ಲ್ಯಾಟರಲ್ ಎಂಟ್ರಿ ಮೂಲಕ ಅಧಿಕಾರಿಗಳನ್ನುನೇಮಕ ಮಾಡಿಕೊಳ್ಳುವ ವಿವಾದಾತ್ಮಕ ಜಾಹೀರಾತನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವು ಮಂಗಳವಾರ ಕೇಂದ್ರೀಯ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಸೂಚಿಸಿದೆ.
ನವದೆಹಲಿ (ಆ.21): ಲ್ಯಾಟರಲ್ ಎಂಟ್ರಿ ಮೂಲಕ ಅಧಿಕಾರಿಗಳನ್ನುನೇಮಕ ಮಾಡಿಕೊಳ್ಳುವ ವಿವಾದಾತ್ಮಕ ಜಾಹೀರಾತನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವು ಮಂಗಳವಾರ ಕೇಂದ್ರೀಯ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಸೂಚಿಸಿದೆ. ಯಾವುದೇ ಮೀಸಲನ್ನು ಅನುಸರಿಸದೇ ಬಾಹ್ಯ ವ್ಯಕ್ತಿಗಳನ್ನು ಸರ್ಕಾರಿ ನೌಕರಿ ಹುದ್ದೆಗೆ ನೇಮಿಸಿಕೊಳ್ಳುವ ಜಾಹೀರಾತಿಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ಷೇಪ ಎತ್ತಿದ ಬೆನ್ನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ.
ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಯುಪಿಎಸ್ಸಿ ಅಧ್ಯಕ್ಷೆ ಪ್ರೀತಿ ಸೂದನ್ ಅವರಿಗೆ ಪತ್ರ ಬರೆದು, ‘ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಸೇವೆಗಳಲ್ಲಿ ತಮ್ಮ ಹಕ್ಕಿನ ಪ್ರಾತಿನಿಧ್ಯ ಸಿಗುವಂತಾಗಬೇಕು. ಈ ವಿಷಯವನ್ನು ಪ್ರಧಾನಿ ಮೋದಿ ಪರಿಶೀಲಿಸಲು ಬಯಸಿದ್ದಾರೆ. ಹೀಗಾಗಿ ಲ್ಯಾಟರಲ್ ಎಂಟ್ರಿ ನೇಮಕದ ಜಾಹೀರಾತನ್ನು ರದ್ದುಗೊಳಿಸಬೇಕು’ ಎಂದು ತಾಕೀತು ಮಾಡಿದ್ದಾರೆ. ಅದರ ಬೆನ್ನಲ್ಲೇ ಯುಪಿಎಸ್‌ಸಿ, ತನ್ನ ಜಾಹೀರಾತು ಹಿಂಪಡೆದಿದೆ.
ವೈದ್ಯರ ಸುರಕ್ಷತೆಗೆ ಸುಪ್ರೀಂ ಕೋರ್ಟ್ ಕಾರ್ಯಪಡೆ: ಟಾಸ್ಕ್‌ಫೋರ್ಸ್‌ನಲ್ಲಿ ಇಬ್ಬರು ಕನ್ನಡಿಗರು
ಆ.17ರಂದು 45 ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳನ್ನು (ಖಾಸಗಿಯವರನ್ನು ಒಳಗೊಂಡಂತೆ) ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಮಾಡಲು ಯುಪಿಎಸ್ಸಿ ಅಧಿಸೂಚನೆ ಹೊರಡಿಸಿತ್ತು. ಈ ನಿರ್ಧಾರವು ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳ ಮೀಸಲಾತಿ ಹಕ್ಕುಗಳನ್ನು ದುರ್ಬಲಗೊಳಿಸಿದೆ ಎಂದು ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿತ್ತು.
ಇದರ ಬೆನ್ನಲ್ಲೇ ಪ್ರೀತಿ ಅವರಿಗೆ ಪತ್ರ ಬರೆದಿರುವ ಸಚಿವ ಸಿಂಗ್, ‘ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯು ನಮ್ಮ ಸಾಮಾಜಿಕ ನ್ಯಾಯ ಚೌಕಟ್ಟಿನ ಮೂಲಾದಾರ. ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸುವ ಗುರಿಯನ್ನು ಅದು ಹೊಂದಿದೆ ಎಂಬದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯ. ಹೀಗಾಗಿ ಈ ಅಧಿಸೂಚನೆ ರದ್ದು ಮಾಡಿ’ ಎಂದಿದ್ದಾರೆ. ಆದರೆ ಇದೇ ವೇಳೆ, ‘ಲ್ಯಾಟರಲ್ ಎಂಟ್ರಿ ನೇಮಕಗಳಿಗೆ ಮೊದಲು ತಾತ್ವಿಕ ಒಪ್ಪಿಗೆ ಸೂಚಿಸಿದ್ದು 2005ರಲ್ಲಿನ ವೀರಪ್ಪ ಮೊಯ್ಲಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ’ ಎಂದು ಲ್ಯಾಟರಲ್ ಎಂಟ್ರಿ ವಿರೋಧಿಸಿದ್ದ ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಚಾಟಿ: ಲ್ಯಾಟರಲ್ ಎಂಟ್ರಿ ಅಧಿಸೂಚನೆ ರದ್ದು ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರಜಾಸತ್ತೆಯ ಶಕ್ತಿಯು ಸರ್ವಾಧಿಕಾರವನ್ನು ಸೋಲಿಸುತ್ತದೆ ಎಂಬುದರ ಪ್ರತೀಕ ಇದು’ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಮೀಸಲು ಪರ ಇರುತ್ತದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸಹ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ನರ್ಸರಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯ: ಥಾಣೆಯಲ್ಲಿ ಶಾಲಾ ಕಟ್ಟಡ ಧ್ವಂಸ, ರೈಲು ತಡೆ
ಏನಿದು ಲ್ಯಾಟರಲ್ ಎಂಟ್ರಿ?: ಸರ್ಕಾರದಲ್ಲಿನ ಹಿರಿಯ ಅಧಿಕಾರಿಗಳ ಹುದ್ದೆಗಳಿಗೆ ಬಾಹ್ಯ ವ್ಯಕ್ತಿಗಳನ್ನು ಮೀಸಲಾತಿ ಇಲ್ಲದೇ ನೇಮಿಸಿಕೊಳ್ಳುವುದೇ ಲ್ಯಾಟರಲ್ ಎಂಟ್ರಿ. ಸಾಮಾನ್ಯವಾಗಿ ಇಂಥ ಅಧಿಕಾರಿಗಳು 3ರಿಂದ 5 ವರ್ಷ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕವಾಗುತ್ತಾರೆ. ಪರಿಣತರು ಬೇಕೆಂದು ಇಂಥ ನೇಮಕಗಳು ನಡೆಯುತ್ತವೆ.