'2021ರ ಪಾಸ್‌ಔಟ್ ಬ್ಯಾಚ್‌ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ಉದ್ಯೋಗವಿಲ್ಲ!'

By Suvarna NewsFirst Published Aug 4, 2021, 1:22 PM IST
Highlights

* ವಿಶ್ವಾದ್ಯಂತ ಕೊರೋನಾ ಕರಾಳ ನೆರಳು

* ವಿದ್ಯಾರ್ಥಿಗಳ ಪಾಲಿಗೂ ಸಮಸ್ಯೆ ತಂದೊಡ್ಡಿದ ವೈರಸ್ ಹಾವಳಿ

* ಆನ್‌ಲೈನ್ ಮೂಲಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು

* ಪಾಸಾದ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಬ್ಯಾಂಕ್ ಜಾಹೀರಾತು

ಮಧುರೈ(ಆ.04): ಕಳೆದ 18 ತಿಂಗಳು ವಿಶ್ವಾದ್ಯಂತ ವಿದ್ಯಾರ್ಥಿಗಳ ಪಾಳಿಗೆ ಕರಾಳ ದಿನಗಳಂತಿದ್ದವು. ನಿಯಮಿತ ತರಗತಿಗಳಿಗೆ ಹೊಸ ವ್ಯವಸ್ಥೆಗೆ ಒಗ್ಗಿಕೊಂಡಿದ್ದಲ್ಲದೇ, ಪರೀಕ್ಷೆಗಳು, ಪ್ರವೇಶಾತಿ ಮತ್ತು ಉದ್ಯೋಗಕ್ಕಾಗಿ ಅನೇಕ ಸಮಸ್ಯೆಗಳನ್ನೆದುರಿಸುವಂತಾಗಿದೆ. 2020 ಹಾಗೂ 2021ರಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ತಮ್ಮ ಶಿಕ್ಷಣ ಪೂರೈಸಿದ್ದಾರೆ, ಹೀಗಿರುವಾಗ ಇದು 'ಐಡಿಯಲ್ ಲರ್ನಿಂಗ್ ಇಯರ್' ಅಲ್ಲ ಎಂಬುವುದು ಅನೇಕರ ವಾದವಾಗಿದೆ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪದವಿ ವಿದ್ಯಾರ್ಥಿಗಳು ತಮ್ಮ ವೃತ್ತಿ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಮನಸ್ಸಿನಲ್ಲಿ  "ಅವರಿಗೆ ಉದ್ಯೋಗ ಸಿಗುತ್ತದೆಯೇ? ಎಂಬ ಪ್ರಶ್ನೆಯೊಂದೇ ಮನೆ ಮಾಡಿದೆ. ಇಂತಹ ಚಿಂತೆಗಳ ನಡುವೆ ಖಾಸಗಿ ಬ್ಯಾಂಕ್ ಕೊಟ್ಟಿರುವ ಜಾಹೀರಾತು ಭಾರೀ ಪರಿಣಾಮ ಬೀರಿದೆ. ಆಗಸ್ಟ್ 3 ರಂದು ತಮಿಳುನಾಡಿನ ಮಧುರೈನಲ್ಲಿ ಪದವೀಧರರಿಗೆ ಬೆಳಿಗ್ಗೆ 10 ರಿಂದ ವಾಕ್-ಇನ್ ಸಂದರ್ಶನವನ್ನು ಜಾಹೀರಾತಿನ ಮೂಲಕ ಘೋಷಿಸಲಾಗಿತ್ತು. ಆದರೆ ಈ ಜಾಹೀರಾತಿನಲ್ಲಿ ಒಂದು ಹೆಚ್ಚುವರಿ ಸಾಲನ್ನು ಸೇರಿಸಿರುವುದು ಭಾರೀ ಅಚ್ಚರಿಗೀಡು ಮಾಡಿದೆ.

ಜಾಹೀರಾತಿನಲ್ಲೇನಿದೆ?

ಈ ಜಾಹೀರಾತಿನಲ್ಲಿ '2021 ರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಹರಲ್ಲ 'ಎಂದು ಬರೆಯಲಾಗಿದೆ. ಸದ್ಯ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. 

ಬ್ಯಾಂಕ್ ಸ್ಪಷ್ಟಣೆ

ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಬ್ಯಾಂಕ್ ಈ ವಿಚಾರದ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಇದು ತಿಳಿಯದೆ ನಡೆದ ಟೈಪಿಂಗ್ ತಪ್ಪು ಎಂದು ಹೇಳಿರುವ ಬ್ಯಾಂಕ್ ಈ ತಪ್ಪಿಗೆ ನಾವು ವಿಷಾದಿಸುತ್ತೇವೆ ಎಂದೂ ತಿಳಿಸಿದೆ. ವಯಸ್ಸಿನ ಮಿತಿಯೊಳಗೆ ಬರುವ ಯಾವುದೇ ಪದವಿ ಅಭ್ಯರ್ಥಿಗಳು ಸೇರಿಕೊಳ್ಳಬಹುದು ಎಂದು ಬ್ಯಾಂಕ್ ಹೇಳಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ವಕ್ತಾರರು WIONಗೆ ಪ್ರತಿಕ್ರಿಯಿಸುತ್ತಾ  ಉದ್ಯೋಗದ ಈ ಜಾಹೀರಾತಿನ ಸರಿಯಾದ ಆವೃತ್ತಿಯನ್ನು ಮತ್ತೊಮ್ಮೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಟೈಪಿಂಗ್ ತಪ್ಪನ್ನು ಬದಲಾಯಿಸಲಾಗಿದೆ 2021 ಉತ್ತೀರ್ಣರಾದ ಅಭ್ಯರ್ಥಿಗಳು ಕೂಡಾ ಅರ್ಹರು ಎಂದಿದ್ದಾರೆ. 

click me!