
ಗಾಂಧಿನಗರ (ಅ.13) ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಮತಕಳ್ಳತನ ಮಾಡಿ ಮೋದಿ ಪ್ರಧಾನಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಚುನಾವಣಾ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ ಹಲವು ಹೋರಾಟಗಳನ್ನು ರಾಹುಲ್ ಆ್ಯಂಡ್ ಟೀಂ ಮಾಡುತ್ತಿದೆ. ಇತ್ತ ಸಿಜೆಪಿ ಕೂಡ ಮೋದಿ ಇಲ್ಲೀಗಲ್ ಪಿಎಂ ಎಂಬ ಆರೋಪ ಮಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ನಡದೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನ ಪ್ರಧಾನಿ ಮೋದಿ ಹಾಗೂ ಬಿಜೆಪಿ ಕೈಹಿಡಿದಿದ್ದಾರೆ. ಪ್ರತಿಪಕ್ಷಗಳ ಆರೋಪಕ್ಕೆ ಸೊಪ್ಪು ಹಾಕದ ಜನ, ಗಾಂಧಿನಗರ ಮುನ್ಸಿಪಲ್ ಚುನಾವಣೆಯಲ್ಲಿ 44ರ ಪೈಕಿ 38 ಸ್ಥಾನ ಬಿಜೆಪಿ ಗೆದ್ದುಕೊಂಡಿದೆ.
ಪ್ರಧಾನಿ ಮೋದಿ ತವರಾದ ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಮತ ಏಣಿಕೆ ಪ್ರಕ್ರಿಯೆ ಇಂದು ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡಿತ್ತು. ಆರಂಭಿಕ ಹಂತದಲ್ಲೇ ಬಿಜೆಪಿ ಮುನ್ನಡೆ ಸಾಧಿಸಿತ್ತು. 11 ವಾರ್ಡ್‌ಗಳ 44 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 44 ಸ್ಥಾನಗಳಿಗೆ ಒಟ್ಟು 130 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ ಬಿಜೆಪಿ 38 ಸ್ಥಾನ ಗೆದ್ದರೆ, ಕಾಂಗ್ರೆಸ್ ಕೇವಲ 5 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ಆಪ್ ಒಂದು ಸ್ಥಾನ ಗೆದ್ದಿಲ್ಲ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.
ಮತ ಕಳ್ಳತನ ಆರೋಪ, ಗ್ಯಾನೇಶ್ ಕುಮಾರ್ ಸೇರಿದಂತೆ ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆ ಆಗ್ರಹಗಳ ನಡುವೆ ಬಿಜೆಪಿ ಸ್ಥಾನ ಕುಸಿತ ಕಂಡಿದೆ. ಕಳೆದ ಚುನಾವಣೆ (2021)ಯಲ್ಲಿ ಬಿಜೆಪಿ 44ರ ಪೈಕಿ 41 ಸ್ಥಾನ ಗೆದ್ದುಕೊಂಡಿತ್ತು. ಆದರೆ ಈ ಬಾರಿ 38ಕ್ಕೆ ಕುಸಿತ ಕಂಡಿದೆ. 2021ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನ ಗೆದ್ದುಕೊಂಡಿತ್ತು. ಈ ಮೂಲಕ 3 ಸ್ಥಾನ ಹೆಚ್ಚಿಸಿಕೊಂಡಿದೆ. ಇತ್ತ ಆಮ್ ಆದ್ಮಿ ಪಾರ್ಟಿ ಕಳೆದ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದುಕೊಂಡಿತ್ತು. ಈ ಬಾರಿ ಒಂದೂ ಗೆಲುವಿಲ್ಲ.
ಗಾಂಧಿನಗರ ಜೊತೆಗೆ ತಾರಾ ಹಾಗೂ ಒಖಾ ಮುನ್ಸಿಪಲ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಈ ಮುನ್ಸಿಪಲ್ ಕಾರ್ಪೋರೇಶನ್ ಫಲಿತಾಂಶ ಹೊರಬೀಳಲಿದೆ. ಸದ್ಯ ಗಾಂಧಿನಗರ ಚುನಾವಣೆ ಫಲಿತಾಂಶ ಬಿಜೆಪಿ ಪಾಲಿಗೆ ಸಮಾಧಾನ ತಂದಿದೆ. ಮತ ಕಳ್ಳತನ, ರಾಜೀನಾಮೆ ಕೋಲಾಹಲಗಳ ನಡುವೆ ಜನರು ಬಿಜೆಪಿ ಬೆಂಬಲಿಸಿದ್ದಾರೆ. ದೇಶಾದ್ಯಂತ ಕೋಲಾಹಲ ಸೃಷ್ಟಿಸಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮತ ಗಳಿಕೆಗೆಯಲ್ಲಿ ಮತ್ತೆ ಹಿಂದಿ ಬಿದ್ದಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ