* ಇಂದಿನಿಂದ ಹೈದರಾಬಾದಲ್ಲಿ ಬಿಜೆಪಿ ಕಾರ‍್ಯಕಾರಿಣಿ
* ದಕ್ಷಿಣ ರಾಜ್ಯಗಳ ಮೇಲೆ ಕೇಸರಿ ಪಕ್ಷ ಕಣ್ಣು
* ತೆಲಂಗಾಣದಲ್ಲಿ ಛಾಪು ಮೂಡಿಸುವ ಗುರಿ
* ನಾಳೆ ಹೈದರಾಬಾದಲ್ಲಿ ಮೋದಿ ಬೃಹತ್ ರಾರಯಲಿ
ನವದೆಹಲಿ(ಜು.02): ಕರ್ನಾಟಕ ಹೊರತುಪಡಿಸಿ ದಕ್ಷಿಣದ ಉಳಿದ ರಾಜ್ಯಗಳಲ್ಲಿ ಇನ್ನೂ ಗಮನಾರ್ಹ ಪ್ರಮಾಣದಲ್ಲಿ ಬೇರು ಬಿಡುವಲ್ಲಿ ವಿಫಲವಾಗಿರುವ ಬಿಜೆಪಿ, 2024ರ ಲೋಕಸಭೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿಕೊಂಡು ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಶನಿವಾರ ಹಾಗೂ ಭಾನುವಾರ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ಹಮ್ಮಿಕೊಂಡಿದೆ.
ಕಳೆದ 5 ವರ್ಷದಲ್ಲಿ ದಿಲ್ಲಿಯಿಂದ ಆಚೆ ಬಿಜೆಪಿ ನಡೆಸುತ್ತಿರುವ 2ನೇ ಕಾರ್ಯಕಾರಿಣಿ ಇದಾಗಿದೆ ಹಾಗೂ 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದಕ್ಷಿಣದಲ್ಲಿ ನಡೆಸುತ್ತಿರುವ 3ನೇ ಸಭೆ ಆಗಿದೆ. ಇನ್ನು ಹೈದರಾಬಾದಲ್ಲಿ 18 ವರ್ಷ ಬಳಿಕ ನಡೆಯುತ್ತಿದೆ. ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಅವರ ಭಾಷಣದೊಂದಿಗೆ ಸಭೆ ಶನಿವಾರ ಆರಂಭವಾಗಲಿದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದೊಂದಿಗೆ ಮುಗಿಯಲಿದೆ.
ತೆಲಂಗಾಣದಲ್ಲಿ ವಿಧಾನಸಭೆಗೆ 2023ರಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ತಳವೂರಲು ಬಿಜೆಪಿ ಯತ್ನಿಸುತ್ತಿದೆ. ಇದು ಹೈದರಾಬಾದ್‌ನಲ್ಲಿ ಕಾರ್ಯಕಾರಿಣಿ ನಡೆಸುವ ಮೂಲ ಉದ್ದೇಶ. ಈ ಹಿನ್ನೆಲೆಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಬಹಿರಂಗ ರಾರಯಲಿ ಕೂಡ ಏರ್ಪಾಡಾಗಿದೆ. ರಾರಯಲಿಯಲ್ಲಿ ಹಾಲಿ ಮುಖ್ಯಮಂತ್ರಿ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಅವರನ್ನು ಮೋದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಬಿಜೆಪಿ 2020ರ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 48 ಸ್ಥಾನ ಗೆದ್ದಿತ್ತು. ಹೈದರಾಬಾದ್ ಹಾಗೂ ದುಬ್ಬಕ ಉಪಚುನಾವಣೆಯಲ್ಲೂ ಜಯಗಳಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ 4 ಸ್ಥಾನ ಗೆದ್ದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ದುರ್ಬಲವಾಗಿವೆ. ಇದೇ ಅವಕಾಶ ಬಳಸಿಕೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಹವಣಿಸುತ್ತಿದೆ.