ಇಂದು ನರೇಂದ್ರ ಮೋದಿ ಅವರು 71 ವಸಂತಗಳನ್ನು ಪೂರೈಸಿ 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮತ್ತೊಂದೆಡೆ, ಅ.7ಕ್ಕೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 20 ವರ್ಷ ಪೂರ್ಣಗೊಳ್ಳಲಿದೆ. ಈ ಎರಡೂ ಸಂಭ್ರಮವನ್ನು ಅವಿಸ್ಮರಣೀಯವಾಗಿ ಆಚರಿಸಲು ಬಿಜೆಪಿ ಮುಂದಾಗಿದೆ.
ಮೋದಿ ಅವರು ಅಧಿಕಾರಕ್ಕೆ ಬಂದು 20 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನು ‘ಸೇವೆ ಹಾಗೂ ಸಮರ್ಪಣಾ ಅಭಿಯಾನ’ದ ಹೆಸರಿನಲ್ಲಿ ಬೃಹತ್ತಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ರಕ್ತದಾನ ಶಿಬಿರ, ಲಸಿಕಾ ಮೇಳ, ಸ್ವಚ್ಛ ಭಾರತ ಅಭಿಯಾನ, ಪ್ರಧಾನಿ ಮೋದಿ ಕುರಿತು ವಸ್ತು ಪ್ರದರ್ಶನ, ಗಣ್ಯ ವ್ಯಕ್ತಿಗಳಿಂದ ಭಾಷಣ, ಪತ್ರಿಕೆಗಳಲ್ಲಿ ಲೇಖನ, ಮೋದಿ ಅವರಿಗೆ ಲಭಿಸಿದ ಉಡುಗೊರೆಗಳ ಹರಾಜು, ಮೋದಿ ಅವರಿಗೆ ಕಾರ್ಯಕರ್ತರಿಂದ ಪತ್ರ ಬರೆಸುವಂತಹ ಅಭಿಯಾನವನ್ನು ಹಮ್ಮಿಕೊಂಡಿದೆ.
ಸೆ.26ರ ಮನ್ ಕಿ ಬಾತ್‌ಗೆ ನಿಮ್ಮ ಸಲಹೆ, ಸೂಚನೆ ಆಹ್ವಾನಿಸಿದ ಪಿಎಂ ಮೋದಿ!
ಮೋದಿ ಅವರ 72ನೇ ಹುಟ್ಟುಹಬ್ಬವಾದ ಸೆ.17ರಿಂದ 20 ದಿನಗಳ ಕಾಲ ಬಿಜೆಪಿಯ ಮೆಗಾ ಅಭಿಯಾನ ದೇಶಾದ್ಯಂತ ನಡೆಯಲಿದೆ. ಕರ್ನಾಟಕದಲ್ಲಿಯೂ ಬಿಜೆಪಿಯ ವತಿಯಿಂದ ಸೆ.17ರಿಂದ ಅ.6ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುವ ಪುಸ್ತಕವೊಂದನ್ನು ಬಿಡುಗಡೆ ಮಾಡಲಿದ್ದಾರೆ. ದೇಶದ ಉದ್ದಗಲಕ್ಕೂ ನಡೆಯುವ ಈ ಕಾರ್ಯಕ್ರಮಗಳಲ್ಲಿ ಅಸಂಖ್ಯಾತ ಸಚಿವರು, ಶಾಸಕರು, ಮುಖಂಡರು ಪಾಲ್ಗೊಂಡು ಯಶಸ್ಸಿಗೆ ಸಾಥ್ ನೀಡಲಿದ್ದಾರೆ.
2001ರ ಅ.7ರಂದು ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಒಮ್ಮೆಯೂ ಶಾಸಕ ಕೂಡ ಆಗದೆ ನೇರವಾಗಿ ಮುಖ್ಯಮಂತ್ರಿ ಗದ್ದುಗೆಗೇರಿದ್ದರು. ಗುಜರಾತಿನ ಅಭಿವೃದ್ಧಿಗೆ ಹೊಸ ವೇಗ ನೀಡಿದರು. ಯಶಸ್ವಿಯಾಗಿ ಆಡಳಿತ ನಡೆಸುವ ಮೂಲಕ ಗುಜರಾತ್ ಮಾದರಿ ಎಂಬ ಹೊಸ ಪದವನ್ನೇ ಸೃಷ್ಟಿಸಿದ್ದರು. 2013ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ಅವರು, ಐತಿಹಾಸಿಕ ಬಹುಮತದೊಂದಿಗೆ ಬಿಜೆಪಿಯನ್ನು ಗದ್ದುಗೆಗೇರಿಸಿದರು. 2014ರಲ್ಲಿ ಪ್ರಧಾನಿಯಾದರು. ಆನಂತರವು ಹಲವು ಯೋಜನೆ, ಸುಧಾರಣೆ, ದಿಟ್ಟನಿರ್ಧಾರಗಳ ಮೂಲಕ ಜನಸಾಮಾನ್ಯರ ಮನ ಗೆದ್ದರು. ಒಟ್ಟಾರೆ 2001ರಿಂದ 2021ರವರೆಗೂ ಮೋದಿ ಅವರು ಸತತ 20 ವರ್ಷಗಳ ಕಾಲ ಅಧಿಕಾರದಲ್ಲಿದ್ದಾರೆ. ಒಮ್ಮೆಯೂ ಮಾಜಿ ಆಗಿಲ್ಲ. ಬಿಜೆಪಿ ಎಂದಿಗೂ ಗೆಲ್ಲದ ರಾಜ್ಯಗಳಲ್ಲಿ ಪಕ್ಷವನ್ನು ಗೆಲ್ಲಿಸಿದ, ಬಿಜೆಪಿಯನ್ನು ವಿಶ್ವದ ಅತಿದೊಡ್ಡ ಪಕ್ಷವನ್ನಾಗಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ.
ಪ್ರಧಾನಿ ಮೋದಿ ರೀತಿ ನಾವೂ ದುಡಿಯೋಣ : ಸಿಎಂ ಬಸವರಾಜ ಬೊಮ್ಮಾಯಿ
ಏನೇನು ಕಾರ್ಯಕ್ರಮ?
1. ಮೋದಿ ಅವರು ಸ್ವಚ್ಛ ಭಾರತ ಅಭಿಯಾನದ ರೂವಾರಿ. ದೇಶವನ್ನು ಸ್ವಚ್ಛವಾಗಿ ಇಡಲು ಹೊಸ ಆಂದೋಲನವನ್ನೇ ಶುರು ಮಾಡಿದ ನಾಯಕ. ಹೀಗಾಗಿ ಅವರ ಜನ್ಮದಿನ ಹಾಗೂ ಅಧಿಕಾರದ ವರ್ಷಾಚರಣೆ ಸಂದರ್ಭದಲ್ಲಿ ದೇಶಾದ್ಯಂತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ. ಇದಲ್ಲದೆ, ರಕ್ತದಾನ ಶಿಬಿರ, ಬಡವರಿಗೆ ಉಚಿತ ಆಹಾರ ಧಾನ್ಯ ಹಾಗೂ ಲಸಿಕೆ ವಿತರಣೆ ಈ ಕಾರ್ಯಕ್ರಮದ ಭಾಗವಾಗಿರಲಿದೆ. ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿ ಬೂತ್‌ಗಳಿಂದ ಬಿಜೆಪಿ ಕಾರ್ಯಕರ್ತರು 5 ಕೋಟಿ ಪತ್ರಗಳನ್ನು ಪ್ರಧಾನಿ ಅವರಿಗೆ ರವಾನಿಸಲಿದ್ದಾರೆ.
2. ಮೋದಿ ಅವರ ಜೀವನದ ಕುರಿತು ವಿಶೇಷ ಪ್ರದರ್ಶನ ಆಯೋಜಿಸುವುದು, ಪಡಿತರ ಕೇಂದ್ರಗಳಿಗೆ ಎಲ್ಲ ಪ್ರತಿನಿಧಿಗಳೂ ಹೋಗಿ ಪ್ರಧಾನಿ ಅವರಿಗೆ ಧನ್ಯವಾದ ಹೇಳುವ ವಿಡಿಯೋ ಚಿತ್ರೀಕರಿಸುವುದು, ಯುವ ಘಟಕ ರಕ್ತದಾನ ಶಿಬಿರ ಆಯೋಜಿಸುವುದು ಮೋದಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.
3. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರು ಗಂಗಾ ನದಿ ತೀರದ 71 ಸ್ಥಳಗಳಲ್ಲಿ ಸ್ವಚ್ಛತಾ ಶಿಬಿರ ನಡೆಸಲಿದ್ದಾರೆ.
4. ದೇಶಾದ್ಯಂತ ಮೋದಿ ಅವರ ಜೀವನ ಹಾಗೂ ಸಾಧನೆ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು, ಇದಕ್ಕೆ ಪ್ರಸಿದ್ಧ ವ್ಯಕ್ತಿಗಳು ಹಾಗೂ ಚಿಂತಕರನ್ನು ಆಹ್ವಾನಿಸಲಾಗುತ್ತಿದೆ.
5. ವಿವಿಧ ಭಾಷೆಗಳಲ್ಲಿ ಗಣ್ಯ ವ್ಯಕ್ತಿಗಳಿಂದ ಅಭಿಪ್ರಾಯ ಹಾಗೂ ಲೇಖನವನ್ನು ಪ್ರಕಟಿಸಿ, ಹೆಚ್ಚಿನ ಜನರಿಗೆ ಸಂದೇಶ ತಲುಪುವಂತೆ ನೋಡಿಕೊಳ್ಳಲಾಗುತ್ತದೆ. ನಮೋ ಆ್ಯಪ್ ಮೂಲಕ ವರ್ಚುವಲ್ ಕಾರ್ಯಕ್ರಗಳು ಕೂಡ ನಡೆಯಲಿವೆ.
6. ಎಲ್ಲಾ ಜನಪ್ರತಿನಿಧಿಗಳು ಪಡಿತರ ಮಳಿಗೆಗಳಿಗೆ ತೆರಳಿ, ಬಡವರಿಗೆ ಅಕ್ಕಿ, ಧಾನ್ಯಗಳನ್ನು ವಿತರಿಸುತ್ತಿರುವುದರ ವಿಡಿಯೋಗಳನ್ನು ಪ್ರಕಟಿಸಿ ಮೋದಿ ಅವರಿಗೆ ಧನ್ಯವಾದವನ್ನು ಅರ್ಪಿಸಲಿದ್ದಾರೆ.
7. ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು ಮತ್ತು ರೈತರಿಗೆ ಮೋದಿ ಅವರ ನೀಡಿದ ಕೊಡುಗೆಗಳನ್ನು ಬಿಜೆಪಿ ಜನರಿಗೆ ತಲುಪಿಸಲಿದೆ.
8. ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗುತ್ತದೆ. ಬಿಜೆಪಿಯ ಯುವ ಘಟಕದ ವತಿಯಿಂದ ರಕ್ತದಾನ ಶಿಬಿರ ನಡೆಯಲಿದೆ.
9. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ವಿತರಣೆ ಮಾಡಲಾಗುತ್ತದೆ. ಇದರಲ್ಲಿ ಮಹಿಳಾ ನಾಯಕಿಯರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಎಲ್ಲ ಪ್ರತಿನಿಧಿಗಳು ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಪ್ರಧಾನಿಗೆ ಧನ್ಯವಾದ ಸಲ್ಲಿಸಲಿದ್ದಾರೆ.
10. ಅ.2ರ ಗಾಂಧಿ ಜಯಂತಿಯ ದಿನ ಸಾಮೂಹಿಕ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುತ್ತದೆ. ಖಾದಿ ಹಾಗೂ ಸ್ಥಳೀಯ ಉತ್ಪನ್ನ ಬಳಸುವಂತೆ ಸಾರ್ವಜನಿಕರಿಗೆ ಸಂದೇಶ ರವಾನಿಸಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಅನಾಥರಾದ ಮಕ್ಕಳನ್ನು ಬಿಜೆಪಿ ಕಾರ್ಯಕರ್ತರು ನೋಂದಾಯಿಸಲಿದ್ದಾರೆ. ತನ್ಮೂಲಕ ಪಿಎಂ-ಕೇರ್ ನಿಧಿಯಡಿ ಪ್ರಯೋಜನ ಪಡೆಯಲು ನೆರವಾಗಲಿದ್ದಾರೆ. ಪ್ರಧಾನಿ ಅವರು ಸ್ವೀಕರಿಸಿರುವ ಎಲ್ಲ ಉಡುಗೊರೆಗಳನ್ನು ಹರಾಜು ಹಾಕಲಾಗುತ್ತದೆ.