ಭಾರತ- ಅಮೆರಿಕಾ ನಡುವಿನ ಬಾಂಧವ್ಯ ಇಡೀ ಜಗತ್ತಿಗೆ ಗೊತ್ತಿರುವಂತದ್ದು. ಇದೀಗ ಮೋದಿ ಹಾಗೂ ಬೈಡೆನ್ ನಡುವಿನ ಬಾಂಧವ್ಯ ಹೇಗಿರಲಿದೆ..? ಇದರಿಂದ ಭಾರತಕ್ಕೆ ಅನುಕೂಲವಾಗಲಿದೆಯಾ..? ನೋಡಬೇಕಿದೆ.
ನವದೆಹಲಿ (ಜ. 22): ಪಂಡಿತ್ ನೆಹರು ನಂತರ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರನ್ನು ಏಕವಚನದಲ್ಲಿ ‘ಬರಾಕ್’ ಎಂದು ಕೂಗಿ ಅಚ್ಚರಿ ಮೂಡಿಸಿದ್ದರು. ಆದರೆ ಅದೇ ಉತ್ಸಾಹದಲ್ಲಿ ಮೋದಿ ಕಳೆದ ವರ್ಷ ಹ್ಯೂಸ್ಟನ್‌ಗೆ ಹೋಗಿ ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂದಿದ್ದರು. ಇದು ಸರ್ಕಾರದ ವಿದೇಶಾಂಗ ಪರಿಣತರಿಗೆ ಬೇಸರ ತರಿಸಿತ್ತು. ಮತ್ತೊಂದು ದೇಶದ, ಅದೂ ಬಲಾಢ್ಯ ಅಮೆರಿಕದ ಆಂತರಿಕ ಚುನಾವಣೆಯ ಬಗ್ಗೆ ತನ್ನ ನಿಲುವು ಬಹಿರಂಗಪಡಿಸಿ, ಕೊನೆಗೆ ಆ ಅಭ್ಯರ್ಥಿ ಸೋತಿದ್ದರಿಂದ ಭಾರತಕ್ಕೆ ಮುಜುಗರ ಆಗಿದ್ದು ನಿಜ. ಆದರೆ ಈಗ ಬೈಡೆನ್ ಜೊತೆ ಮೋದಿ ಹೇಗೆ ಮುಂದುವರೆಯುತ್ತಾರೆ ಎನ್ನುವುದು ಕುತೂಹಲ. ಒಂದು ಒಳ್ಳೆಯ ಸಂಗತಿ ಎಂದರೆ ನಮಗೆಷ್ಟುಅಮೆರಿಕದ ಅವಶ್ಯಕತೆ ಇದೆಯೋ, ಅಮೆರಿಕಕ್ಕೂ ನಮ್ಮ ಅಗತ್ಯ ಅಷ್ಟೇ ಇದೆ.
ಗಡ್ಕರಿ ಚಾಲಕರ ಕಣ್ಣು ಪರೀಕ್ಷೆ
undefined
ನಿತಿನ್ ಗಡ್ಕರಿ ತಮ್ಮ ಮನಸ್ಸಿನಲ್ಲಿ ಇದ್ದುದನ್ನು ನೇರವಾಗಿ ಹೇಳುವುದರಲ್ಲಿ ನಿಸ್ಸೀಮರು. ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಗಡ್ಕರಿ, ‘ಸರ್ಕಾರಿ ಕಾರುಗಳ ಅಪಘಾತಕ್ಕೆ ಬಹುತೇಕ ಚಾಲಕರಿಗೆ ಮೋತಿ ಬಿಂದು ಕಾರಣ. ನನ್ನ ಇಲಾಖೆಯ 70 ಪ್ರತಿಶತ ಚಾಲಕರು ಸರ್ಕಾರಿ ವೈದ್ಯರಿಂದ ಸುಳ್ಳು ಪ್ರಮಾಣ ಪತ್ರ ತರುತ್ತಾರೆ. ಅವರಿಗೆಲ್ಲ ಖಾಸಗಿ ವೈದ್ಯರಿಂದ ಪರೀಕ್ಷೆ ಕಡ್ಡಾಯ ಮಾಡಬೇಕು. ರಾಜನಾಥ್ ಸಿಂಗ್ ಅವರೇ ಎಚ್ಚರವಾಗಿರಿ’ ಎಂದು ಹೇಳಿದರು. ವೇದಿಕೆ ಮೇಲಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಡಬಡಾಯಿಸಿ ಕಾರ್ಯದರ್ಶಿಗಳಿಂದ ಅಲ್ಲೇ ವರದಿ ತರಿಸಿಕೊಂಡು ನನ್ನ ಚಾಲಕರು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ಹೇಳಬೇಕಾಯಿತು.
ಅಮೆರಿಕಾದಲ್ಲಿ ಹೊಸಪರ್ವ, ಟ್ರಂಪ್ ಮಾಡಿದ ಭಾನಗಡಿ ಬೈಡೆನ್ ಸರಿ ಮಾಡ್ತಾರಾ..?
ಉಸ್ತುವಾರಿ ಶೈಲಿ ಹೇಗಿರಬೇಕು?
ಈ ಹಿಂದೆ ರಾಜ್ಯ ಬಿಜೆಪಿ ಉಸ್ತುವಾರಿ ಆಗಿದ್ದ ಮುರಳೀಧರ್ ರಾವ್ ಶೈಲಿ ಬಗ್ಗೆ ಬಿಜೆಪಿಯ ಯಡಿಯೂರಪ್ಪ, ಸಂತೋಷ್‌ರಿಂದ ಹಿಡಿದು ಪ್ರಹ್ಲಾದ್ ಜೋಶಿವರೆಗೆ ಎಲ್ಲರಿಗೂ ಬೇಸರ ಇತ್ತು. ಯಾರಾದರೂ ಭೇಟಿ ಆಗಲು ಬಂದರೆ ಮುರಳೀಧರ್ ರಾವ್ ತಾವೇ ಜಾಸ್ತಿ ಮಾತನಾಡುತ್ತಿದ್ದರು. ಆದರೆ ಅರುಣ್ ಸಿಂಗ್ ಹಾಗಲ್ಲವಂತೆ. ಯಾರೇ ಸಣ್ಣ ಕಾರ್ಯಕರ್ತ ಏನೇ ಹೇಳಿದರೂ ನೀಟಾಗಿ ಬರೆದುಕೊಳ್ಳುತ್ತಾರೆ. ಯಾರೇ ಹೋದರೂ ಭೇಟಿ ಆಗುತ್ತಾರೆ. ಅಂದಹಾಗೆ ರಾಜನಾಥ್ ಸಿಂಗ್ ಹೆಂಡತಿ, ಅರುಣ್ ಸಿಂಗ್ ಹೆಂಡತಿ ಅಕ್ಕ ತಂಗಿಯರು. ಮಥುರಾದಿಂದ ಟಿಕೆಟ್ ಕೇಳಿದ್ದ ಅರುಣ್ ಸಿಂಗ್ ಈಗ ಅಮಿತ್ ಶಾರ ಅತ್ಯಂತ ನಂಬಿಕಸ್ಥ. ಮೋದಿ-ಶಾ ಕಾಲದಲ್ಲಿ ಉಸ್ತುವಾರಿ ಅಂದರೆ ಹೀಗೆ ಇರಬೇಕು.
ಹನುಮಂತ ಕೊಟಬಾಗಿಯ ಕಥೆ
ಆರ್.ವಿ.ದೇಶಪಾಂಡೆ ಅವರ ಪರಮ ಶಿಷ್ಯನಾಗಿದ್ದ ಹನುಮಂತ ಕೊಟಬಾಗಿ ಅವರು ಹೇಗೋ ಉಮೇಶ್ ಕತ್ತಿ ಅವರನ್ನು ಹಿಡಿದು ಯಡಿಯೂರಪ್ಪ ಅವರಿಂದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡು ಒಂದು ತಿಂಗಳಾಗಿತ್ತು. ಗೂಟದ ಕಾರು, ಕಚೇರಿ ಮತ್ತು ಸಿಬ್ಬಂದಿ ಕೂಡ ಭಾಗ್ಯಕ್ಕೆ ಬಂದಿತ್ತು. ಆದರೆ ಕೋರ್ ಕಮಿಟಿಯಲ್ಲಿ ಪ್ರಹ್ಲಾದ್ ಜೋಶಿ ಭಾರೀ ಬೇಸರ ವ್ಯಕ್ತಪಡಿಸಿದಾಗ ದಿಲ್ಲಿಗೆ ಹೋಗುವ ಮುನ್ನಾ ದಿನ ಯಡಿಯೂರಪ್ಪನವರು ಕೊಟಬಾಗಿ ನೇಮಕ ರದ್ದುಪಡಿಸಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಜಿಗಿಯುವವರ ಕತೆಯೇ ಹೀಗೆ. ಬಿಜೆಪಿಯಲ್ಲೀಗ ಹೀಗೆ ಜಿಗಿದು ಬಂದವರ ಸಂಖ್ಯೆ ಬಹಳ ಇದೆ.
ತ್ರಿಪುರಾದ ಬಿಜೆಪಿ ಒಡೆದ ಮನೆ
ತ್ರಿಪುರಾದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಪೂರ್ತಿ ಒಡೆದ ಮನೆಯಾಗಿದೆ. ಒಗ್ಗಟ್ಟಿನಿಂದ ಕೆಲಸ ಮಾಡಿ ಸರ್ಕಾರ ತಂದಿದ್ದ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಮತ್ತು ಸುನೀಲ… ದೇವಧರ್ ಒಬ್ಬರ ಮುಖ ಇನ್ನೊಬ್ಬರು ನೋಡುವುದಿಲ್ಲ. ಹೀಗಾಗಿ ಶಾಸಕರ ನಡುವೆ ಕೂಡ ಜಗಳ ಶುರುವಾಗಿ ಸುನಿಲ… ದೇವಧರ್‌ರನ್ನು ಹೈಕಮಾಂಡ್ ಅಗರ್ತಲಾದಿಂದ ಆಂಧ್ರಕ್ಕೆ ರವಾನಿಸಿದೆ. ಅಂದಹಾಗೆ ಬಿಜೆಪಿಗೆ ಕಾಂಗ್ರೆಸ್‌ನಿಂದ ಬಂದಿದ್ದ ಶಾಸಕರೆಲ್ಲಾ ಈಗ ಮುನಿಸಿಕೊಂಡು ಪ್ರತ್ಯೇಕ ಗುಂಪು ರಚಿಸಿ ಬಂಡಾಯ ಹೂಡಲು ತಯಾರಾಗುತ್ತಿದ್ದಾರೆ.
ಟ್ರಂಪ್‌ರ ವಿದೇಶಾಂಗ ಸಚಿವ ಪೊಂಪೆ ಸೇರಿ 28 ಜನರಿಗೆ ಚೀನಾ ನಿರ್ಬಂಧ!
ಸಂತೋಷ್ ಈಗ ಪ್ರಬಲ
ರಾಷ್ಟ್ರೀಯ ಬಿಜೆಪಿಯಲ್ಲಿ ಇವತ್ತು ಸಂಘಟನೆ ವಿಚಾರದಲ್ಲಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಬಿಟ್ಟರೆ ಅತ್ಯಂತ ಹೆಚ್ಚು ಪ್ರಬಲ ವ್ಯಕ್ತಿಯೆಂದರೆ ಸಂತೋಷ್. ಸಂತೋಷ್ ಅವರಿಗಿಂತ ಹಿರಿಯರಾಗಿದ್ದ ವಿ.ಸತೀಶ್ ಮತ್ತು ಸೌದಾನ್ ಸಿಂಗ್ ಇಬ್ಬರನ್ನೂ ಈಗ ಸಂಘಟನಾ ಕಾರ್ಯದರ್ಶಿ ಸ್ಥಾನದಿಂದ ಮುಕ್ತಗೊಳಿಸಲಾಗಿದೆ. ಒಂದು ಕಾಲದಲ್ಲಿ ಸಂತೋಷ್ ಸತೀಶ್ ಅವರಿಗೆ ರಿಪೋರ್ಟ್ ಮಾಡುತ್ತಿದ್ದರು. ವೆಂಕಯ್ಯ ಉಪರಾಷ್ಟ್ರಪತಿಯಾಗಿ, ಅನಂತಕುಮಾರ್ ನಿಧನರಾದ ನಂತರ ದಕ್ಷಿಣ ಭಾರತದ ರಾಜ್ಯಗಳ ವಿಷಯದಲ್ಲಿ ಸಂತೋಷ್ ಮಾತೇ ಫೈನಲ್ ಎನ್ನುವಂತಾಗಿದೆ. ಒಂದು ಮಾತಂತೂ ನಿಜ, ರಾಮಲಾಲ… ತರಹ ಸಂತೋಷ್ ಲೋ ಪ್ರೊಫೈಲ… ಅಲ್ಲ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ