ಇಂಗಾಲ ಹೊರಸೂಸುವಿಕೆಯಲ್ಲಿ ಭಾರತದ ಕೊಡುಗೆ ಕೇವಲ 5%, ಶ್ರೀಮಂತ ದೇಶಗಳ ಪಾಲೇ ಹೆಚ್ಚು!

Kannadaprabha News   | Asianet News
Published : Nov 04, 2021, 09:47 AM ISTUpdated : Nov 04, 2021, 05:39 PM IST
ಇಂಗಾಲ ಹೊರಸೂಸುವಿಕೆಯಲ್ಲಿ ಭಾರತದ ಕೊಡುಗೆ ಕೇವಲ 5%, ಶ್ರೀಮಂತ ದೇಶಗಳ ಪಾಲೇ ಹೆಚ್ಚು!

ಸಾರಾಂಶ

ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ 450 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನದ ಹೊಸ ಗುರಿಯನ್ನು ಘೋಷಿಸಿದ್ದರು. ಗ್ಲಾಸ್ಗೋದಲ್ಲಿ ಈ ಗುರಿಯನ್ನು 500 ಗಿಗಾವ್ಯಾಟ್‌ಗೆ ಹೆಚ್ಚಿಸಿದ್ದಾರೆ. 

2015ರಲ್ಲಿ ಒಂದು ಒಪ್ಪಂದಕ್ಕೆ ಕಾರಣವಾದ ಪ್ಯಾರಿಸ್‌ ಹವಾಮಾನ ಶೃಂಗಸಭೆಯ ನಂತರ ಗ್ಲಾಸ್ಗೋ ಸಿಒಪಿ 26 (ಕಾಪ್‌) ಒಂದು ದೊಡ್ಡ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಗ್ಲಾಸ್ಗೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವು ಭಾರತವನ್ನು ನಾಯಕತ್ವದ ಸ್ಥಾನದಲ್ಲಿ ಇರಿಸಿದೆ.

ಅವರ ಭಾಷಣವು ಭಾರತ ಕೈಗೊಂಡ ಕ್ರಮಗಳ ಬಗ್ಗೆ ಅತ್ಯುನ್ನತ ವಿಶ್ವಾಸವನ್ನು ಹೊಂದಿತ್ತು. ಅದು ಜಗತ್ತು ಕಾರ್ಯಪ್ರವೃತ್ತವಾಗಲು ಒತ್ತಾಯಿಸಿ, ಹವಾಮಾನ ನ್ಯಾಯ ಮತ್ತು ಜೀವನಶೈಲಿಯ ಸಮಸ್ಯೆಗಳ ಪರಿಕಲ್ಪನೆಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ದೃಷ್ಟಿಕೋನಗಳನ್ನು ಮುಂದಿಟ್ಟಿತು. ಪ್ರಧಾನಿಯವರು ಭಾರತದ 5 ಮಹತ್ವದ ಘೋಷಣೆಗಳನ್ನು ಮಾಡಿದರು. ಮೊದಲನೆಯದು, ಭಾರತವು 500 ಗಿಗಾವ್ಯಾಟ್‌ ಪಳೆಯುಳಿಕೆಯೇತರ ಇಂಧನವನ್ನು ತಯಾರಿಸುತ್ತದೆ. ಎರಡನೆಯದು, ಭಾರತವು ನವೀಕರಿಸಬಹುದಾದ ಇಂಧನಗಳಿಂದ ಶೇ.50ರಷ್ಟುಇಂಧನ ಮಿಶ್ರಣವನ್ನು ಸಾಧಿಸುತ್ತದೆ. ಮೂರನೆಯದಾಗಿ, ಭಾರತವು ತನ್ನ ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಶೇ.35ರಿಂದ ಶೇ.45ಕ್ಕೆ ತಗ್ಗಿಸುತ್ತದೆ.

ಭಾರತವು ಇಂಗಾಲದ ಹೊರಸೂಸುವಿಕೆಯನ್ನು 1 ಶತಕೋಟಿ ಟನ್‌ಗಳಷ್ಟುಕಡಿತಗೊಳಿಸಲು ಬದ್ಧವಾಗಿದೆ. 2030ರ ವೇಳೆಗೆ ಈ ಎಲ್ಲಾ 4 ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಂತಿಮವಾಗಿ, ಅವರು ಜಗತ್ತು ಕಾಯುತ್ತಿದ್ದ ಐದನೇ ಐತಿಹಾಸಿಕ ಘೋಷಣೆಯನ್ನು ಮಾಡಿದರು. ಅದುವೇ ಭಾರತವು 2070ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ಸಾಧಿಸುತ್ತದೆ ಎಂಬುದು.

COP26 Summit| ಇಡೀ ವಿಶ್ವಕ್ಕೊಂದು ಪವರ್‌ಗ್ರಿಡ್: 'ಕಾಪ್ 26' ಶೃಂಗದಲ್ಲಿ ಮೋದಿ ಪರಿಕಲ್ಪನೆ!

ಮೋದಿಯಿಂದ ಬೃಹತ್‌ ಗುರಿ

2014ರಲ್ಲಿ, ನಮ್ಮ ನವೀಕರಿಸಬಹುದಾದ ಇಂಧನವು ಕೇವಲ 20 ಗಿಗಾವ್ಯಾಟ್‌ ಸಾಮರ್ಥ್ಯದ್ದಾಗಿತ್ತು. 2022ರ ವೇಳೆಗೆ ಇದನ್ನು 100 ಗಿಗಾವ್ಯಾಟ್‌ಗೆ ಹೆಚ್ಚಿಸಲು ಪ್ರಧಾನಿ ನಿರ್ಧರಿಸಿದ್ದಾರೆ. 16 ರು. ಇದ್ದ ಸೌರ ವಿದ್ಯುತ್‌ ಯೂನಿಟ್‌ ವೆಚ್ಚ ಈಗ 2 ರು. ಗೆ ಇಳಿದಿದೆ. ಸೌರ, ಪವನ ಮತ್ತು ಜೈವಿಕ ಇಂಧನದ ಮೇಲೆ ಅಪಾರ ಪ್ರಮಾಣದ ಹೂಡಿಕೆಗಳು ಆಗುತ್ತಿವೆ. ನಾವು ಮುಂದಿನ ವರ್ಷ 100 ಗಿಗಾವ್ಯಾಟ್‌ ಸೌರಶಕ್ತಿ ಸಾಧನೆಯ ಹಾದಿಯಲ್ಲಿದ್ದೇವೆ. ಕಳೆದ ವರ್ಷ ಪ್ರಧಾನಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 450 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನದ ಹೊಸ ಗುರಿಯನ್ನು ಘೋಷಿಸಿದ್ದರು.

ಗ್ಲಾಸ್ಗೋದಲ್ಲಿ ಅವರು ಗುರಿಯನ್ನು 500 ಗಿಗಾವ್ಯಾಟ್‌ಗೆ ಹೆಚ್ಚಿಸಿದ್ದಾರೆ. ಇದೊಂದು ಬೃಹತ್‌ ಗುರಿಯಾಗಿದೆ! ಮುಂದೆ ಅಷ್ಟುಪ್ರಮಾಣದಲ್ಲಿ ನವೀಕರಿಸಬಹುದಾದ ಇಂಧನವನ್ನು ಸಾಧಿಸಲಿರುವ 4ನೇ ದೇಶ ಭಾರತವಾಗಲಿದೆ. ಭಾರತದ ಈ ಅದ್ಭುತ ಕ್ರಮವನ್ನು ವಿಶ್ವವೇ ಗಮನಿಸುತ್ತಿದೆ. ಭಾರತದ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಕೂಡ ವೇಗವಾದ ಪ್ರಗತಿಯಲ್ಲಿದೆ. ಜೈವಿಕ ಇಂಧನದಲ್ಲಿ ವಾಣಿಜ್ಯ ವಿಮಾನವನ್ನು ಹಾರಿಸಿದ ಏಕೈಕ ದೇಶ ಭಾರತ. ನವೀಕರಿಸಬಹುದಾದ ವಸ್ತುಗಳಿಂದ ನಾವು ಈಗಾಗಲೇ ಶೇ.40ರಷ್ಟುಇಂಧನ ಮಿಶ್ರಣವನ್ನು ಸಾಧಿಸಿದ್ದೇವೆ.

2030 ರ ವೇಳೆಗೆ ನವೀಕರಿಸಬಹುದಾದ ಇಂಧನದ ಶೇ.50 ಮಿಶ್ರಣದ ಮೂಲಕ ಪ್ರಧಾನಿ ನೀಡಿರುವ ಹೊಸ ಗುರಿಯನ್ನು ಭಾರತ ಸಾಧಿಸುವುದು ಖಚಿತವಾಗಿದೆ. ಸೌರ ಶಕ್ತಿಯ ಸಮಸ್ಯೆಯೆಂದರೆ ಬ್ಯಾಟರಿ ಸಂಗ್ರಹಣೆ ಮತ್ತು ಪ್ರಸರಣ. ಇಲ್ಲಿ ಆವಿಷ್ಕಾರ, ಹೂಡಿಕೆ ಮತ್ತು ಕಡಿಮೆ ವೆಚ್ಚದ ತಂತ್ರಜ್ಞಾನದ ಪಾತ್ರ ಮುಖ್ಯ. ಭಾರತ ಈ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಭಾರತ ಸೌರ-ಪವನ ಶಕ್ತಿಯ ಸಂಯೋಜಿತ ಘಟಕಗಳನ್ನು ಪ್ರಯೋಗಿಸಿ ಉತ್ತೇಜಿಸುತ್ತಿದೆ.

ಎಲ್‌ಇಡಿ ಬಲ್ಬ್‌ನಿಂದ ನೆರವು

ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಶೇ.35ರಿಂದ ಶೇ.45ಕ್ಕೆ ತಗ್ಗಿಸುವ ಗುರಿ ಸಹ ಮಹತ್ವಾಕಾಂಕ್ಷಿಯಾದುದು. ಅದೃಷ್ಟವಶಾತ್‌, ಭಾರತೀಯ ಉದ್ಯಮವು 2050ರ ವೇಳೆಗೆ ನಿವ್ವಳ ಶೂನ್ಯ ಇಂಗಾಲವನ್ನು ಸಾಧಿಸಲು ಯೋಜಿಸಿದೆ. ಹೀಗಾಗಿ ಶುದ್ಧ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದೆ. ಭಾರತೀಯ ರೈಲ್ವೆ 2030ರ ವೇಳೆಗೆ ನಿವ್ವಳ ಶೂನ್ಯ ಇಂಗಾಲವನ್ನು ಸಾಧಿಸುತ್ತದೆ ಮತ್ತು 6 ಕೋಟಿ ಟನ್‌ ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸುತ್ತದೆ. 200 ಕೋಟಿ ಎಲ್‌ಇಡಿ ಬಲ್ಬ್‌ಗಳು ಇಂಗಾಲದ ಹೊರಸೂಸುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುತ್ತಿವೆ. ಹೀಗಾಗಿ, ಒಂದು ಶತಕೋಟಿ ಟನ್‌ ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಪ್ರಧಾನ ಮಂತ್ರಿಯವರ ಘೋಷಣೆ ಕಾರ್ಯಸಾಧ್ಯವಾಗಿದೆ. ಅದನ್ನು ಖಂಡಿತವಾಗಿ ಭಾರತ ಸಾಧಿಸಲಿದೆ.

Modi In Glasgow | ದ್ವೀಪ ದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ನೆರವು: ಮೋದಿ

ಹಣಕಾಸು, ತಂತ್ರಜ್ಞಾನ, ಅಳವಡಿಕೆ, ಜೀವನಶೈಲಿ ಮತ್ತು ಹವಾಮಾನ ನ್ಯಾಯದ ಸಮಸ್ಯೆಯ ವಿಷಯದಲ್ಲಿ ಪ್ರಧಾನಿಯವರ ಭಾಷಣ ನೇರವಾಗಿತ್ತು. 2009ರಲ್ಲಿ, ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ಗುರಿಗಳನ್ನು ಸಾಧಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪ್ರತಿ ವರ್ಷ 100 ಶತಕೋಟಿ ಡಾಲರ್‌ಗಳನ್ನು ಅನುದಾನವಾಗಿ ನೀಡಲು ಬದ್ಧವಾಗಿದ್ದವು. ಈ ಭರವಸೆ ಹುಸಿಯಾಗಿದೆ ಎಂದು ಪ್ರಧಾನಿ ಶೃಂಗಸಭೆಯಲ್ಲಿ ಹೇಳಿದರು. ಆದ್ದರಿಂದ ಅವರು ಬಾಕಿ ಇರುವ ಒಂದು ಟ್ರಿಲಿಯನ್‌ ಡಾಲರ್‌ಗಳನ್ನು ಪಾವತಿಸುವಂತೆ ಅಭಿವೃದ್ಧಿ ಹೊಂದಿದ ದೇಶಗಳನ್ನು ಒತ್ತಾಯಿಸಿದರು. ಇದು ಹವಾಮಾನ ನ್ಯಾಯದ ಭಾಗವಾಗಿದೆ ಎಂದು ಅವರು ವಿಶ್ವಕ್ಕೆ ತಿಳಿ ಹೇಳಿದರು.

ಕಡಿಮೆ ವೆಚ್ಚದ ತಂತ್ರಜ್ಞಾನ

ಪ್ರಧಾನಿಯವರು ಕಡಿಮೆ ವೆಚ್ಚದ ತಂತ್ರಜ್ಞಾನ ವರ್ಗಾವಣೆಯನ್ನು ಪ್ರತಿಪಾದಿಸಿದರು. ತಾಪಮಾನ ಏರಿಕೆ ತಡೆಯುವ ಪ್ರತಿ ಹೆಜ್ಜೆಗೂ ಸಾಕಷ್ಟುಹಣ ವ್ಯಯಿಸಬೇಕಾಗುತ್ತದೆ. ಬಡ ವರ್ಗಗಳಿಗೆ ಇದು ಹೊರೆಯಾಗಬಾರದು. ಆದ್ದರಿಂದ, ಈ ತಂತ್ರಜ್ಞಾನ ವರ್ಗಾವಣೆ ಮುಖ್ಯವಾಗಿದೆ. ಹವಾಮಾನ ಬದಲಾವಣೆಯಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕೃಷಿ ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿರುವ ಕಾರಣ ಹೊಂದಾಣಿಕೆಗೆ ಹಣಕಾಸು ಒದಗಿಸುವ ಕುರಿತು ಅವರು ಮಾತನಾಡಿದರು.

ಭಾರತದ ಸಿಡಿಆರ್‌ಐ (ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ) ಉಪಕ್ರಮದ ಬಗ್ಗೆ ಒತ್ತಿ ಹೇಳಿದರು. ಜೀವನಶೈಲಿಯ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡಿದರು. ವಿನಾಶಕಾರಿ ಕೊಳ್ಳುಬಾಕತೆಯನ್ನು ನಿಲ್ಲಿಸಬೇಕು ಮತ್ತು ನಾವು ಸುಸ್ಥಿರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಜಗತ್ತಿಗೆ ನೇರವಾಗಿ ಹೇಳಿದರು. ಪರಿಸರಕ್ಕಾಗಿ ಜೀವನ ಎಂದು ‘ಲೈಫ್‌’ ಎಂಬ ಪದಕ್ಕೆ ಅವರು ಹೊಸ ಅರ್ಥ ನೀಡಿದರು.

ಶೃಂಗದಲ್ಲಿ ಭಾರತದ ಪ್ರಭಾವ

ಹಿಂದಿನ ಹವಾಮಾನ ಶೃಂಗಸಭೆಗಳ ನನ್ನ ಅನುಭವದಲ್ಲಿ ಹೇಳುವುದಾದರೆ ಗ್ಲಾಸ್ಗೋದಲ್ಲಿ ಪ್ರಧಾನ ಮಂತ್ರಿಯವರ ಧ್ವನಿ ಗಟ್ಟಿಯಾಗಿದೆ. ಫಲಿತಾಂಶವು ಭಾರತದ ಕ್ರಮಗಳು ಮತ್ತು ಮನವಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪ್ಯಾರಿಸ್‌ ಒಪ್ಪಂದದ ಬದ್ಧತೆಗಳು ಕೇವಲ ಟಾಕ್‌ ಶೋ ಅಲ್ಲ.

ಅವು ಜಗತ್ತಿಗೆ ನೀಡಿದ ವಾಗ್ದಾನಗಳಾಗಿವೆ ಎಂದು ಅವರು ಒತ್ತಿ ಹೇಳಿದರು. ಪ್ಯಾರಿಸ್‌ ಬದ್ಧತೆಯನ್ನು ಪೂರೈಸಿದ ಏಕೈಕ ದೊಡ್ಡ ಆರ್ಥಿಕತೆ ಭಾರತವಾಗಿದೆ ಎಂದು ಹೆಮ್ಮೆಯಿಂದ ಹೇಳಿದರು. ಅನಿಯಮಿತ ಹವಾಮಾನ ಪರಿಸ್ಥಿತಿಗಳು, ಪ್ರವಾಹಗಳು, ಬರ, ಚಂಡಮಾರುತ, ಹಿಮ ಕರಗುವಿಕೆ, ಸಮುದ್ರ ಮಟ್ಟಏರಿಕೆ ಮತ್ತು ಬೆಳೆ ಮಾದರಿಗಳಲ್ಲಿನ ಬದಲಾವಣೆಗಳಿಗೆ ಕಾರಣವಾಗುವ ಹವಾಮಾನ ಬದಲಾವಣೆಯ ಕಾರಣವನ್ನು ನಾವು ಅರ್ಥಮಾಡಿಕೊಳ್ಳಬೇಕು.

ತಮ್ಮ ಪ್ರಗತಿಗಾಗಿ ಪಳೆಯುಳಿಕೆ ಇಂಧನ ಮತ್ತು ಕಲ್ಲಿದ್ದಲನ್ನು ಬಳಸುವ ದೇಶಗಳು ವಾತಾವರಣಕ್ಕೆ ಭಾರೀ ಪ್ರಮಾಣದ ಇಂಗಾಲವನ್ನು ಹೊರಸೂಸುತ್ತವೆ. ಇದು 100 ವರ್ಷಗಳಿಗೂ ಹೆಚ್ಚು ಕಾಲ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ. ಐತಿಹಾಸಿಕವಾಗಿ ಇಂಗಾಲ ಹೊರಸೂಸುವಿಕೆಯಲ್ಲಿ ಭಾರತದ ಕೊಡುಗೆ ಕೇವಲ ಶೇ.3 ಮತ್ತು ಪ್ರಸ್ತುತ ಹೊರಸೂಸುವಿಕೆಯಲ್ಲಿ ಭಾರತದ ಕೊಡುಗೆ ಕೇವಲ ಶೇ.5 ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳು ಹೊರಸೂಸುವಿಕೆಯಲ್ಲಿ ಹೆಚ್ಚು ಪಾಲು ಹೊಂದಿವೆ. ಈಗ ಅಭಿವೃದ್ಧಿಶೀಲ ರಾಷ್ಟ್ರಗಳು ಸಹ ಈ ಹೊರಸೂಸುವಿಕೆ ಮತ್ತು ಅದರ ಪರಿಣಾಮವಾಗಿ ಹವಾಮಾನ ಬದಲಾವಣೆಯಿಂದ ಬಳಲುತ್ತಿವೆ. ಅಭಿವೃದ್ಧಿ ಹೊಂದಿದ ಜಗತ್ತು ತನ್ನ ಬದ್ಧತೆಯನ್ನು ಪೂರೈಸಿದರೆ ವಿಶ್ವಕ್ಕೆ ಭವಿಷ್ಯವಿದೆ. ಅಭಿವೃದ್ಧಿ ಹೊಂದಿದ ಜಗತ್ತು ವಿಪತ್ತಿನಿಂದ ಲಾಭ ಪಡೆಯಬಾರದು ಎಂದು ನಾನು ಯಾವಾಗಲೂ ಒತ್ತಿ ಹೇಳುತ್ತಿರುತ್ತೇನೆ.

- ಪ್ರಕಾಶ್‌ ಜಾವ್ಡೇಕರ್‌, ರಾಜ್ಯಸಭಾ ಸದಸ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ