ಪಿಎಫ್‌ಐ ಸದಸ್ಯರಿಗೆ ಆರ್‌ಎಸ್ಎಸ್ ರೀತಿ ತರಬೇತಿ: ಪಾಟ್ನಾ ಎಸ್ಎಸ್‌ಪಿ ಹೇಳಿಕೆಗೆ ಆಕ್ರೋಶ!

By Santosh NaikFirst Published Jul 14, 2022, 7:12 PM IST
Highlights

ಪಾಟ್ನಾ ಎಸ್‌ಎಸ್‌ಪಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಆರ್‌ಎಸ್‌ಎಸ್ ತನ್ನ ಶಾಖೆಯಲ್ಲಿ ಸ್ವಯಂಸೇವಕರಿಗೆ ತರಬೇತಿ ನೀಡುವಂತೆಯೇ, ಪಿಎಫ್‌ಐ ತನ್ನ ಜನರಿಗೆ ದೈಹಿಕ ತರಬೇತಿ ನೀಡುತ್ತದೆ ಎನ್ನುವ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲಿಯೇ ಬಿಜೆಪಿ ಪಾಟ್ನಾ ಎಸ್ಎಸ್‌ಪಿ ವಿರುದ್ಧ ಕಿಡಿಕಾರಿದೆ.
 

ಪಾಟ್ನಾ (ಜುಲೈ 14): ಬಿಹಾರದ ರಾಜಧಾನಿ ಪಾಟ್ನಾದ ಎಸ್‌ಎಸ್‌ಪಿ ಮಾನವಜಿತ್ ಸಿಂಗ್ ಧಿಲ್ಲೋನ್ ವಿವಾದಿತ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದೆ. ಗುರುವಾರ ಪಾಟ್ನಾ ಎಸ್ಎಸ್‌ಪಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ದೇಶದಲ್ಲಿ ಕೆಲ ಅಹಿತಕರ ಘಟನೆಗಳ ಹಿಂದಿರುವ ಸಂಘಟನೆಯಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್) ಅನ್ನು ಹೋಲಿಕೆ ಮಾಡಿ ಮಾತನಾಡಿದ್ದರು. ಇದರ ಬೆನ್ನಲ್ಲಿಯೇ ಪಾಟ್ನಾ ಎಸ್ಎಸ್‌ಪಿಯ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಿಡಿಕಾರಿದ್ದು, ಅವರನ್ನು ವಜಾ ಮಾಡುವಂತೆ ಒತ್ತಾಯಿಸಿದೆ. ಪಾಟ್ನಾ ಎಸ್‌ಎಸ್‌ಪಿ ಮಾನವಜಿತ್ ಸಿಂಗ್ ಗುರುವಾರ ತಮ್ಮ ಹೇಳಿಕೆಯಲ್ಲಿ, 'ಆರ್‌ಎಸ್‌ಎಸ್‌ನ ಶಾಖೆಗಳಲ್ಲಿ ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತದೆ. ಅದೇ ರೀತಿ ಪಿಎಫ್‌ಐ ಕೂಡ ತನ್ನ ಜನರಿಗೆ ದೈಹಿಕ ತರಬೇತಿಯನ್ನೂ ನೀಡುತ್ತದೆ. ಅವರಿಗೆ ಮಾರ್ಷಲ್ ಆರ್ಟ್ಸ್ ತರಬೇತಿಯನ್ನೂ ನೀಡಲಾಗುತ್ತದೆ'' ಎಂದು ಹೇಳಿದ್ದರು. ಆರ್‌ಎಸ್ಎಸ್ ಹಾಗೂ ಪಿಎಫ್‌ಐ ಅನ್ನು ಒಂದೇ ತಕ್ಕಡಿಯಲ್ಲಿಟ್ಟು ಹೋಲಿಕೆ ಮಾಡಿದ ಬೆನ್ನಲ್ಲಿಯೆ ಬಿಜೆಪಿ ವಕ್ತಾರ ಅರವಿಂದ್ ಕುಮಾರ್ ಸಿಂಗ್  ಕಿಡಿಕಾರಿದ್ದು, ಪಾಟ್ನಾದ ಎಸ್ಎಸ್‌ಪಿ, ಪಿಎಫ್ಐ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಈ ಕೂಡಲೇ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಏನಿದು ವಿಷಯ: ಪಾಟ್ನಾ ಎಸ್‌ಎಸ್‌ಪಿ ಮಾನವ್ ಜೀತ್ ಸಿಂಗ್ ಧಿಲ್ಲೋನ್ (Patna SSP manavjit singh dhillon) ಇಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಭಯೋತ್ಪಾದಕರ ತರಬೇತಿಯನ್ನು (Terrorist training) ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಶಾಖೆಯಲ್ಲಿ ನೀಡುವ ತರಬೇತಿಯೊಂದಿಗೆ ಹೋಲಿಕೆ ಮಾಡಿದ್ದಾರೆ. ಪಾಟ್ನಾ ಪೊಲೀಸರು (Patna Police) ಬುಧವಾರ ಇಬ್ಬರು ಶಂಕಿತ ಭಯೋತ್ಪಾದಕರಾದ ಅಥರ್ ಪರ್ವೇಜ್ (Athar Parvez) ಮತ್ತು ಮೊಹಮ್ಮದ್ ಜಲಾಲುದ್ದೀನ್ (Mohammad Jalaluddin) ಅವರನ್ನು ರಾಜಧಾನಿಯ ಫುಲ್ವಾರಿ ಷರೀಫ್‌ನಿಂದ ಬಂಧಿಸಿದ್ದಾರೆ. ಇಬ್ಬರಿಂದಲೂ ‘ಇಂಡಿಯಾ 2047’ ಹೆಸರಿನ ದಾಖಲೆಗಳು ಪತ್ತೆಯಾಗಿವೆ. ಪಾಟ್ನಾಗೆ ಭೇಟಿ ನೀಡಿದ ಪ್ರಧಾನಿ ಮೋದಿ(PM Narendra Modi),  ಭಯೋತ್ಪಾದಕರ ಗುರಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ನೂಪುರ್ ಶರ್ಮಾ (Nupur Sharma) ಅವರನ್ನು ಬೆಂಬಲಿಸಿದ ಮತ್ತು ಇಸ್ಲಾಂ ವಿರುದ್ಧ ಮಾತನಾಡಿದವರ ಪಟ್ಟಿಯನ್ನು ಸಹ ಇವರು ಸಿದ್ಧ ಮಾಡಿಟ್ಟುಕೊಂಡಿದ್ದರು. ಅಮರಾವತಿ ಮತ್ತು ಉದಯಪುರದ ಸಂಪರ್ಕಗಳು ಈ ಇಬ್ಬರು ಶಂಕಿತ ಭಯೋತ್ಪಾದಕರಿಗೆ ಸಂಬಂಧಿಸಿದ್ದಾಗಿದೆ.

| "They used to mobilize youth from mosques & madrasas towards radicalization. Their modus operandi was to act like an RSS Shakha where lathi training is given…they would call them for physical training but also brainwash & radicalize them," says SSP Patna, Manavjit Singh pic.twitter.com/F6U1wZOwC1

— ANI (@ANI)

ಇದನ್ನೂ ಓದಿ: ಕಾನ್ಪುರ ಹಿಂಸಾಚಾರದಲ್ಲಿ ಪಿಎಫ್‌ಐ ಕೈವಾಡಕ್ಕೆ ಸಾಕ್ಷ್ಯ!

ಮಾನವಜೀತ್‌ ಸಿಂಗ್‌ ಧಿಲ್ಲೋನ್‌ ಹೇಳಿದ್ದೇನು:
ಶಂಕಿತ ಭಯೋತ್ಪಾದಕರಿಬ್ಬರ ಬಂಧನದ ನಂತರ, ಪಾಟ್ನಾ ಎಸ್‌ಎಸ್‌ಪಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫುಲ್ವಾರಿ ಷರೀಫ್‌ನಿಂದ ಸಿಕ್ಕಿಬಿದ್ದ ಇಬ್ಬರು ಶಂಕಿತ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ನೀಡುತ್ತಿದ್ದರು ಎಂದು ಎಸ್‌ಎಸ್‌ಪಿ ಮಾನವಜಿತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ. ಮದರಸಾಗಳಿಂದ ಯುವಕರನ್ನು ಆಯ್ಕೆ ಮಾಡಿ ಮೂಲಭೂತವಾದದತ್ತ ಅವರನ್ನು ತಳ್ಳುತ್ತಿದ್ದರು. ಆರ್‌ಎಸ್‌ಎಸ್‌ನ ಶಾಖೆಗಳಂತೆಯೇ ಅವರು ಶಾಖೆಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಆರ್‌ಎಸ್ಎಸ್ ಶಾಖೆಗಳನ್ನು ಅಯೋಜನೆ ಮಾಡುವುದಲ್ಲದೆ, ದಂಡಗಳನ್ನು ನೀಡಿ ತರಬೇತಿಯನ್ನು ನೀಡುತ್ತದೆ. ಪಿಎಫ್‌ಐ ಕೂಡ ದೈಹಿಕ ತರಬೇತಿಯ ಹೆಸರಿನಲ್ಲಿ ಇದೇ ರೀತಿಯ ತರಬೇತಿ ನೀಡುವ ಮೂಲಕ ಅವರನ್ನು ಬ್ರೇನ್‌ವಾಶ್‌ ಮಾಡಿತ್ತು ಎಂದಿದ್ದರು.

ಇದನ್ನೂ ಓದಿ: ಎಸ್‌ಡಿಪಿಐ, ಪಿಎಫ್‌ಐ, ಆರ್‌ಎಸ್‌ಎಸ್‌ ಸಂಘಟನೆಗಳನ್ನು ನಿಷೇಧಿಸಿ: ಸಿದ್ದರಾಮಯ್ಯ ಸವಾಲ್

ತಕ್ಷಣ ಧಿಲ್ಲೋನ್‌ ಅವರನ್ನು ವಜಾ ಮಾಡಿ:  ಪಾಟ್ನಾ ಎಸ್‌ಎಸ್‌ಪಿಯ ಈ ಹೇಳಿಕೆ ರಾಜಕೀಯ ವಲಯದಲ್ಲಿ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟಿದೆ. ಬಿಹಾರದ ಬಿಜೆಪಿ ನಾಯಕರು ಪಾಟ್ನಾ ಎಸ್‌ಎಸ್‌ಪಿ ಮಾನವಜಿತ್ ಸಿಂಗ್ ಧಿಲ್ಲೋನ್ ಅವರನ್ನು ತಕ್ಷಣವೇ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಈ ವಿಷಯದ ಬಗ್ಗೆ ತಕ್ಷಣ ಗಮನ ಹರಿಸುವಂತೆ ನಾಯಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ, ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಪಿಎಫ್‌ಐ ಭಯೋತ್ಪಾದಕ ಸಂಘಟನೆ ಆದರೆ ಆರ್‌ಎಸ್‌ಎಸ್ ಸಾಂಸ್ಕೃತಿಕ ಮತ್ತು ರಾಷ್ಟ್ರ ನಿರ್ಮಾಣ ಸಂಸ್ಥೆಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಮಾನವಜೀತ್‌ಗೆ ನೋಟಿಸ್‌: ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಪಾಟ್ನಾ ಪೊಲೀಸ್‌ ಮಹಾನಿರ್ದೇಶಕ (ADG) ಶೋಕಾಸ್‌ ನೋಟಿಸ್ ಜಾರಿ ಮಾಡಿದ್ದು, ಮುಂದಿನ 48 ಗಂಟೆಗಳಲ್ಲಿ ಈ ಕುರಿತಾಗಿ ಉತ್ತರ ನೀಡುವಂತೆ ಹೇಳಿದೆ. ಈ ನಡುವೆ ಆರ್‌ಜೆಡಿ (RJD) ಹಾಗೂ ಹಿಂದುಸ್ತಾನಿ ಆವಂ ಮೋರ್ಚಾ (HAM), ಎಸ್ಎಸ್‌ಪಿ ನೀಡಿರುವ ಹೇಳಿಗೆ ಬೆಂಬಲ ವ್ಯಕ್ತಪಡಿಸಿವೆ.

Latest Videos

 

click me!