1,500 PSA ಆಮ್ಲಜನಕ ಸ್ಥಾವರ ಸ್ಥಾಪನೆ, ಸ್ವಯಂಚಾಲಿತ ತಂತ್ರಜ್ಞಾನದಿಂದ ಮೇಲ್ವಿಚಾರಣೆ!

By Suvarna NewsFirst Published Jul 9, 2021, 1:06 PM IST
Highlights

* ಕೊರೋನಾ ಎರಡನೇ ಅಲೆಯಿಂದ ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ

* ಈ ತಪ್ಪು ಮಮರುಕಳಿಸದಂತೆ ಸರ್ಕಾರದ ಕ್ರಮ

* ಆಕ್ಸಿಜನ್ ಲಭ್ಯತೆ ಹಾಗೂ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದ ಪಿಎಂ ಮೋದಿ

ನವದೆಹಲಿ(ಜ.09): ಕೊರೋನಾ ಎರಡನೇ ಅಲೆ ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ. ಆದದರೆ ಈ ತಪ್ಪು ಮತ್ತೆ ಮರುಕಳಿಸದಂತೆ ಕೇಂದ್ರ ಸರ್ಕಾರ ಕ್ರಮ ವಹಿಸಲಾರಂಭಿಸಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಹತ್ವದ ಸಭೆ ಆಯೋಜಿಸಿದ್ದು, ಆಕ್ಸಿಜನ್ ಲಭ್ಯತೆ ಹಾಗೂ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುತ್ತಿರುವ 1,500 ಕ್ಕೂ ಹೆಚ್ಚು ಪಿಎಸ್‌ಎ ಆಕ್ಸಿಜನ್ ಸ್ಥಾವರಗಳ ಪ್ರಗತಿ ವರದಿಯನ್ನು ಮೋದಿ ಪರಿಶೀಲಿಸಿದ್ದಾರೆ. ಸ್ಥಾವರ ಮೇಲ್ವಿಚಾರಣೆಗೆ ಐಒಟಿಯಂತಹ ತಂತ್ರಜ್ಞಾನದ ಬಳಕೆಯನ್ನು ಮೋದಿ ಮತ್ತಷ್ಟು ಒತ್ತು ನೀಡಿದ್ದು, ಈ ಕುರಿತು ತಾವು ಕೆಲಸ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಮೂಲಕ, ಎಲ್ಲಾ ಸಾಧನಗಳು ಅಂದರೆ ಸಾಧನಗಳನ್ನು ಇಂಟರ್ನೆಟ್ ಮೂಲಕ ಸಂಪರ್ಕಿಸಲಾಗುತ್ತದೆ.

| Prime Minister Narendra Modi at a high-level meeting held today reviewed augmentation & availability of oxygen across the country.

(Video Source: DD) pic.twitter.com/O6jKi9MZr8

— ANI (@ANI)

ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು:

ದೇಶಾದ್ಯಂತ ಪಿಎಸ್‌ಎ ಆಕ್ಸಿಜನ್ ಪ್ಲಾಂಟ್‌ಗಳ ಸ್ಥಾಪನೆಯ ಪ್ರಗತಿಯ ಬಗ್ಗೆ ಅಧಿಕಾರಿಗಳು ಪಿಎಂಗೆ ವಿವರಿಸಿದ್ದಾರೆ. ದೇಶಾದ್ಯಂತ 1500 ಕ್ಕೂ ಹೆಚ್ಚು ಪಿಎಸ್‌ಎ ಆಕ್ಸಿಜನ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಪಿಎಂ ಕೇರ್ಸ್ ಜೊತೆಗೆ ವಿವಿಧ ಸಚಿವಾಲಯಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಸಹಾಯ ನೀಡಿವೆ. ಈ ಪ್ರಕ್ರಿಯೆ ಮೂಲಕ, ಆಮ್ಲಜನಕವು ಗಾಳಿಯಿಂದ ಸ್ವಯಂಚಾಲಿತವಾಗಿ ಉತ್ಪತ್ತಿಯಾಗುತ್ತದೆ.

ಪಿಎಂ ಕೇರ್ಸ್ ಕೊಡುಗೆ ನೀಡಿದ ಪಿಎಸ್ಎ ಆಮ್ಲಜನಕ ಸ್ಥಾವರಗಳನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪಿಎಸ್‌ಎ ಆಮ್ಲಜನಕ ಸ್ಥಾವರಗಳು ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಅವು 4 ಲಕ್ಷಕ್ಕೂ ಹೆಚ್ಚು ಆಮ್ಲಜನಕಯುಕ್ತ ಬೆಡ್‌ಗಳಿಗೆ ಸಾಕಾಗುತ್ತದೆ ಎಂದಿದ್ದಾರೆ.

ಈ ಸ್ಥಾವರಗಳು ಶೀಘ್ರದಲ್ಲಿಯೇ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಪಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಬೇಕು. ಈ ಕುರಿತು ಅಧಿಕಾರಿಗಳು ರಾಜ್ಯ ಸರ್ಕಾರಗಳ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ.

ಮೂರನೇ ಕೊರೋನಾ ಅಲೆ ಎದುರಿಸಲು ಅನೇಕ ಯೋಜನೆಗಳು

ಗುರುವಾರದಂದು ನಡೆದ ಕ್ಯಾಬಿನೆಟ್‌ ಸಭೆ ಬಳಿಕ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಕೊರೋನಾ ಮೂರನೇ ಅಲೆ ಎದುರಿಸಲು ವಿಶೇಷ ತುರ್ತು ಆರೋಗ್ಯ ಪ್ಯಾಕೇಝ್ ಘೋಷಿಸಿದ್ದಾರೆ.

ಮೂರನೇ ಅಲೆ ಎದುರಿಸಲು ವಿಶೇಷ ಪ್ಯಾಕೇಜ್

ಈ ಬಗ್ಗೆ ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯದ ನೂತನ ಸಚಿವ ಮನ್ಸುಖ್‌ ಮಾಂಡವೀಯ ‘ಕೋವಿಡ್‌ ನಿರ್ವಹಣೆಯಲ್ಲಿ ದೇಶದ ಆರೋಗ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು 23123 ಕೋಟಿ ರು. ಪ್ಯಾಕೇಜ್‌ಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 15000 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ನೀಡಲಿದ್ದರೆ, ರಾಜ್ಯ ಸರ್ಕಾರಗಳು 8000 ಕೋಟಿ ರು. ಒದಗಿಸಲಿವೆ. ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ದೇಶಾದ್ಯಂತ ಇರುವ 736 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುವುದು’ ಎಂದು ತಿಳಿಸಿದರು.

ಈ ಯೋಜನೆ ಮೂಲಕ 2.4 ಲಕ್ಷ ಸಾಮಾನ್ಯ ವೈದ್ಯಕೀಯ ಬೆಡ್‌ಗಳು, 20000 ಐಸಿಯು ಬೆಡ್‌ಗಳನ್ನು ಸೃಷ್ಟಿಸಲಾಗುವುದು. ಇದರಲ್ಲಿ ಶೇ.20ರಷ್ಟನ್ನು, ಮೂರನೇ ಅಲೆಯ ವೇಳೆ ಹೆಚ್ಚಿನ ದಾಳಿಗೆ ತುತ್ತಾಗಲಿದ್ದಾರೆ ಎಂಬ ಭೀತಿ ಇರುವ ಮಕ್ಕಳಿಗೆಂದೇ ಮೀಸಲಿಡಲಾಗುವುದು. ಜೊತೆಗೆ 2ನೇ ಅಲೆಯಲ್ಲಿ ಕಾಣಿಸಿಕೊಂಡ ಆಕ್ಸಿಜನ್‌ ಮತ್ತು ಔಷಧ ಕೊರತೆ ಮತ್ತೆ ಕಾಣಿಸಿದಂತೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲಾ ಮಟ್ಟದಲ್ಲೇ ಸಂಗ್ರಹ ಮಾಡಲೂ ಯೋಜನೆಯ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಮಾಂಡವೀಯ ತಿಳಿಸಿದರು.

ಪ್ರತಿ ಜಿಲ್ಲೆಯಲ್ಲಿ ಸಾವಿರ ಲೀಟರ್ ಆಮ್ಲಜನಕ 

ಈಗ ಪ್ರತಿ ಜಿಲ್ಲೆಯಲ್ಲೂ 10 ಸಾವಿರ ಲೀಟರ್ ಆಮ್ಲಜನಕ ಸಂಗ್ರಹಣೆ ವ್ಯವಸ್ಥೆ ಮನಾಡಲಾಗುತ್ತದೆ. ಇದರ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಔಷಧಿಗಳನ್ನು ಸಂಗ್ರಹಿಸುವ ಯೋಜನೆಯೂ ಜಾರಿಗೊಳಿಸಲಾಗುತ್ತದೆ. 736 ಜಿಲ್ಲೆಗಳಲ್ಲಿ ಮಕ್ಕಳ ಘಟಕಗಳನ್ನು ಸ್ಥಾಪಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಸಿಬ್ಬಂದಿಗಳ ಅಗತ್ಯವಿದ್ದರೆ, ಈ ಜುಲೈನಿಂದ ಮುಂದಿನ ಮಾರ್ಚ್‌ವರೆಗೆ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳ ಸೇವೆ ರಾಜ್ಯ ಸರ್ಕಾರಗಳಿಗೆ ಲಭ್ಯವಾಗಲಿದೆ ಎಂದೂ ಮಾಂಡವೀಯ ತಿಳಿಸಿದ್ದಾರೆ. 
 

click me!