ಲಸಿಕೆ ಪಡೆವವರಿಗೆ ಆಯ್ಕೆ ಅವಕಾಶ ಇಲ್ಲ| ಕೋವಿಶೀಲ್ಡ್, ಕೋವ್ಯಾಕ್ಸಿನ್ ಯಾವುದು ಕೊಟ್ಟರೂ ಪಡೆಯಬೇಕು| ಲಸಿಕೆ ಲಭ್ಯತೆ, ಸಾಗಣಿಕೆ ಮಿತಿಗಳ ಹಿನ್ನೆಲೆಯಲ್ಲಿ ಇದು ಅನಿವಾರ‍್ಯ
ನವದೆಹಲಿ(ಜ.14): ಜ.16ರಿಂದ ಆರಂಭವಾಗಲಿರುವ ಕೋವಿಡ್ ಲಸಿಕೆ ನೀಡಿಕೆ ಆಂದೋಲನದ ವೇಳೆ ಲಸಿಕೆ ಪಡೆಯುವವರಿಗೆ ಲಸಿಕೆಗಳ ಆಯ್ಕೆಗಳ ಅವಕಾಶ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ನೀತಿ ಆಯೋಗ ಮತ್ತು ಐಸಿಎಂಆರ್‌ನ ಅಧಿಕಾರಿಗಳ ತಂಡ, ಕೇಂದ್ರ ಸರ್ಕಾರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಈ ಪೈಕಿ ತಮಗೆ ಬೇಕಾದ ಲಸಿಕೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಲಸಿಕೆ ಪಡೆಯುವವರಿಗೆ ಇರುವುದಿಲ್ಲ. ಲಸಿಕೆಗಳ ಲಭ್ಯತೆ, ಸಾಗಣಿಕೆಯ ಇತಿಮಿತಿಯ ನಡುವೆ ಇಂಥ ನಿರ್ಧಾರ ಅನಿವಾರ್ಯ ಎಂದು ತಿಳಿಸಿದ್ದಾರೆ. ಅಲ್ಲದೆ ವಿಶ್ವದ ಯಾವುದೇ ದೇಶದಲ್ಲೂ ಲಸಿಕೆ ಪಡೆಯುವವರಿಗೆ ಲಸಿಕೆಯ ಆಯ್ಕೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೈದ್ರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆಯು, ಕೇಂದ್ರ ಸರ್ಕಾರಿ ಸ್ವಾಮ್ಯದ ಐಸಿಎಂಆರ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಇನ್ನೂ ಮೂರನೇ ಹಂತದ ಪ್ರಯೋಗ ಆರಂಭಿಸಿಲ್ಲ. ಅದಕ್ಕೂ ಮೊದಲೇ ಅದಕ್ಕೆ ಕೋವಿಶೀಲ್ಡ್ ಮಾದರಿಯಲ್ಲೇ ಬಳಕೆಗೆ ಅನುಮತಿ ನೀಡಿದ್ದರ ಬಗ್ಗೆ ಕೆಲ ವಿಪಕ್ಷಗಳು ಆಕ್ಷೇಪ ಮತ್ತು ಅನುಮಾನ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಲಸಿಕೆಯ ಕಾರ್ಯಕ್ಷಮತೆಯ ಬಗ್ಗೆ ಒಂದಿಷ್ಟುಅನುಮಾನಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದೇ ವೇಳೆ ಮೊದಲ ಹಂತದಲ್ಲಿ ಲಸಿಕೆ ಪಡೆಯಲಿರುವ 1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಸಿಬ್ಬಂದಿಗಳ ಹೆಸರು ನೋಂದಣಿ ಈಗಾಗಲೇ ಕೋವಿನ್ ಆ್ಯಪ್‌ನಲ್ಲಿ ಪೂರ್ಣಗೊಂಡಿದೆ. ಅವರಿಗೆಲ್ಲಾ ಲಸಿಕೆ ನೀಡುವ ಹಿಂದಿನ ದಿನ ಎಸ್‌ಎಂಎಸ್ ಮೂಲಕ ಲಸಿಕೆ ಕುರಿತು ಎಲ್ಲಾ ಮಾಹಿತಿ ರವಾನಿಸಲಾಗುತ್ತದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯ್ತು.