
ಕಚ್: ಬಿಪರ್ ಜಾಯ್ ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿದ್ದು, ಗುಜರಾತ್ ಕರಾವಳಿಗೆ ಇಂದು ಸಂಜೆ ಅಪ್ಪಳಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಚಂಡಮಾರುತದ ಹೊಡೆತಕ್ಕೆ ಒಳಗಾಗುವ ಪ್ರದೇಶಗಳಲ್ಲಿ ವಾಸವಿರುವ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಗುಜರಾತ್‌ನ ಕರಾವಳಿಯ ಜನರಿಗೆ ನೆರವು ನೀಡಲು ಸೇನೆ, ನೌಕಾಪಡೆ, ವಾಯುಪಡೆ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಸೇರಿದಂತೆ ಎಲ್ಲಾ ಸಶಸ್ತ್ರ ಪಡೆಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸನ್ನದ್ಧವಾಗಿ ನಿಂತಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಆದರೆ ಗುಜರಾತ್ ಕರಾವಳಿಯಿಂದ ಕೆಲವೇ ಗಂಟೆಗಳ ದೂರದಲ್ಲಿ ಇರುವ ಚಂಡಮಾರುತದ ಭಯದ ಹೊರತಾಗಿಯೂ, ರಾಜ್ಯದ ಕೆಲವು ಹಳ್ಳಿಗಳ ಜನರು ತಮ್ಮ ಸಾಕುಪ್ರಾಣಿಗಳಿಗೆ ಆಹಾರವನ್ನು ನೀಡುವ ಸಲುವಾಗಿ ತಮ್ಮ ಮನೆಗಳಿಗೆ ಹಿಂದಿರುಗುವ ಮೂಲಕ ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಿದ್ದಾರೆ. ಸಾಕುಪ್ರಾಣಿಗಳು ಅನೇಕರ ಪಾಲಿನ ಜೀವನಾಡಿ ಆಗಿವೆ. ಕೆಲವರು ಸಾಕುಪ್ರಾಣಿಗಳಿಂದ ಬರುವ ಆದಾಯದಿಂದಲೇ ದಿನದ ಹೊಟ್ಟೆ ಹೊರೆಯುತ್ತಾರೆ. ಅದರ ಜೊತೆಗೆ ಮನೆಯವರಂತೆಯೇ ಸಾಕಿ ಸಲಹುವುದರಿಂದ ಮನೆಯ ಸದಸ್ಯರಂತೆ ಕೆಲ ಪ್ರಾಣಿಗಳಿದ್ದು, ಅವುಗಳ ಒಡನಾಟವಿಲ್ಲದೇ ಬದುಕುವುದು ಅನೇಕರಿಗೆ ಕಷ್ಟದ ಕೆಲಸ, ಕೆಲವು ರೈತರಂತೂ ಮನೆ ಸದಸ್ಯರಂತೆ ತಮ್ಮ ಸಾಕುಪ್ರಾಣಿಗಳ ಕಾಳಜಿ ವಹಿಸುತ್ತಾರೆ. ಹೀಗಿರುವಾಗ ಚಂಡ ಮಾರುತಕ್ಕೆಂದು ಮನೆ ಬಿಟ್ಟು ಪ್ರಾಣಿಗಳನ್ನು ಇರುವಲ್ಲೇ ಬಿಟ್ಟು ಹೋದರೆ ಚಿಂತೆ ಆಗದೇ ಇರದು. ಇದೇ ಕಾರಣಕ್ಕೆ ಕೆಲವರು ಚಂಡಮಾರುತವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ತಮ್ಮ ಸಾಕುಪ್ರಾಣಿಗಳಿಗೆ ಆಹಾರ ನೀಡುವುದಕ್ಕಾಗಿ ತಮ್ಮ ಹಳ್ಳಿಗಳಿಗೆ ಮರಳಿ ಬರುತ್ತಿದ್ದಾರೆ.
Cyclone Biparjoy: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆ!
ಹಾಗೆಯೇ ಗುಜರಾತ್‌ನ ಕಚ್ ಜಿಲ್ಲೆಯ ಮಂಡ್ವಿ ಎಂಬ ಹಳ್ಳಿಯೊಂದರ ವ್ಯಕ್ತಿಯೊಬ್ಬರು ತಮ್ಮ ಕುದುರೆಗೆ ಮೇವು ನೀಡುವುದಕ್ಕಾಗಿ ಆಶ್ರಯ ಕೇಂದ್ರದಿಂದ ಮರಳಿ ಗ್ರಾಮಕ್ಕೆ ಬಂದಿದ್ದು, ನಾನು ನನ್ನ ಕುದುರೆಗೆ ಆಹಾರ ನೀಡುವುದಕ್ಕಾಗಿ ಹಳ್ಳಿಗೆ ಮರಳಿ ಬಂದಿದ್ದೇನೆ, ನಮ್ಮ ಸಾಕುಪ್ರಾಣಿಗಳ ಬಗ್ಗೆ ನಾವು ಕಾಳಜಿ ತೋರುವುದು ನಮಗೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಈ ಪ್ರದೇಶದಲ್ಲಿ ಬಿಪರ್‌ಜಾಯ್ ಚಂಡಮಾರುತವು (Cyclone Biparjoy) ಸಂಜೆ 4 ರಿಂದ 6 ರ ನಡುವೆ ಅಪ್ಪಳಿಸುವ ನಿರೀಕ್ಷೆ ಇದೆ. ಇಲ್ಲಿನ ಆಡಳಿತವೂ ಕೇವಲ ಗ್ರಾಮಸ್ಥರನ್ನು ಮಾತ್ರ ಸ್ಥಳಾಂತರಿಸಿರುವುದರಿಂದ ಸಾಕು ಪ್ರಾಣಿಗಳನ್ನು ಹೊಂದಿರುವವರು ಚಿಂತೆಗೊಳಗಾಗಿದ್ದಾರೆ. ಅವುಗಳನ್ನು ಬಿಟ್ಟು ಹೋದರೆ ಅವುಗಳಿಗೇನಾಗುವುದು ಎಂಬ ಅಳುಕು ಜನರನ್ನು ಕಾಡುತ್ತಿದ್ದು, ಇದೇ ಕಾರಣಕ್ಕೆ ಜನ ಆಶ್ರಯ ಕೇಂದ್ರಕ್ಕೆ ಹೋದರು ಕೂಡ ಮರಳಿ ತಮ್ಮ ಮನೆಯತ್ತ ಬಂದು ಸಾಕುಪ್ರಾಣಿಗಳ ಕ್ಷೇಮ ನೋಡುತ್ತಿದ್ದಾರೆ.
ಪ್ರಸ್ತುತ ಈ ಬಿಪರ್ ಜಾಯ್ (Biparjoy)ಚಂಡಮಾರುತವೂ (ಮಧ್ಯಾಹ್ನ 3 ಗಂಟೆಯ ವೇಳೆ) ಗುಜರಾತ್ ಕರಾವಳಿಯಿಂದ 150 ಕಿ.ಮೀ ದೂರದಲ್ಲಿದೆ ಎಂದು ವರದಿಯಾಗಿದ್ದು, ಇದನ್ನು ಅತ್ಯಂತ ತೀವ್ರವಾದ ಚಂಡಮಾರುತ ಎಂದು ಪರಿಗಣಿಸಲಾಗಿದೆ. ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಮತ್ತು ಇಲ್ಲಿಗೆ ಹೊಂದಿಕೊಂಡಿರುವ ಪಕ್ಕದ ಪಾಕಿಸ್ತಾನದ ಕರಾವಳಿಯ ಮಾಂಡ್ವಿ ಮತ್ತು ಕರಾಚಿ ನಡುವೆ ಇರುವ ಜಖೌ ಬಂದರಿನ ಬಳಿ ಚಂಡ ಮಾರುತ ದಾಟಿ ಹೋಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಒಂದು ವಾರ ತಡವಾಗಿ ಕೊನೆಗೂ ಕೇರಳಕ್ಕೆ ಕಾಲಿಟ್ಟ ಮುಂಗಾರು: ಕೃಷಿ ಚಟುವಟಿಕೆಗಳಿಗೆ ಚಾಲನೆ
ಚಂಡಮಾರುತದಿಂದಾಗಿ ಗಂಟೆಗೆ 115ರಿಂದ 125 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಕಚ್ (Kutch), ದೇವಭೂಮಿ ದ್ವಾರಕಾ (Devbhumi Dwarka) ಮತ್ತು ಜಾಮ್‌ನಗರ (Jamnagar) ಜಿಲ್ಲೆಗಳಲ್ಲಿ ಭಾರಿ ಮಳೆಯ ನಿರೀಕ್ಷೆ ಮಾಡಲಾಗಿದೆ. ಈ ಚಂಡಮಾರುತದ ಕಾರಣಕ್ಕೆ ಸ್ಥಳೀಯಾಡಳಿತವು ಕಚ್ ಜಿಲ್ಲೆಯ ಕಡಲ ತೀರದಿಂದ 10 ಕಿಮೀ ವ್ಯಾಪ್ತಿಯಲ್ಲಿ ಬರುವ ಸುಮಾರು 120 ಹಳ್ಳಿಗಳಿಂದ ಜನರನ್ನು ಸ್ಥಳಾಂತರ ಮಾಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 18 ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) 12 ತಂಡಗಳು, ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ 115 ತಂಡಗಳು ಮತ್ತು ರಾಜ್ಯ ವಿದ್ಯುತ್ ಇಲಾಖೆಯ 397 ತಂಡಗಳನ್ನು ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ತುರ್ತು ಸೇವಗೆ ನಿಯೋಜಿಸಲಾಗಿದೆ. ಇದರ ಜೊತೆಗೆ ಗುಜರಾತಿನ ಸ್ಥಳೀಯ ಜನರಿಗೆ ನೆರವು ನೀಡಲು ಭೂಸೇನೆ, ನೌಕಾಪಡೆ, ವಾಯುಪಡೆ (Army, Navy, Air Force) ಮತ್ತು ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) ಸೇರಿದಂತೆ ಎಲ್ಲಾ ಸಶಸ್ತ್ರ ಪಡೆಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ