
ನವದೆಹಲಿ(ಮಾ.11) ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ತರಲು ಸಜ್ಜಾಗಿದೆ. ಇಂದು ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಎಎ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಈ ಕುರಿತು ನೋಟಿಫೈ ಹೊರಡಿಸಲು ಸಂಪೂರ್ಣ ತಯಾರಿ ಮಾಡಿದ್ದಾರೆ ಎಂದು ಮೂಲಗಳು ಹೇಳುತ್ತಿದೆ. 2019ರಲ್ಲಿ ರೂಪಿಸಲಾಗಿರುವ ಈ ಸಿಸಿಎ ಕಾಯ್ದೆಯನ್ನು 2024ರ ಲೋಕಸಭಾ ಚುನಾವಣೆಗೂ ಮುನ್ನ ಜಾರಿಗೆ ತರಲಾಗುವುದು ಎಂದು ಇತ್ತೀಚೆಗಷ್ಟೆ ಅಮಿತ್ ಶಾ ಪನರುಚ್ಚರಿಸಿದ್ದರು.
2019ರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಿಎಎ ಕಾಯ್ದೆ ಪಾಸು ಮಾಡಿತ್ತು. ಅದರಡಿ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಿಂದ 2014ರ ಡಿ.31ಕ್ಕಿಂತ ಮೊದಲು ತಮ್ಮ ತಮ್ಮ ದೇಶದಲ್ಲಿ ನರಮೇಧದಿಂದ ತಪ್ಪಿಸಿಕೊಂಡು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ಸಿಗಲಿದೆ. ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಈ ಕಾಯ್ದೆಯಡಿ ಭಾರತದ ಪೌರತ್ವ ನೀಡಲಾಗುತ್ತದೆ. ಈ ಕಾಯ್ದೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ನಾನು ಬದುಕಿರುವ ವರೆಗೆ ಸಿಎಎ ಜಾರಿಗೆ ಬಿಡುವುದಿಲ್ಲ ಎಂದಿದ್ದರು.
Breaking: ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ 5.30ಕ್ಕೆ ಭಾಷಣ!
2019ರಲ್ಲೇ ಸಿಎಎ ಕಾಯ್ದೆಗೆ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಆದರೆ ಭಾರಿ ಪ್ರತಿಭಟನೆ, ವಿರೋಧಗಳ ಬಳಿಕ ಜಾರಿ ವಿಳಂಬವಾಗಿತ್ತು.ಮುಸ್ಲಿಮರನ್ನು ಇದರ ವ್ಯಾಪ್ತಿಯಿಂದ ಹೊರಗಿಟ್ಟಿದ್ದಕ್ಕೆ ಹಲವು ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಕಾಯ್ದೆಗೆ ಅನುಮೋದನೆ ಸಿಕ್ಕಿ ಸರಿಸುಮಾರು 5 ವರ್ಷಗಳಾಗುತ್ತಾ ಬಂದಿದೆ. ಮೊದಲ ಹಂತದಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಬಳಿಕ ಕಾಯ್ದೆ ಜಾರಿಯಾಗಲಿದೆ.
2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಸಿಕ್ಕಿದ್ದರೂ ನಿಯಮಗಳು ರೂಪುಗೊಂಡಿಲ್ಲ. ಇದೀಗ ಅಧಿಸೂಚನೆ ಮೂಲಕ ನಿಯಮಗಳ ಘೋಷಣೆಯಾಗಲಿದೆ. ಸದ್ಯ 1955ರ ಸಿಎ ಕಾಯ್ದೆ ಕಾರ್ಯರೂಪದಲ್ಲಿದೆ. ಪೌರತ್ವ ಕಾಯ್ದೆ ಪ್ರಶ್ನಿಸಿ ಸುಮಾರು 200ಕ್ಕೂ ಹೆಚ್ಚೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು.
ಅಮಿತ್ ಷಾ ಕಾರಿನ ನಂಬರ್ ಪ್ಲೇಟ್‌ನಲ್ಲೂ ಸಿಎಎ: ಕಾಯ್ದೆ ಜಾರಿಗೂ ಮೊದಲು ಫೋಟೋ ಸಖತ್ ವೈರಲ್
ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಸಿಎಎಗೆ ಸಂಬಂಧಿಸಿದಂತೆ ನಮ್ಮ ಮುಸ್ಲಿಂ ಬಾಂಧವರನ್ನು ದಾರಿತಪ್ಪಿಸಲಾಗಿದೆ ಮತ್ತು ಅದರ ವಿರುದ್ಧ ಅವರನ್ನು ಪ್ರಚೋದಿಸಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದವರಿಗೆ ಪೌರತ್ವ ನೀಡುವುದಕ್ಕಾಗಿ ಈ ಕಾಯ್ದೆ ರೂಪಿಸಲಾಗಿದೆಯೇ ಹೊರತೂ ಯಾರಿಂದಲೂ ಭಾರತೀಯ ಪೌರತ್ವ ಕಿತ್ತುಕೊಳ್ಳಲು ಅಲ್ಲ’ ಎಂದು ಸ್ಪಷ್ಟಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ