ಗಡಿಯಲ್ಲಿ ಯುದ್ಧದ ಕಾರ್ಮೋಡ, ಲಡಾಖ್‌ನಲ್ಲಿ ಒಂದು ಲಕ್ಷ ಯೋಧರು!

By Kannadaprabha News  |  First Published Sep 17, 2020, 8:28 AM IST

ಪ್ಯಾಂಗಾಂಗ್‌ ಲೇಕ್‌ನ ದಕ್ಷಿಣಕ್ಕೂ 10000 ಚೀನಿ ಸೈನಿಕರ ಜಮಾವಣೆ| ಲಡಾಖ್‌ನಲ್ಲೀಗ ಚೀನಾದ 52,000 ಯೋಧರು!| ಭಾರತದಿಂದಲೂ ಇದಕ್ಕೆ ಸರಿಸಮ ಸೇನೆ ಜಮಾವಣೆ| ಗಡಿಯಲ್ಲಿ ಯುದ್ಧಸದೃಶ ವಾತಾವರಣ ಇನ್ನಷ್ಟು ತೀವ್ರ


ನವದೆಹಲಿ(ಸೆ.17): ಇತ್ತೀಚೆಗಷ್ಟೇ ಪೂರ್ವ ಲಡಾಖ್‌ನ ಪ್ಯಾಂಗಾಂಗ್‌ ಸರೋವರದ ದಕ್ಷಿಣ ದಂಡೆಯನ್ನು ವಶಪಡಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದ ಚೀನಾದ ಸೇನೆ ಇದೀಗ ಅಲ್ಲಿ 10 ಸಾವಿರ ಯೋಧರನ್ನು ಜಮಾವಣೆ ಮಾಡಿದೆ. ಅದರೊಂದಿಗೆ ಲಡಾಖ್‌ನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ಗುಂಟ ಚೀನಾ ನಿಯೋಜಿಸಿದ ಸೈನಿಕರ ಸಂಖ್ಯೆ 52 ಸಾವಿರಕ್ಕೆ ಏರಿಕೆಯಾಗಿದೆ. ಭಾರತ ಕೂಡ ಇದಕ್ಕೆ ಸರಿಸಮ ಪ್ರಮಾಣದಲ್ಲೇ ಸೇನೆಯನ್ನು ನಿಯೋಜಿಸಿದ್ದು, ಗಡಿಯಲ್ಲಿ ಯುದ್ಧಸದೃಶ ವಾತಾವರಣ ಇನ್ನಷ್ಟುಕಾವು ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಆ.29 ಮತ್ತು 30ರಂದು ಪ್ಯಾಂಗಾಂಗ್‌ ಸರೋವರದ ದಕ್ಷಿಣ ದಂಡೆಯಲ್ಲಿ ಚೀನಾದ ಯೋಧರು 45 ವರ್ಷಗಳಲ್ಲೇ ಮೊದಲ ಬಾರಿ ಗುಂಡು ಹಾರಿಸಿ ಭಾರತದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದರು. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಭಾರತದ ಯೋಧರು ಚೀನಾದ ದುಸ್ಸಾಹಸವನ್ನು ಹಣಿದುಹಾಕಿದ್ದರು. ಇದೀಗ ಆ ಪ್ರದೇಶದಲ್ಲೇ ಚೀನಾ 10 ಸಾವಿರ ಯೋಧರನ್ನು ಜಮಾವಣೆ ಮಾಡಿರುವುದರಿಂದ ಪರಿಸ್ಥಿತಿ ಇನ್ನಷ್ಟುಉದ್ವಿಗ್ನಗೊಂಡಿದೆ. ಆದರೆ, ಹೊಸತಾಗಿ ಉಭಯ ಸೇನೆಗಳ ನಡುವೆ ಯಾವುದೇ ಘರ್ಷಣೆ ನಡೆದಿಲ್ಲ ಎಂದು ಭಾರತೀಯ ಸೇನೆಯ ಉನ್ನತ ಮೂಲಗಳು ಹೇಳಿವೆ.

Latest Videos

undefined

ಸದ್ಯ ಪ್ಯಾಂಗಾಂಗ್‌ ಪ್ರದೇಶದಲ್ಲಿ ಎರಡೂ ಸೇನೆಗಳ ಯೋಧರು ದೃಷ್ಟಿನಿಲುಕಿಸುವಷ್ಟುಹತ್ತಿರದಲ್ಲೇ ಇದ್ದಾರೆ. ಚೀನಾ ಸೇನೆ ಯಾವುದೇ ಹೊಸ ಹೆಜ್ಜೆ ಇರಿಸಿದರೂ ಅದಕ್ಕೆ ತಕ್ಕಂತೆ ಭಾರತದ ಸೇನೆಯೂ ಕ್ರಮ ಕೈಗೊಳ್ಳುತ್ತಿದೆ. ಕಳೆದ ವಾರವಷ್ಟೇ ಎರಡೂ ದೇಶಗಳ ವಿದೇಶಾಂಗ ಸಚಿವರ ಮಾತುಕತೆಯಲ್ಲಿ ಸಂಘರ್ಷ ಬಗೆಹರಿಸಿಕೊಳ್ಳಲು 5 ಅಂಶಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅವು ಹಂತಹಂತವಾಗಿ ಜಾರಿಗೆ ಬರುವವರೆಗೂ ಸೇನಾಪಡೆಗಳು ಎತ್ತರದ ಸ್ಥಳಗಳಲ್ಲು ಆಕ್ರಮಿಸಿಕೊಳ್ಳಲು ಯತ್ನಿಸುತ್ತಲೇ ಇರುತ್ತವೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್‌ ವೇಳೆಯಲ್ಲಿ ಎಲ್‌ಎಸಿಯಲ್ಲಿ ಚೀನಾದ 35 ಸಾವಿರ ಯೋಧರಿದ್ದರು. ಅವರ ಸಂಖ್ಯೆಯೀಗ 52 ಸಾವಿರಕ್ಕೆ ಏರಿಕೆಯಾಗಿದೆ. ಈ ವಾರ ಉಭಯ ದೇಶಗಳ ನಡುವೆ ಸೇನಾಪಡೆ ಮಟ್ಟದ ಮಾತುಕತೆ ನಿಗದಿಯಾಗಿದೆ.

click me!