ವಿಕೃತರಿಂದ ತಿರುಪತಿ ಲಡ್ಡು ಅಪವಿತ್ರವಾಗಿದೆ. ಹಿಂದೂ ಧರ್ಮ ಕಾಪಾಡಬೇಕಿದೆ ಎನ್ನುತ್ತಲೇ ಆಂಧ್ರದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಇಂದಿನಿಂದ 11 ದಿನಗಳವರೆಗೆ ಪ್ರಾಯಶ್ಚಿತ ದೀಕ್ಷೆ ತೆಗೆದುಕೊಂಡಿದ್ದಾರೆ.
ಹಿಂದೂ ಧರ್ಮವನ್ನು, ಅದರ ಸಂಸ್ಕೃತಿಯನ್ನು ಉದ್ಧರಿಸಬೇಕಾದ ಕಾಲವಿದು. ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ಪವಿತ್ರವೆಂದು ಕೋಟ್ಯಂತರ ಹಿಂದೂಗಳ ನಂಬಿರುವ ಲಡ್ಡು ಪ್ರಸಾದವು ಹಿಂದಿನ ಮುಖ್ಯಮಂತ್ರಿಯ ಅತ್ಯಂತ ಹೀನ ಪ್ರವೃತ್ತಿಯ ಫಲವಾಗಿ ಅಶುದ್ಧವಾಗಿದೆ. ಈ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದೇ ಇರುವುದು ಹಿಂದೂ ಜನಾಂಗಕ್ಕೇ ಕಳಂಕ ತರುವಂಥದ್ದಾಗಿ. ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಇದೆ ಎಂದು ತಿಳಿದಾಗ, ಜನರ ಹಿತಕ್ಕಾಗಿ ಹೋರಾಡುತ್ತಿರುವಾಗ ನನಗೆ ಆಘಾತವಾಯಿತು, ಅಂತಹ ತೊಂದರೆ ಪ್ರಾರಂಭದಲ್ಲಿ ನನ್ನ ಗಮನಕ್ಕೆ ಬರಲಿಲ್ಲ. ಇದಕ್ಕಾಗಿ ಪ್ರಾಯಶ್ಚಿತ ಮಾಡಿಕೊಳ್ಳಬೇಕಿದೆ ಎಂದಿರುವ ನಟ, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಇಂದಿನಿಂದ 11 ದಿನಗಳ ಪ್ರಾಯಶ್ಚಿತ ದೀಕ್ಷೆ ಸ್ವೀಕರಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಅವರು, ತಿರುಪತಿ ಲಡ್ಡು ಅಮೃತಕ್ಕೆ ಸಮಾನ. ಆದರೆ ಹಿಂದಿನ ಸರ್ಕಾರದ ವಿಕೃತ ಚೇಷ್ಠೆಗಳ ಫಲವಾಗಿ ಅದು ಅಪವಿತ್ರವಾಗಿದೆ. ವಿಷ ಜಂತುಗಳಿಂದ ಹಿಂದೂ ಧರ್ಮವನ್ನು ಕಾಪಾಡಿಕೊಳ್ಳಬೇಕಿದೆ. ಮನುಷ್ಯತ್ವವನ್ನು ಕಳೆದುಕೊಂಡವರು ಮಾತ್ರ ಇಂಥಹ ಪಾಪಕಾರ್ಯವನ್ನು ಮಾಡಬಲ್ಲರು. ಈ ಪಾಪವನ್ನು ಮೊದಲೇ ಕಂಡು ಹಿಡಿಯದೇ ಇರುವುದು ದುರದೃಷ್ಟ. ಪ್ರಜೆಗಳ ಕ್ಷೇಮ ಮತ್ತು ಅಭಿವೃದ್ಧಿಗಳ ಬಗ್ಗೆ ಯೋಚನೆ ಮಾಡುತ್ತ ಹೋರಾಡುವ ನನ್ನ ಮನಸ್ಸಿಗೆ ಇದರಿಂದ ಆಘಾತವಾಗಿದೆ. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲೇ ಬೇಕಾಗಿದೆ ಎಂದಿದ್ದಾರೆ ಪವನ್ ಕಲ್ಯಾಣ್.
undefined
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರಿಂದ ಅಂದರೆ ಇಂದಿನಿಂದ 11 ದಿನಗಳ ಪ್ರಾಯಶ್ಚಿತ ದೀಕ್ಷೆ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಗುಂಟೂರು ಜಿಲ್ಲೆಯ ನಂಬೂರಿನಲ್ಲಿ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ಅವರು ದೀಕ್ಷೆ ಆರಂಭಿಸಿದ್ದಾರೆ. ಹನ್ನೊಂದು ದಿನಗಳ ಕಾಲವು ದೀಕ್ಷೆಯನ್ನು ಮಾಡುತ್ತೇನೆ. ಅನಂತರ ತಿರುಮಲ ಶ್ರೀ ವೇಂಕಟೇಶ್ವರ ಸ್ವಾಮಿಯವರ ದರ್ಶನಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಅವರು. ಓ ದೇವಾಧಿ ದೇವಾ… ಹಿಂದಿನ ಸರ್ಕಾರ ಮಾಡಿದ ಪಾಪಗಳನ್ನು ಶುದ್ಧೀಕರಿಸುವ ಶಕ್ತಿಯನ್ನು ಪ್ರಸಾದಿಸು ತಂದೇ” ಅಂತ ಬೇಡಿಕೊಳ್ಳುತ್ತೇನೆ. ತಿರುಮಲ ತಿರುಪತಿ ದೇವಸ್ಥಾನವೆಂಬ ದೈವಿಕ ವ್ಯವಸ್ಥೆಯಲ್ಲಿ ಬೋರ್ಡು ಸದಸ್ಯರಾಗಲಿ ಅಧಿಕಾರಿಗಳು ಉದ್ಯೋಗಿಗಳಾಗಲಿ ಯಾರೂ ಈ ವಿಚಾರವನ್ನು ಕಂಡುಹಿಡಿಯದಿರುವುದು, ನೋಡಿದರೂ ಸುಮ್ಮನಿರುವುದು ತುಂಬಾ ನೋವು ತರುತ್ತಿದೆ ಎಂದಿದ್ದಾರೆ.
‘ಕಲಿಯುಗದ ದೇವರಾದ ಬಾಲಾಜಿಗೆ ಆಗಿರುವ ಈ ಅನ್ಯಾಯಕ್ಕೆ ಸನಾತನ ಧರ್ಮದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಲಕ್ಷಾಂತರ ಮಂದಿ ಪವನ್ ಕಲ್ಯಾಣ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಸಹ ಮಾಡಿದ್ದಾರೆ. ಇನ್ನು ಕೆಲವರು ಇದನ್ನು ಟೀಕಿಸಿದ್ದು, ಪ್ರಸ್ತುತ ಕೃತ್ಯಕ್ಕೆ ಹಿಂದಿನ ಸರ್ಕಾರವನ್ನು ಹೊಣೆ ಮಾಡುವ ಉದ್ದೇಶದಿಂದಲೇ ಈ ದೀಕ್ಷೆ ಆಚರಿಸುತ್ತಿದ್ದಾರೆ ಎಂದಿದ್ದಾರೆ.