
ನವದೆಹಲಿ(ಆ.04): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ 69 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಯುವ ಮಹಿಳಾ ಲೊವ್ಲಿನಾ ಬೊರ್ಗೊಹೈನ್ ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸಾನೆಜ್ ಸುರ್ಮೆನೆಲಿ ಎದುರು 5-0 ಅಂಕಗಳ ಅಂತರದಲ್ಲಿ ಮುಗ್ಗರಿಸಿದ್ದಾರೆ. ಈ ಮೂಲಕ ಅಸ್ಸಾಂನ ಲೊವ್ಲಿನಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಸದ್ಯ ಕಂಚಿನ ಪದಕ ಗೆದ್ದ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಆಟದಲ್ಲಿ ಉತ್ತಮ ಹೋರಾಟ ಮಾಡಿದ್ದೀರಿ ಲೊವ್ಲಿನಾ ಬೊರ್ಗೊಹೈನ್, ಬಾಕ್ಸಿಂಗ್ನಲ್ಲಿ ಲೊವ್ಲಿನಾರ ಯಶಸ್ಸು ಹಲವಾರು ಭಾರತೀಯರಿಗೆ ಸ್ಫೂರ್ತಿಯಾಗಿದೆ. ಆಕೆಯ ದೃಢತೆ, ತೆಗೆದುಕೊಳ್ಳುವ ನಿರ್ಣಯಗಳು ಶ್ಲಾಘನೀಯವಾಗಿದೆ. ಟೊಕಿಯೊ ಒಲಂಪಿಕ್ಸ್‌ನಲ್ಲಿ ಕಂಚು ಗೆದ್ದ ಲೊವ್ಲಿನಾಗೆ ಅಭಿನಂದನೆಗಳು. ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲೊವ್ಲಿನಾ ಸಾಧನೆಯಿಂದ, ಭಾರತಕ್ಕೆ ಮೂರನೇ ಪದಕ ಲಭಿಸಿದೆ. ಅಲ್ಲದೇ ತಮ್ಮ ಈ ಸಾಧನೆಯಿಂದ ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಎನ್ನುವ ಕೀರ್ತಿಗೆ ಲೊವ್ಲಿನಾ ಬೊರ್ಗೊಹೈನ್ ಭಾಜನರಾಗಿದ್ದಾರೆ. ಈ ಮೊದಲು ವಿಜೇಂದರ್ ಸಿಂಗ್ (2008) ಹಾಗೂ ಮೇರಿ ಕೋಮ್ (2012) ಕಂಚಿನ ಪದಕವನ್ನು ಜಯಿಸಿದ್ದರು.
ಮೊದಲ ಸುತ್ತಿನಲ್ಲೇ ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸಾನೆಜ್ ಸುರ್ಮೆನೆಲಿ ಘಾತಕ ಪಂಚ್‌ಗಳ ಮೂಲಕ ಭಾರತದ ಬಾಕ್ಸರ್ ಮೇಲೆ ಪ್ರಾಬಲ್ಯ ಮೆರೆದರು. ಮೊದಲ ಸುತ್ತಿನಲ್ಲಿ ಎಲ್ಲಾ 5 ಜಡ್ಜ್‌ಗಳು ಟರ್ಕಿ ಬಾಕ್ಸರ್‌ಗೆ ತಲಾ 10 ಅಂಕ ನೀಡಿದರೆ, ಲೊವ್ಲಿನಾಗೆ 9 ಅಂಕ ನೀಡಿದರು. ಇನ್ನು ಎರಡನೇ ಸುತ್ತಿನ ಆರಂಭದಲ್ಲೇ ಲೊವ್ಲಿನಾ ಉತ್ತಮ ಪಂಚ್‌ಗಳ ಮೂಲಕ ಗಮನ ಸೆಳೆದರು. ಆದರೆ ಕೊನೆಯ 30 ಸೆಕೆಂಡ್‌ಗಳಲ್ಲಿ ಟರ್ಕಿ ಬಾಕ್ಸರ್ ಲೊವ್ಲಿನಾಗೆ ತಿರುಗೇಟು ನೀಡುವ ಮೂಲಕ ಮತ್ತೊಮ್ಮೆ ಪ್ರಾಬಲ್ಯ ಮೆರೆದರು. ಇನ್ನು ಮೂರನೇ ಸೆಟ್‌ನಲ್ಲಿಯೂ ವಿಶ್ವ ಚಾಂಪಿಯನ್ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದಾರೆ. ಬುಧವಾರ ನಡೆದ ಸೆಮಿಫೈನಲ್-1 ಪಂದ್ಯದಲ್ಲಿ ಟರ್ಕಿಯ ಬಾಕ್ಸರ್ ಬುಸೆನಾಜ್ ಸರ್ಮೆನೆಲಿ ಎದುರು ಲವ್ಲಿನಾ 0-5ರ ಸೋಲಿನೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ತನ್ನ ಸ್ಪರ್ಧೆ ಮುಗಿಸಿದ್ದಾರೆ. ಆದರೆ ಭಾರತಕ್ಕೆ ಮೂರನೇ ಪದಕದ ಸಂಭ್ರಮ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ