ಪತ್ನಿ ಕಷ್ಟ ನೋಡಲಾಗದೆ 15 ದಿನದಲ್ಲೇ ಬಾವಿ ತೋಡಿದ ಪತಿ!

By Suvarna NewsFirst Published Jan 14, 2021, 9:47 AM IST
Highlights

ಪತ್ನಿಗಾಗಿ 15 ದಿನದಲ್ಲೇ ಬಾವಿ ತೋಡಿದ ಪತಿ| ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲೊಂದು ಅಪರೂಪದ ಘಟನೆ| ದಿನಗೂಲಿ ಕಾರ್ಮಿಕನ ಕಾರ‍್ಯವೈಖರಿಗೆ ಜಿಲ್ಲಾಡಳಿತವೇ ಮೆಚ್ಚುಗೆ

ಗುಣ(ಜ.14): ಪ್ರತೀ ನಿತ್ಯ ಅರ್ಧ ಕಿ.ಮೀ ದೂರದ ಬೋರ್‌ವೆಲ್‌ನಿಂದ ನೀರು ತರುವ ಪತ್ನಿಯ ಕಷ್ಟನೋಡಲಾಗದ ಪುಣ್ಯಾತ್ಮ ಪತಿರಾಯನೋರ್ವ 15 ದಿನಗಳಲ್ಲಿ ಮನೆಯ ಸಮೀಪವೇ ಬಾವಿ ತೋಡಿದ ಯಶೋಗಾಥೆಯೊಂದು ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ.

ಬಡ ಕೂಲಿ ಕಾರ್ಮಿಕನ ಈ ಮಹತ್ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಡಳಿತ ಕಾರ್ಮಿಕ ಕುಟುಂಬದ ಜೀವನ ಸುಧಾರಣೆಗಾಗಿ ಸರ್ಕಾರದ ಕೆಲವು ಯೋಜನೆಗಳನ್ನು ನೀಡಲು ನಿರ್ಧರಿಸಿದೆ. ಗುಣ ಜಿಲ್ಲೆಯ ಚಂಚೋಡಾ ತಾಲೂಕಿನ ಭಾನ್‌ಪುರ ಬಾವ ಗ್ರಾಮದ ನಿವಾಸಿ ಭರತ್‌ ಸಿಂಗ್‌(46) ಪತ್ನಿಗಾಗಿ 15 ದಿನಗಳಲ್ಲೇ 6 ಅಡಿ ಅಗಲ ಮತ್ತು 31 ಅಡಿ ಉದ್ದದ ಬಾವಿ ತೋಡಿ ಜಿಲ್ಲಾಡಳಿತದಿಂದ ಭೇಷ್‌ ಎನಿಸಿಕೊಂಡ ಸಾಹಸ್ಸಿಗ.

ನಾಲ್ವರು ಸದಸ್ಯರನ್ನೊಳಗೊಂಡ ಭರತ್‌ ಸಿಂಗ್‌ ಅವರ ಕುಟುಂಬಕ್ಕೆ ಅಗತ್ಯವಿರುವ ನೀರನ್ನು ಅವರ ಪತ್ನಿ ಅರ್ಧ ಕಿ.ಮೀ ದೂರದ ಬೋರ್‌ವೆಲ್‌ನಿಂದ ತರುತ್ತಿದ್ದರು. ಆದರೆ ಒಂದು ದಿನ ಬೋರ್‌ವೆಲ್‌ ಕೆಟ್ಟು ಹೋದ ಕಾರಣ ಪತ್ನಿ ಬೇಸರದಿಂದ ಬರಿಗೈನಲ್ಲಿ ಮನೆಗೆ ಬಂದಳು.

ಇದನ್ನು ಆಲಿಸಿದ ಪತಿರಾಯ, ಚಿಂತಿಸಬೇಡ ಕೆಲವೇ ದಿನಗಳಲ್ಲಿ ಬಾವಿ ತೋಡುವುದಾಗಿ ಹೇಳಿದ. ಆದರೆ ಈ ಮಾತು ಕೇಳಿದ ಪತ್ನಿ ಇದು ಆಗುವ ಕೆಲಸವಲ್ಲ ಎಂದು ನಕ್ಕಿದ್ದಳು. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ ಭರತ್‌ ಸಿಂಗ್‌ ಅವರು ತಾವು ನುಡಿದಂತೆ 15 ದಿನಗಳಲ್ಲೇ ಬಾವಿ ತೋಡಿ ನೀರು ಬರಿಸಿದ್ದಾರೆ.

click me!