಬಿಜೆಪಿಯ 40ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಪ್ರಯತ್ನಗಳು ವಿಶ್ವಕ್ಕೇ ಮಾದರಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿದೇಶೀ ನಾಯಕರು ಕೂಡ ಭಾರತದ ಯತ್ನವನ್ನು ಶ್ಲಾಘಿಸಿದ್ದಾರೆ’ ಎಂದರು.

ಒಪ್ಪತ್ತು ಊಟ ಬಿಡಿ, ಹಸಿದವರಿಗೆ ಸಾಂತ್ವನ ಹೇಳಿ: ಬಿಜೆಗರಿಗೆ ನಡ್ಡಾ ಕರೆ

ಇದೇ ವೇಳೆ, ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಜನಸೇವೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಕರೆ ನೀಡಿದ ಅವರು, 5 ಜವಾಬ್ದಾ​ರಿ​ಗ​ಳನ್ನು ನೀಡಿ​ದರು.

1 ಪ್ರತಿ ಬಿಜೆಪಿ ಕಾರ್ಯಕರ್ತರು ಬಡವರಿಗೆ ಆಹಾರ ಹಾಗೂ ಪಡಿತರವನ್ನು ಸಾಧ್ಯವಾದಷ್ಟುಹಂಚಬೇಕೆಂಬುದು ನನ್ನ ಕೋರಿಕೆ. ಇದು ನಿರಂತರ ಸೇವೆ ಆಗಬೇಕು.

2 ಬಟ್ಟೆಯ ಮಾಸ್ಕ್‌ ತಯಾರಿಸಿ ಇತರರಿಗೆ ಹಂಚಬೇಕು. ಇತರರಿಗೆ ಸಹಾಯ ಮಾಡಲು ಹೋದಾಗ ಮಾಸ್ಕ್‌ ಧರಿಸಬೇಕು.

3 ಕೊರೋನಾ ವಿರುದ್ಧ ವೈದ್ಯರು-ನರ್ಸ್‌ಗಳು, ಸ್ವಚ್ಛತಾ ಕಾರ್ಮಿಕರು, ಪೊಲೀಸರು, ಬ್ಯಾಂಕ್‌-ಅಂಚೆ ಕಚೇರಿ ನೌಕರರು ಹಾಗೂ ಇತರ ಸರ್ಕಾರಿ ನೌಕರರು ಹೋರಾಡುತ್ತಿದ್ದಾರೆ. ಈ 5 ನೌಕರ ವರ್ಗಕ್ಕೆ ಧನ್ಯವಾದ ಸಮರ್ಪಿಸಲು ಪ್ರತಿ ಕುಟುಂಬಕ್ಕೂ ಪ್ರಶಂಸಾ ಪತ್ರ ಬರೆಯುವಂತೆ ಕೇಳಿಕೊಳ್ಳಬೇಕು.

4 ಕೊರೋನಾ ವಿರುದ್ಧ ಹೋರಾಡಲು ‘ಆರೋಗ್ಯ ಸೇತು’ ಆ್ಯಪ್‌ ಸಿದ್ಧಪಡಿಸಲಾಗಿದೆ. ಜನರಿಗೆಲ್ಲ ಆರೋಗ್ಯ ಸೇತು ಆ್ಯಪ್‌ ಬಗ್ಗೆ ತಿಳಿಹೇಳಬೇಕು. ಪ್ರತಿ ಕಾರ್ಯಕರ್ತನೂ ಕನಿಷ್ಠ 40 ಜನರ ಮೊಬೈಲ್‌ನಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಆಗುವಂತೆ ನೋಡಿಕೊಳ್ಳಬೇಕು.

5 ಪಿಎಂ ಕೇರ್ಸ್‌ ಫಂಡ್‌ಗೆ ಲಕ್ಷಾಂತರ ಜನರು ದೇಣಿಗೆ ನೀಡುತ್ತಿದ್ದಾರೆ. ಪ್ರತಿ ಬಿಜೆಪಿ ಕಾರ್ಯಕರ್ತರು ಕನಿಷ್ಠ 40 ಮಂದಿಯಿಂದ ದೇಣಿಗೆ ಕೊಡಲು ಸಹಕರಿಸಬೇಕು ಎಂದು ಕೋರಿದರು.

ಸಂಸದರ ವೇತನ ಕಟ್: ಕ್ಯಾಬಿನೆಟ್ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್!

ಅಭೂತಪೂರ್ವ ಸ್ಪಂದನೆ:

‘ಭಾರತವು ಕೊರೋನಾದ ಗಂಭೀರತೆಯನ್ನು ಅರಿತ ದೇಶಗಳಲ್ಲಿ ಒಂದು. ಸಕಾಲಕ್ಕೆ ಕ್ರಮಗಳನ್ನು ಕೈಗೊಂಡಿದೆ. ಒಂದರ ಮೇಲೊಂದರಂತೆ ನಿರ್ಧಾರಗಳನ್ನು ಕೈಗೊಂಡು ಅವನ್ನು ಜಾರಿಗೊಳಿಸಿದೆ’ ಎಂದು ಮೋದಿ ಅವರು ಹೇಳಿದರು. ಲಾಕ್‌ಡೌನ್‌ಗೆ ಜನ ಸ್ಪಂದನೆ ಅಭೂತಪೂರ್ವವಾಗಿದೆ. ಲಾಕ್‌ಡೌನ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

‘ಕೊರೋನಾ ವಿರುದ್ಧದ ಸಮರ ಸುದೀರ್ಘವಾಗಿರಲಿದೆ’ ಅವರು ಎಚ್ಚರಿಸಿದ ಅವರು, ‘ಭಾನುವಾರದ ದೀಪ ಬೆಳಗುವ ತಮ್ಮ ಕರೆಗೆ ಸಿಕ್ಕ 130 ಕೋಟಿ ಜನರ ಸ್ಪಂದನೆಯು ಹೋರಾಟದ ಮುಂದಿನ ಹಂತಕ್ಕೆ ಜನರನ್ನು ಸಿದ್ಧಪಡಿಸಿದೆ. ನಾವು ಸೋತೆವು ಎಂಬ ಹತಾಶ ಭಾವನೆ ಬೇಡ. ಈ ಸುದೀರ್ಘ ಹೋರಾಟದಲ್ಲಿ ನಾವು ಗೆಲ್ಲಲೇಬೇಕು’ ಎಂದು ಕರೆ ನೀಡಿದರು.

click me!