
ಗುವಾಹಟಿ (ಸೆ.15): ‘ನಾನು ಶಿವಭಕ್ತ, ವಿಷಕಂಠ. ವಿಪಕ್ಷಗಳು ನನ್ನ ವಿರುದ್ಧ ಏನೇ ಟೀಕೆ ಮಾಡಿದರೂ ಅದನ್ನು ನುಂಗುವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಆರ್‌ಜೆಡಿಗೆ ಸವಾಲು ಹಾಕಿದ್ದಾರೆ. ಜೊತೆಗೆ ‘ಮತದಾರರೇ ನನ್ನ ಗುರುಗಳು, ಅವರೇ ನನ್ನ ರಿಮೋಟ್ ಕಂಟ್ರೋಲ್’ ಎನ್ನುವ ಮೂಲಕ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಹಾಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಾಂಧೀ ಕುಟುಂಬ ನಿಯಂತ್ರಿಸುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಟಾಂಗ್ ನೀಡಿದ್ದಾರೆ.
ಅಸ್ಸಾಂ ರಾಜಧಾನಿ ಗುವಾಹಟಿ, ದರಾಂಗ್‌ನಲ್ಲಿ 18,500 ಕೋಟಿ ರು. ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಇಡೀ ಕಾಂಗ್ರೆಸ್ ವ್ಯವಸ್ಥೆ ನಾನು ಮತ್ತೆ ಕಣ್ಣೀರಿಟ್ಟೆ ಎಂದು ನನ್ನನ್ನು ಗುರಿ ಮಾಡುತ್ತದೆ. ಆದರೆ ಮತದಾರರೇ ನನ್ನ ದೇವರು; ಅವರ ಬಳಿ ನಾನು ನನ್ನ ನೋವು ಹೇಳಿಕೊಳ್ಳದೆ ಇನ್ಯಾರ ಬಳಿ ಹೇಳಿಕೊಳ್ಳಲಿ. ಅವರೇ ನನ್ನ ಗುರುಗಳು, ಅವರೇ ನನ್ನ ದೇವರು ಮತ್ತು ಅವರೇ ನನ್ನ ರಿಮೋಟ್ ಕಂಟ್ರೊಲ್’ ಎಂದು ಹೇಳಿದರು.
ಇತ್ತೀಚೆಗೆ ಬಿಹಾರದಲ್ಲಿ ನಡೆದ ಕಾಂಗ್ರೆಸ್‌ನ ಮತಚೋರಿ ರ್‍ಯಾಲಿ ವೇಳೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು, ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಬಗ್ಗೆ ಕೀಳುಪದ ಬಳಸಿ ಟೀಕಿಸಿದ್ದರು. ಈ ಬಗ್ಗೆ ಮೋದಿ ಮತ್ತು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಹೀರಾಬೆನ್ ಅವರು ಮೋದಿ ಅವರನ್ನು ಅಪನಗದೀಕರಣ, ಮತಗಳವು ವಿಷಯದಲ್ಲಿ ತರಾಟೆಗೆ ತೆಗೆದುಕೊಳ್ಳುವ ಕೃತಕ ಬುದ್ಧಿಮತ್ತೆ (ಎಐ) ಬಳಸಿದ ವಿಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಹೀಗಾಗಿ ಉಭಯ ಪಕ್ಷಗಳನ್ನು ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ