
ಶಿಮ್ಲಾ(ಆ.08): 10,000 ಅಡಿ ಎತ್ತರದಲ್ಲಿರುವ ಜಗತ್ತಿನ ಅತಿ ಉದ್ದದ ಸುರಂಗ ಮಾರ್ಗ ಎಂಬ ಹೆಗ್ಗಳಿಕೆ ಪಡೆಯಲಿರುವ ರೊಹ್ತಾಂಗ್ ಸುರಂಗ ಮಾರ್ಗವನ್ನು ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುವ ಸಾಧ್ಯತೆಯಿದೆ. 8.8 ಕಿ.ಮೀ. ಉದ್ದದ ಈ ಸುರಂಗ ಮಾರ್ಗ ಎಂಜಿನಿಯರಿಂಗ್ ಕೌಶಲದ ಅದ್ಭುತಗಳಲ್ಲಿ ಒಂದಾಗಿದ್ದು, ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಸಂಚಾರಿ ಮೂಲಸೌಕರ್ಯವನ್ನು ಹೊಸ ಸ್ತರಕ್ಕೆ ಏರಿಸಲಿದೆ.
ಈ ಸುರಂಗ ಮಾರ್ಗವು ಗಡಿ ಪ್ರದೇಶ ಮತ್ತು ಸಂಪರ್ಕ ದುರ್ಲಭ ಪ್ರದೇಶಗಳಿಗೆ ಸರ್ವಋುತು ಸಂಪರ್ಕ ಕಲ್ಪಿಸಲಿದೆ. ದೇಶದ ರಕ್ಷಣೆಯ ದೃಷ್ಟಿಯಿಂದ ವ್ಯೂಹಾತ್ಮಕವಾಗಿಯೂ ಮಹತ್ವ ಪಡೆದಿರುವ ಈ ಯೋಜನೆಯನ್ನು 3200 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆಯಿದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದು, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ಉದ್ಘಾಟನೆ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
8.8 ಕಿ.ಮೀ. ಉದ್ದದ ಈ ಸುರಂಗ ಮಾರ್ಗ ನಮ್ಮ ದೇಶದ ಅತ್ಯಂತ ಉದ್ದದ ಸುರಂಗ ಮಾರ್ಗಗಳಲ್ಲಿ ಒಂದಾಗಿದೆ. ವ್ಯೂಹಾತ್ಮಕ ಮಹತ್ವ ಪಡೆದಿರುವ ರೊಹ್ತಾಂಗ್ ಪಾಸ್‌ನ ಅಡಿಯಲ್ಲಿ, ಸಮುದ್ರ ಮಟ್ಟದಿಂದ 10,171 ಅಡಿ ಎತ್ತರದಲ್ಲಿ ಇದು ನಿರ್ಮಾಣವಾಗಿದೆ.
ಈ ಸುರಂಗ ಮಾರ್ಗ ಆರಂಭವಾದ ನಂತರ ಮನಾಲಿ ಮತ್ತು ಲಹೌಲ್-ಸ್ಪಿಟಿಯ ಆಡಳಿತ ಕೇಂದ್ರವಾಗಿರುವ ಕೇಲಾಂಗ್ ನಡುವಿನ ದೂರ 45 ಕಿ.ಮೀ.ನಷ್ಟುಕಡಿಮೆಯಾಗಲಿದೆ. ಈ ಸುರಂಗದಿಂದ ಸರಕು ಸಾಗಣೆ ವೆಚ್ಚ ಕೋಟ್ಯಂತರ ರು. ಉಳಿತಾಯವಾಗಲಿದೆ. ಬಾರ್ಡರ್ ರೋಡ್ ಆರ್ಗನೈಸೇಶನ್ ಇದನ್ನು ನಿರ್ಮಿಸಿದ್ದು, ಸದ್ಯ ನಿರ್ಮಾಣ ಕಾಮಗಾರಿಗಳು ಮುಗಿದು ಎಲೆಕ್ಟ್ರೋ ಮೆಕ್ಯಾನಿಕ್ ಫಿಟಿಂಗ್‌ಗಳು, ವಿದ್ಯುದ್ದೀಪ, ಇಂಟೆಲಿಜೆಂಟ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ, ಮೇಲ್ಮೈ ರಸ್ತೆ ನಿರ್ಮಾಣ ಮುಂತಾದ ಕಾರ್ಯಗಳು ನಡೆಯುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ