ಪಾಟ್ನಾ(ಡಿ.6): ನರೇಂದ್ರ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ, ಪ್ರಿಯಾಂಕಾ ಚೋಪ್ರಾ ಇವರೆಲ್ಲಾ ಸರ್ಕಾರಿ ಕಾರ್ಯಕ್ರಮಕ್ಕೆ ಬಂದ ಗಣ್ಯ ಅತಿಥಿಗಳ ಹೆಸರಲ್ಲ. ಇದು ಕೋವಿಡ್‌ಗೆ ಲಸಿಕೆ ಪಡೆದಂತಹ ವ್ಯಕ್ತಿಗಳ ಹೆಸರು. ಹೌದು ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆದವರ ದಾಖಲೀಕರಣದಲ್ಲಿ ಭಾರಿ ಮೋಸ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಅರ್ವಾಲ್ ಜಿಲ್ಲೆಯ ಕರ್ಪಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ ಕೋವಿಡ್ ಲಸಿಕೆ ಪಡೆದವರ ಪಟ್ಟಿಯನ್ನು ಇತ್ತೀಚೆಗೆ ಲಸಿಕಾ ಪೋರ್ಟಲ್‌ಗೆ ಹಾಕಲಾಗಿತ್ತು. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi), ಅಮಿತ್ ಶಾ, ಸೋನಿಯಾ ಗಾಂಧಿ(Sonia Gandhi)ಹಾಗೂ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಅವರ ಹೆಸರನ್ನು ಒಂದಲ್ಲ ಎರಡೆರಡು ಬಾರಿ ನಮೂದಿಸಲಾಗಿದೆ. ಇದನ್ನು ಇತ್ತೀಚೆಗೆ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Illegal in Exam: ಅಕ್ರಮ ಪರೀಕ್ಷೆ: ನಕಲಿ, ಅಸಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ಪ್ರಕಟ
ಈ ಪಟ್ಟಿಯಲ್ಲಿ ಗಣ್ಯ ವ್ಯಕ್ತಿಗಳನ್ನು ತೋರಿಸುವ ವಿಡಿಯೊಗಳು ವೈರಲ್ ಆದ ನಂತರ ಮುಜುಗರಕ್ಕೊಳಗಾದ ಸ್ಥಳೀಯ ಆಡಳಿತವು ಪ್ರಕರಣದ ತನಿಖೆಗೆ ಆದೇಶಿಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್(District Magistrate) ಜೆ ಪ್ರಿಯದರ್ಶಿನಿ(J Priyadarshini) ಡಾಟಾ ವಂಚನೆ ಹೇಗೆ ಮತ್ತು ಯಾರ ನಿರ್ದೇಶನದ ಮೇಲೆ ನಡೆದಿದೆ ಎಂಬುದನ್ನು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇದೊಂದು ತುಂಬಾ ಗಂಭೀರವಾದ ಪ್ರಕರಣ. ನಾವು ಕೋವಿಡ್ ಪರೀಕ್ಷೆ ಮತ್ತು ಲಸಿಕೆಯನ್ನು ಹೆಚ್ಚಿಸಲು ತುಂಬಾ ಪ್ರಯತ್ನಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಈ ರೀತಿ ಅಕ್ರಮಗಳು ನಡೆಯುತ್ತಿವೆ. ಇದು ಕೇವಲ ಕರ್ಪಿ(Karpi)ಯಲ್ಲಿ ಮಾತ್ರ ನಡೆದಿಲ್ಲ. ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇತ್ತೀಚೆಗೆ ತಪಾಸಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಇಬ್ಬರು ಆಪರೇಟರ್‌ಗಳನ್ನು ತೆಗೆದು ಹಾಕಲಾಗಿದೆ. ಆದರೆ ಇತರರನ್ನು ಸಹ ತನಿಖೆ ಮಾಡಬೇಕು. ನಾನು ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ಯಾವುದೇ ದೋಷಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇತರ ಆಸ್ಪತ್ರೆಗಳ ದತ್ತಾಂಶವನ್ನು ಸಹ ನೋಡುವಂತೆ ಕೇಳಿದ್ದೇನೆ. ಒಂದು ವೇಳೆ ಈ ಮಾಹಿತಿಯಲ್ಲಿ ದೋಷವಿದ್ದರೆ ಆರೋಪಿಗಳನ್ನು ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು ಎಂದು ಪ್ರಿಯದರ್ಶಿನಿ(Priyadarshini) ಹೇಳಿದರು.
Job Fraud Busted: ನಕಲಿ ದಾಖಲೆ ಸೃಷ್ಟಿಸಿ ಸೇನೆಗೆ ನೇಮಕ: ಹತ್ತು ಮಂದಿ ಅರೆಸ್ಟ್
ಬಿಹಾರದ ಆರೋಗ್ಯ ಸಚಿವ(Minister of Health) ಮಂಗಲ್ ಪಾಂಡೆ(Mangal Pandey) ಅವರು ಈ ವಿಷಯವು ತಮ್ಮ ಇಲಾಖೆಯ ಮುಂದೆ ಬಂದ ತಕ್ಷಣ, ಡೇಟಾ ಎಂಟ್ರಿಯನ್ನು ವಹಿಸಿಕೊಟ್ಟ ಇಬ್ಬರು ಕಂಪ್ಯೂಟರ್ ಆಪರೇಟರ್(Computer Operator)ಗಳನ್ನು ವಜಾಗೊಳಿಸಲಾಗಿದೆ ಎಂದು ಹೇಳಿದರು. ಅಲ್ಲದೇ ಪಾಟ್ನಾದಲ್ಲಿಯೂ ಸಹ ಡಾಟಾ ವಂಚನೆಯ ಮತ್ತೊಂದು ಪ್ರಕರಣ ಬಯಲಾಗಿದೆ. ಇದರಲ್ಲಿ ತಮ್ಮ ಎರಡನೇ ಡೋಸ್ ಸ್ವೀಕರಿಸಲು ಲಸಿಕಾ ಕೇಂದ್ರಕ್ಕೆ ಹೋದ ಜನರಿಗೆ ಅಲ್ಲಿ ಈಗಾಗಲೇ ಎರಡೂ ಡೋಸ್‌ಗಳನ್ನು ತಾವು ಪಡೆದಿದ್ದೀರಿ ಎಂದು ಹೇಳಿ ವಾಪಸ್ ಕಳುಹಿಸಿದ್ದರೆನ್ನಲಾಗಿದೆ. ಈ ವಿಚಾರದ ಬಗ್ಗೆಯೂ ಸಚಿವರು ಪ್ರಶ್ನಿಸಿದ್ದು ತನಿಖೆಗೆ ಆದೇಶಿಸಿದ್ದಾರೆ. ಇವು ತಾಂತ್ರಿಕ ವಿಷಯಗಳು, ಈ ವ್ಯವಸ್ಥೆಯಲ್ಲಿ ದೋಷಗಳಿಗೆ ಅವಕಾಶ ಇಲ್ಲ, ನೀವು ತಪ್ಪು ಮಾಡಿದರೆ, ನೀವು ಕ್ರಮ ಎದುರಿಸಬೇಕಾಗುತ್ತದೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.