Republic Day 2022 ಸ್ತಬ್ಧಚಿತ್ರ ತಿರಸ್ಕಾರ ವಿವಾದ, ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ರಾಜ್ಯಗಳಿಗೆ ಕೇಂದ್ರದ ಸ್ಪಷ್ಟನೆ!

By Suvarna NewsFirst Published Jan 17, 2022, 7:22 PM IST
Highlights
  • ಗಣರಾಜ್ಯೋತ್ಸ ಪರೇಡ್‌ನಲ್ಲಿ ಪಾಲ್ಗೊಳ್ಳುವ ಸ್ತಬ್ಧಚಿತ್ರ ವಿವಾದ ಪ್ರಕರಣ
  • ಕೆಲ ರಾಜ್ಯಗಳ ಟ್ಯಾಬ್ಲೋ ತಿರಸ್ಕರಿಸಿದ ನಡೆಗೆ ವಿವಾದ ಸೃಷ್ಟಿ
  • ತಜ್ಞರ ಸಮಿತಿಯ ನಿರ್ಧಾರ, ಕೇಂದ್ರದಿಂದ ಸ್ಪಷ್ಟನೆ
     

ನವದೆಹಲಿ(ಜ.17): ಕೊರೋನಾ ಆತಂಕದ ನಡುವೆ ದೇಶ ಗಣರಾಜ್ಯೋತ್ಸವ(Republic Day Celebration) ಆಚರಿಸಲು ಸಜ್ಜಾಗಿದೆ. ನೇತಾಜಿ ಸುಭಾಷ್ ಚಂದ್ರಬೋಸ್ ಜಯಂತಿ ಆಚರಣೆ ಸೇರಿಸಿರುವ ಕಾರಣ ಈ ಬಾರಿಯಿಂದ ಜನವರಿ 23 ರಿಂದ ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಲಿದೆ. ಗಣರಾಜ್ಯೋತ್ಸವ ಸಂಭ್ರಮದಲ್ಲಿ ಪ್ರಮುಖ ಆಕರ್ಷರಣೆ ರಾಜಪಥದಲ್ಲಿ ನಡೆಯಲಿರುವ ಪರೇಡ್(Republic Day Parade). ಆದರೆ ಈ ಬಾರಿಯ ಪರೇಡ್ ತಯಾರಿಯಲ್ಲೇ ವಿವಾದ ಸೃಷ್ಟಿಯಾಗಿದೆ. ಕೆಲ ರಾಜ್ಯಗಳ ಸ್ತಬ್ಧಚಿತ್ರವನ್ನು(tableaux ) ಮೋದಿ ಸರ್ಕಾರ ತಿರಸ್ಕರಿಸಿದೆ ಎಂದು ವಿವಾದ ಹುಟ್ಟಿಕೊಂಡಿದೆ. ಈ ವಿವಾದ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ ಇದೀಗ ಸ್ಪಷ್ಟನೆ ನೀಡಿದೆ. ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ರಾಜ್ಯಗಳಿಗೆ ಖಡಕ್ ಸಂದೇಶ ರವಾನಿಸಿದೆ.

ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಕೇರಳ(Kerala), ತಮಿಳುನಾಡು(TamilNadu) ಹಾಗೂ ಪಶ್ಚಿಮ ಬಂಗಾಳ(West Bengal) ರಾಜ್ಯಗಳ ಸ್ತಬ್ಧಚಿತ್ರ ಮನವಿಗಳನ್ನು ತಿರಸ್ಕರಿಸಲಾಗಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಉಭಯ ರಾಜ್ಯದ ಮುಖ್ಯಮಂತ್ರಿಗಳು ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕವಾಗಿ ನರೇಂದ್ರ ಮೋದಿ ಸರ್ಕಾರ ಸ್ತಬ್ಧಚಿತ್ರ ತಿರಿಸ್ಕರಿಸಿ(tableaux Reject) ರಾಜ್ಯದ ಜನತೆಗೆ ಅಪಮಾನ ಮಾಡಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಯಾವ ಸ್ತಬ್ಧಚಿತ್ರ ಪಾಲ್ಗೊಳ್ಳಬೇಕು, ಇರಬೇಕು ಅನ್ನೋದು ನಿರ್ಧರಿಸುವುದು ಮೋದಿ ಸರ್ಕಾರ ಅಥಾವ ಕೇಂದ್ರ ಸರ್ಕಾರವಲ್ಲ. ಈ ಕುರಿತು ಕೇಂದ್ರ ಸ್ಪಷ್ಟನೆ ನೀಡಿದೆ. ಇಷ್ಟೇ ಅಲ್ಲ ಎಲ್ಲಾ ವಿವಾದ ಹಾಗೂ ಗೊಂದಲಗಳಿಗೆ ತೆರೆ ಎಳೆದಿದೆ.

ನೇತಾಜಿ ಸ್ತಬ್ಧಚಿತ್ರ, ಕೇರಳ ಬಳಿಕ ಈಗ ಬಂಗಾಳ ಟ್ಯಾಬ್ಲೋ ತಿರಸ್ಕಾರ: ವಿವಾದ!

ದೆಹಲಿ ಗಣರಾಜ್ಯೋತ್ಸ ಪರೇಡ್‌ನಲ್ಲಿ ಯಾವ ಥೀಮ್‌ನಡಿ ಮೆರವಣಿಗೆ ನಡೆಯಬೇಕು, ಯಾವೆಲ್ಲಾ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಬೇಕು ಅನ್ನೋದು ನಿರ್ಧರಿಸುವುದು ತಜ್ಞರ ಸಮಿತಿ. ಈ ಸಮಿತಿಯಲ್ಲಿ ಕಲೆ, ಸಂಸ್ಕೃತಿ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ  ಸೇರಿದಂತೆ ಹಲವು ಕ್ಷೇತ್ರದ ಪರಿಣಿತರು ಇರಲಿದ್ದಾರೆ. ಈ ಸಮಿತಿ ಜೊತೆಗೆ ಕೇಂದ್ರ ಸರ್ಕಾರದ ನಿಯೋಜಿತ ಸಚಿವರು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಸಮಿತಿ ತೆಗೆದುಕೊಂಡ ನಿರ್ಧಾರಗಳನ್ನು ಪಾಲನೆ ಮಾಡಬೇಕು. ಈ ಸಮಿತಿ ಕೆಲ ಮಾನದಂಡಗಳ ಮೇಲೆ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಿದೆ.

Narayana Guru Tableau ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ, ಎಚ್‌ಡಿಕೆ ಕಿಡಿ

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ಗೆ 56 ಸ್ತಬ್ದಚಿತ್ರಗಳ ಮನವಿ ಬಂದಿದೆ. ಇದರಲ್ಲಿ 21 ಮನವಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ತಿರಸ್ಕರಿಸಿದ ಸ್ತಬ್ಧಚಿತ್ರ ಮನವಿಗಳಿಗೆ ಹಲವು ಕಾರಣಗಳಿವೆ. ಅಂತಿಮ ಹಂತದಲ್ಲಿ ಬಂದಿರುವ ಕೆಲ ಮನವಿಗಳನ್ನು ತಿರಸ್ಕರಿಸಲಾಗಿದೆ.  ಈ ಬಾರಿಯ ಸಮಯದ ಅಭಾವವೂ ಕಾಡಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.  ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ ಮನವಿಗಳನ್ನು ಚರ್ಚೆ ಹಾಗೂ ಮಾನದಂಡಗಳ ಆಧಾರದಲ್ಲಿ ತಜ್ಞರ ಸಮಿತಿ ತಿರಸ್ಕರಿಸಿದೆ ಎಂದು ಕೇಂದ್ರ ತನ್ನ ಸ್ಪಷ್ಟನೆಯಲ್ಲಿ ಹೇಳಿದೆ.

ಕೇರಳ ನಾರಾಯಣ ಗುರು ಸ್ತಬ್ಧಚಿತ್ರಕ್ಕೆ ಮನವಿ ಮಾಡಿತ್ತು, ಪಶ್ಚಿಮ ಬಂಗಾಳ ನೇತಾಜಿ ಸುಭಾಷ್ ಚಂದ್ರಬೋಸ್ ಸ್ತಬ್ಧಚಿತ್ರಕ್ಕೆ ಮನವಿ ಮಾಡಿತ್ತು. ಈ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಿದ ಕೇಂದ್ರದ ವಿರುದ್ದ ರಾಜ್ಯದಲ್ಲಿ ಆಯಾ ಪಕ್ಷದ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದು ರಾಜ್ಯದ ಜನತೆಗೆ ಸುಳ್ಳನ್ನು ಹೇಳಿ ಕೇಂದ್ರದ ವಿರುದ್ಧ ಭಾರತದ ಭಾರತ ಫೆಡರಲ್ ವ್ಯವಸ್ಥೆ ವಿರುದ್ಧ ನಡೆಸುವ ಷಡ್ಯಂತ್ರವಾಗಿದೆ ಎಂದು ಕೇಂದ್ರ ಹೇಳಿದೆ.

ಕೇರಳ ಸರ್ಕಾರ 2018 ಹಾಗೂ 2021ರಲ್ಲಿ ಸಲ್ಲಿಸಿದ ಸ್ತಬ್ಧಚಿತ್ರಗಳ ಮನವಿ ಪುರಸ್ಕರಿಸಲಾಗಿದೆ. ಈ ವೇಳೆ ಕೇಂದ್ರದಲ್ಲಿ ಮೋದಿ ಸರ್ಕಾರದ ಆಡಳಿತವಿತ್ತು. ಇನ್ನು ತಮಿಳುನಾಡು ಸರ್ಕಾರದ ಸ್ತಬ್ಧಚಿತ್ರಗಳಿಗೆ 2016, 2017, 2019, 2020 ಹಾಗೂ 2021 ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇನ್ನು ಪಶ್ಚಿಮ ಬಂಗಾಳದ ಸ್ತಬ್ಧಚಿತ್ರಗಳು 2016, 2017, 2019 ಹಾಗೂ 2021ರ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಸ್ತಬ್ಧಚಿತ್ರಗಳ ಆಯ್ಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪಾತ್ರವೂ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯಲ್ಲಿ ಹೇಳಿದೆ.

click me!