ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಸ್ತರಣೆಗೆ ಜಿ20 ಶೃಂಗದಲ್ಲೂ ಮೋದಿ ಹಕ್ಕೊತ್ತಾಯ

By Kannadaprabha News  |  First Published Sep 11, 2023, 8:37 AM IST

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕು ಮತ್ತು ಭಾರತಕ್ಕೆ ಅದರಲ್ಲಿ ಕಾಯಂ ಸದಸ್ಯತ್ವ ನೀಡಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಹಕ್ಕೊತ್ತಾಯ ಮಂಡಿಸುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಜಿ20 ಸಮಾವೇಶದಲ್ಲೂ ಅದೇ ಪ್ರಬಲ ವಾದ ಮಂಡಿಸಿದ್ದಾರೆ.


ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕು ಮತ್ತು ಭಾರತಕ್ಕೆ ಅದರಲ್ಲಿ ಕಾಯಂ ಸದಸ್ಯತ್ವ ನೀಡಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಹಕ್ಕೊತ್ತಾಯ ಮಂಡಿಸುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಜಿ20 ಸಮಾವೇಶದಲ್ಲೂ ಅದೇ ಪ್ರಬಲ ವಾದ ಮಂಡಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಎಲ್ಲಾ ಜಾಗತಿಕ ಸಂಸ್ಥೆಗಳನ್ನೂ ವಿಸ್ತರಿಸಬೇಕು. ಆ ಸಂಸ್ಥೆಗಳು ಜಗತ್ತಿನ ಹೊಸ ವಾಸ್ತವಗಳನ್ನು ಪ್ರತಿಫಲಿಸಬೇಕು. ಕಾಲದೊಂದಿಗೆ ಬದಲಾವಣೆ ಆಗದವರು ಪ್ರಸ್ತುತತೆ ಕಳೆದುಕೊಳ್ಳುತ್ತಾರೆ ಎಂಬುದು ಪ್ರಕೃತಿ ನಿಯಮ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಜಿ20 ಶೃಂಗದ ಕೊನೆಯ ದಿನ 'ಒಂದು ಭವಿಷ್ಯ' (One Future)ಕಾರ್ಯಾಗಾರದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ, ಜಗತ್ತಿಗೆ ಉತ್ತಮ ಭವಿಷ್ಯ ದೊರಕಿಸಿಕೊಡಲು ಜಾಗತಿಕ ಸಂಸ್ಥೆಗಳು (global institutions) ತಮ್ಮನ್ನು ತಾವೇ ಸುಧಾರಣೆ ಮಾಡಿಕೊಳ್ಳಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (United Nations Security Council) ಸೇರಿದಂತೆ ವಿವಿಧ ಜಾಗತಿಕ ಸಂಸ್ಥೆಗಳು ಬದಲಾಗಬೇಕು. ವಿಶ್ವಸಂಸ್ಥೆ ಜನಿಸಿದಾಗ ಜಗತ್ತು ಇವತ್ತಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಕೇವಲ 51 ದೇಶಗಳು ಅದರ ಸದಸ್ಯರಾಗಿದ್ದವು. ಇಂದು 200 ದೇಶಗಳು ಸದಸ್ಯರಾಗಿವೆ. ಆದರೂ ಭದ್ರತಾ ಮಂಡಳಿಯಲ್ಲಿ ಕೇವಲ ಐದು ಸದಸ್ಯ ರಾಷ್ಟ್ರಗಳು ಮಾತ್ರ ಇವೆ. ಅಂದಿನಿಂದ ಈವರೆಗೆ ಜಗತ್ತು ಪ್ರತಿಯೊಂದು ವಿಷಯದಲ್ಲೂ ಬದಲಾಗಿದೆ. ಸಾರಿಗೆ (Transport), ಸಂಪರ್ಕ, ಸಂವಹನ, ಆರೋಗ್ಯ, ಶಿಕ್ಷಣ (education) ಹೀಗೆ ಪ್ರತಿಯೊಂದು ರಂಗವೂ ರೂಪಾಂತರಗೊಂಡಿದೆ. ಜಾಗತಿಕ ಸಂಸ್ಥೆಗಳಲ್ಲಿ ಈ ಹೊಸ ಬದಲಾವಣೆಗಳು ಪ್ರತಿಫಲಿತವಾಗಬೇಕು ಎಂದು ಹೇಳಿದರು.

Tap to resize

Latest Videos

ಇದೇ ಕಾರಣಕ್ಕೆ ಭಾರತವು ಆಫ್ರಿಕನ್‌ ಒಕ್ಕೂಟವನ್ನು(African Union) ಜಿ20ಗೆ ಸೇರಿಸಿಕೊಳ್ಳಬೇಕೆಂದು ಪ್ರಸ್ತಾಪಿಸಿತು. ಕೊನೆಗೆ ಜಿ20ಗೆ ಆಫ್ರಿಕನ್‌ ಒಕ್ಕೂಟವನ್ನು ಸೇರಿಸಿಕೊಳ್ಳಲು ಶನಿವಾರ ನಿರ್ಧಾರ ಕೈಗೊಳ್ಳಲಾಗಿದೆ. ಅದೇ ರೀತಿ ವಿಶ್ವಸಂಸ್ಥೆ, ಬಹುರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕುಗಳನ್ನು (Multinational Development Banks) ವಿಸ್ತರಣೆ ಮಾಡಬೇಕು. ತಕ್ಷಣ ಈ ಕೆಲಸ ಆಗಬೇಕು ಎಂದು ಮೋದಿ ಆಗ್ರಹಿಸಿದರು.

ನವೆಂಬರ್‌ನಲ್ಲಿ ವರ್ಚುವಲ್‌ ಶೃಂಗ:

ನಂತರ ಜಿ20 ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೋದಿ, ಮುಂದಿನ ಜಿ20 ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಬ್ರೆಜಿಲ್‌ಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಬ್ರೆಜಿಲ್‌ನ ಬದ್ಧತೆ, ದೂರದೃಷ್ಟಿ ಹಾಗೂ ಜಾಗತಿಕ ಸಮೃದ್ಧಿಯ ಕುರಿತು ಆ ದೇಶ ಹೊಂದಿರುವ ಆಶಯವು ಜಿ20ಯನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಕಳೆದ ಎರಡು ದಿನಗಳಲ್ಲಿ ಕೈಗೊಂಡ ನಿರ್ಧಾರಗಳನ್ನು ಜಾರಿಗೊಳಿಸಲು ಎಲ್ಲರೂ ಒಟ್ಟಿಗೇ ಕೆಲಸ ಮಾಡೋಣ. ಅದಕ್ಕಾಗಿ ಈ ವರ್ಷದ ನವೆಂಬರ್‌ ಅಂತ್ಯದಲ್ಲಿ ಇನ್ನೊಂದು ಜಿ20 ವರ್ಚುವಲ್‌ ಸಮಾವೇಶ ಆಯೋಜಿಸೋಣ ಎಂದು ಹೇಳಿದ ಅವರು, ಇದರೊಂದಿಗೆ ಜಿ20 ಶೃಂಗ ಮುಕ್ತಾಯವಾಗುತ್ತದೆ’ಎಂದು ಘೋಷಿಸಿದರು.

ಕ್ರಿಪ್ಟೋಕರೆನ್ಸಿ, ಸೈಬರ್‌ ಭದ್ರತೆ ಬಗ್ಗೆ ಎಚ್ಚರ:

ಕ್ರಿಪ್ಟೋಕರೆನ್ಸಿ ಮತ್ತು ಸೈಬರ್‌ ಭದ್ರತೆಯ ವಿಷಯಗಳು ವರ್ತಮಾನ ಮತ್ತು ಭವಿಷ್ಯದಲ್ಲಿ ಜಗತ್ತಿನ ಮೇಲೆ ತೀವ್ರ ಪರಿಣಾಮ ಬೀರಲಿವೆ. ಇವುಗಳನ್ನು ನಿಯಂತ್ರಿಸಲು ಸರಿಯಾದ ದಾರಿಯನ್ನು ಜಗತ್ತು ಕಂಡುಕೊಳ್ಳಬೇಕು. ಸೈಬರ್‌ಸ್ಪೇಸ್‌ನಲ್ಲೇ ಭಯೋತ್ಪಾದನೆಗೆ ಹಣ ಲಭಿಸುತ್ತಿದೆ. ಅದನ್ನು ತಡೆಯಬೇಕು. ಎಲ್ಲಾ ದೇಶಕ್ಕೂ ಇದು ಬಹಳ ಮುಖ್ಯವಾದ ವಿಷಯ. ಎಲ್ಲಾ ದೇಶಗಳು ಒಟ್ಟಾಗಿ ಭದ್ರತೆ ಮತ್ತು ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಂಡಾಗ ‘ಒಂದು ಭವಿಷ್ಯ’ ಭದ್ರವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

click me!