ವೈದ್ಯರ ಸುರಕ್ಷತೆಗೆ ಸುಪ್ರೀಂ ಕೋರ್ಟ್ ಕಾರ್ಯಪಡೆ: ಟಾಸ್ಕ್‌ಫೋರ್ಸ್‌ನಲ್ಲಿ ಇಬ್ಬರು ಕನ್ನಡಿಗರು

By Kannadaprabha News  |  First Published Aug 21, 2024, 8:56 AM IST

‘ವೈದ್ಯರ ಸುರಕ್ಷತೆ ಮತ್ತು ಯೋಗಕ್ಷೇಮವು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಸೂಚಿಯ ಅಗತ್ಯವಿದೆ ಎಂದಿದೆ ಹಾಗೂ ಇದಕ್ಕಾಗಿ ಸಲಹೆ ನೀಡಲು 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್) ರಚಿಸಿದೆ. 


ನವದೆಹಲಿ (ಆ.21): ‘ವೈದ್ಯರ ಸುರಕ್ಷತೆ ಮತ್ತು ಯೋಗಕ್ಷೇಮವು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಸೂಚಿಯ ಅಗತ್ಯವಿದೆ ಎಂದಿದೆ ಹಾಗೂ ಇದಕ್ಕಾಗಿ ಸಲಹೆ ನೀಡಲು 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್) ರಚಿಸಿದೆ. ಕಾರ್ಯಪಡೆಯಲ್ಲಿ ಕರ್ನಾಟಕ ಯಾದಗಿರಿ ಮೂಲದವರಾದ ದಿಲ್ಲಿ ಏಮ್ಸ್‌ ನಿರ್ದೇಶಕ ಎಂ. ಶ್ರೀನಿವಾಸ್‌ ಹಾಗೂ ಬೆಂಗಳೂರಿನ ನಿಮ್ಹಾನ್ಸ್‌ ನಿರ್ದೇಶಕಿ ಡಾ। ಪ್ರತಿಮಾ ಮೂರ್ತಿ ಇದ್ದಾರೆ. 

ಕೋಲ್ಕತಾದ ಟ್ರೇನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಹಿನ್ನೆಲೆಯಲ್ಲಿ ಕೋರ್ಟ್‌ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಧ್ಯಂತರ ವರದಿಯನ್ನು 3 ವಾರಗಳಲ್ಲಿ ಮತ್ತು ಅಂತಿಮ ವರದಿಯನ್ನು 2 ತಿಂಗಳೊಳಗೆ ಸಲ್ಲಿಸಬೇಕು ಎಂದು ಕಾರ್ಯಪಡೆಗೆ ಸೂಚಿಸಿದೆ. ಮಂಗಳವಾರ ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ಆರಂಭಿಸಿದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ ಅವರ ಪೀಠ, ‘ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿಪರರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯಗೆ ಸಂಬಂಧಿಸಿದಂತೆ ಸುರಕ್ಷತಾ ಮಾನದಂಡಗಳ ಕೊರತೆ ಇದೆ. ಇದು ಕಳವಳಕಾರಿ. 

Latest Videos

undefined

 

ಹುಡುಗಿಯರು ಲೈಂಗಿಕ ಕಾಮನೆ ನಿಯಂತ್ರಿಸಿಕೊಳ್ಳಬೇಕು ಎಂಬ ಆದೇಶ ರದ್ದು: ಸುಪ್ರೀಂ ಕೋರ್ಟ್‌

ವೈದ್ಯ ಸಿಬ್ಬಂದಿಯನ್ನು ರಕ್ಷಿಸಲು ಕಾನೂನುಗಳಿವೆ. ಆದರೆ ಅವು ಸಾಲದು’ ಎಂದಿತು. ಹೀಗಾಗಿ ವೈದ್ಯರ ಸುರಕ್ಷತೆಗೆ ಸಲಹೆ ನೀಡಲು 10 ಸದಸ್ಯರ ಟಾಸ್ಕ್‌ಫೋರ್ಸ್‌ ರಚನೆಗೆ ಆದೇಶ ಹೊರಡಿಸಿತು. ‘ಕಾರ್ಯಪಡೆಗೆ ಕೇಂದ್ರ ಹಾಗೂ ಎಲ್ಲ ರಾಜ್ಯ ಸರ್ಕಾರಗಳು ತಮ್ಮ ತಮ್ಮ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ, ಆಸ್ಪತ್ರೆಯ ಹಾಲಿ ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲ ಮಾಹಿತಿ ನೀಡಬೇಕು. ಈ ಮಾಹಿತಿ ಆಧರಿಸಿ ವೈದ್ಯಕೀಯ ಸಿಬ್ಬಂದಿ ಮೇಲಿನ ಹಿಂಸೆ ತಡೆಗಟ್ಟಲು ಹಾಗೂ ಲಿಂಗ ಆಧರಿತ ಹಿಂಸೆ ತಡೆಗಟ್ಟಲು ರಾಷ್ಟ್ರೀಯ ಮಾರ್ಗೋಪಾಯಗಳನ್ನು ಕಾರ್ಯಪಡೆ ರೂಪಿಸಬೇಕು ಹಾಗೂ ತನಗೆ ಈ ವರದಿಯನ್ನು ನೀಡಬೇಕು’ ಎಂದು ಸೂಚಿಸಿತು.

ಕಾರ್ಯಪಡೆಯ 10 ಸದಸ್ಯರು: ವೈಸ್ ಅಡ್ಮಿರಲ್ ಆರತಿ ಸರೀನ್‌ (ಡೈರೆಕ್ಟರ್ ಜನರಲ್, ವೈದ್ಯಕೀಯ ಸೇವೆಗಳು-ನೌಕಾಪಡೆ), ಡಾ। ಡಿ. ನಾಗೇಶ್ವರ ರೆಡ್ಡಿ (ಅಧ್ಯಕ್ಷ, ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಎಐಜಿ ಆಸ್ಪತ್ರೆಗಳು, ಹೈದರಾಬಾದ್) ಡಾ। ಎಂ. ಶ್ರೀನಿವಾಸ್, (ನಿರ್ದೇಶಕ ದೆಹಲಿ-ಏಮ್ಸ್), ಡಾ। ಪ್ರತಿಮಾ ಮೂರ್ತಿ (ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಿರ್ದೇಶಕಿ), ಡಾ। ಗೋವರ್ಧನ್ ದತ್ ಪುರಿ (ಎಐಐಎಂಎಸ್ ಜೋಧಪುರದ ಕಾರ್ಯನಿರ್ವಾಹಕ ನಿರ್ದೇಶಕ), ಡಾ। ಸೌಮಿತ್ರಾ ರಾವತ್ (ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ ಅಧ್ಯಕ್ಷೆ), ಪ್ರೊ। ಅನಿತಾ ಸಕ್ಸೇನಾ (ಉಪಕುಲಪತಿ, ಪಂಡಿತ್ ಬಿಡಿ ಶರ್ಮಾ ವೈದ್ಯಕೀಯ ವಿವಿ, ರೋಹ್ಟಕ್) ಡಾ। ಪಲ್ಲವಿ ಸಪ್ಲೆ (ಡೀನ್‌, ಗ್ರಾಂಟ್ ಮೆಡಿಕಲ್ ಕಾಲೇಜ್ ಮತ್ತು ಸರ್ ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್, ಮುಂಬೈ) ಮತ್ತು ಡಾ ಪದ್ಮಾ ಶ್ರೀವಾಸ್ತವ, (ಏಮ್ಸ್‌ ದೆಹಲಿಯ ನರವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ).

ನರ್ಸರಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯ: ಥಾಣೆಯಲ್ಲಿ ಶಾಲಾ ಕಟ್ಟಡ ಧ್ವಂಸ, ರೈಲು ತಡೆ

ಸಂಪುಟ ಕಾರ್ಯದರ್ಶಿ ಮತ್ತು ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷರು ಕಾರ್ಯಪಡೆಯ ಪದನಿಮಿತ್ತ ಸದಸ್ಯರು.

click me!