
ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಕ್ರಮಗಳನ್ನು ಖಂಡಿಸಿ ಪ್ರತಿಷ್ಠಿತ ಪ್ರಶಸ್ತಿಗಳ ವಿಜೇತರು ಪ್ರಶಸ್ತಿ ವಾಪಸು (ಅವಾರ್ಡ್ ವಾಪಸಿ) ಮಾಡುತ್ತಿರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಶಸ್ತಿ ವಾಪಸು ಮಾಡಲ್ಲ ಎಂಬ ಮುಚ್ಚಳಿಕೆಯನ್ನು ವಿಜೇತರಿಗೆ ಕಡ್ಡಾಯ ಮಾಡಬೇಕು ಎಂದು ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ.
ಸರ್ಕಾರಿ ಪ್ರಶಸ್ತಿಗಳನ್ನು ಸ್ವೀಕರಿಸುವವರು ಗೌರವವನ್ನು ಸ್ವೀಕರಿಸುವ ಮೊದಲು ತಮ್ಮ ಲಿಖಿತ ಒಪ್ಪಿಗೆಯನ್ನು ನೀಡಬೇಕು ಮತ್ತು ಒಪ್ಪಂದಕ್ಕೆ ಸಹಿ ಹಾಕಬೇಕು. ರಾಜಕೀಯ ಕಾರಣಗಳಿಗಾಗಿ ಪ್ರಶಸ್ತಿಗಳನ್ನು ಹಿಂದಿರುಗಿಸುವುದಿಲ್ಲ ಎಂದು ಬರೆದು ಕೊಡಬೇಕು ಎಂದು ಸಾರಿಗೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಂಸದೀಯ ಸ್ಥಾಯಿ ಸಮಿತಿ ತನ್ನ ಶಿಫಾರಸಿನಲ್ಲಿ ತಿಳಿಸಿದೆ. ವರದಿಯನ್ನು ಸಂಸತ್ತಿನಲ್ಲಿ ಸೋಮವಾರ ಮಂಡಿಸಲಾಗಿದೆ.
ಪ್ರಶಸ್ತಿ ವಾಪಸಿ ದೇಶಕ್ಕೆ ಅವಮಾನಕರವಾಗಿದೆ ಎಂದಿರುವ ವೈಎಸ್‌ಆರ್ ಕಾಂಗ್ರೆಸ್ ಸಂಸದ ವಿಜಯಸಾಯಿ ರೆಡ್ಡಿ ನೇತೃತ್ವದ ಸಮಿತಿ, ಸಾಹಿತ್ಯ ಅಕಾಡೆಮಿ ಮತ್ತು ಇತರ ಸಂಸ್ಥೆಗಳು ರಾಜಕೀಯಕ್ಕೆ ಯಾವುದೇ ಆಸ್ಪದ ನೀಡದ ರಾಜಕೀಯೇತರ ಸಂಸ್ಥೆಗಳು. ಇಂಥ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ರಶಸ್ತಿ ಪಡೆದ ನಂತರ ಅವನ್ನು ಮರಳಿಸುವುದು ಸಂಸ್ಥೆಗಳಿಗೂ ಅವಮಾನ ಹಾಗೂ ಅವನ್ನು ಸ್ವೀಕರಿಸಿದ ಇತರ ವಿಜೇತರಿಗೂ ಅವಮಾನ ಎಂದು ಅಭಿಪ್ರಾಯಪಟ್ಟಿದೆ.
Murugha Seer Case; ಹೆಸರಾಂತ ಪತ್ರಕರ್ತ ಪಿ ಸಾಯಿನಾಥ್ ರಿಂದ ಬಸವಶ್ರೀ ಪ್ರಶಸ್ತಿ ವಾಪಸ್
ಮುಚ್ಚಳಿಕೆ ಬರೆಯಲು ಒಪ್ಪದವರನ್ನು ಪ್ರಶಸ್ತಿಗೆ ಪರಿಗಣಿಸಕೂಡದು. ಒಂದು ವೇಳೆ ಮುಚ್ಚಳಿಕೆ ಬರೆದುಕೊಟ್ಟ ನಂತರವೂ ಅವರು ಪ್ರಶಸ್ತಿ ಮರಳಿಸಿದರೆ, ಭವಿಷ್ಯದಲ್ಲಿ ಯಾವ ಪ್ರಶಸ್ತಿ/ಗೌರವಕ್ಕೂ ಅವರನ್ನು ಪರಿಗಣಿಸಕೂಡದು ಎಂದು ಸಮಿತಿ ಹೇಳಿದೆ.
ಕಲಬುರ್ಗಿ ಹತ್ಯೆ ಬಳಿಕ ಪ್ರಶಸ್ತಿ ವಾಪಸಿ ಶುರು
ಪ್ರಮುಖವಾಗಿ, 2015ರಲ್ಲಿ ಧಾರವಾಡದಲ್ಲಿ ವಿಮರ್ಶಕ ಡಾ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ನಂತರ ಉದಯ್ ಪ್ರಕಾಶ್, ನಯನ ತಾರಾ ಸೆಹಗಲ್ ಮತ್ತು ಅಶೋಕ್ ವಾಜಪೇಯಿ ನೇತೃತ್ವದಲ್ಲಿ 33 ಪುರಸ್ಕೃತರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು. ಅಂದಿನಿಂದ ಪ್ರಶಸ್ತಿ ವಾಪಸಿಯು ಪ್ರತಿಭಟನೆಯ ಜನಪ್ರಿಯ ಸಾಧನವಾಗಿದೆ. ಇತ್ತೀಚಿನ ನಿದರ್ಶನವೆಂದರೆ ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಮುಖ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯುವುದಾಗಿ ಬೆದರಿಕೆ ಹಾಕಿದ್ದರು. ಪ್ರಸ್ತುತ, ಪ್ರಸ್ತಾವಿತ ಪ್ರಶಸ್ತಿ ಪುರಸ್ಕೃತರಿಂದ ಒಪ್ಪಿಗೆ ಪಡೆದ ನಂತರ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಪಟ್ಟಿಯಲ್ಲಿರುವ ಅನೇಕರು, ಪಟ್ಟಿಯನ್ನು ಸಾರ್ವಜನಿಕಗೊಳಿಸಿದ ನಂತರ ಗೌರವ ಸ್ವೀಕರಿಸಲು ನಿರಾಕರಿಸುತ್ತಾರೆ.
'ಪ್ರಶಸ್ತಿ ವಾಪಸ್ ಕೊಡಲ್ಲ, ನನ್ನ ಶ್ರಮಕ್ಕೆ ಸಿಕ್ಕ ಪ್ರಶಸ್ತಿ ವಾಪಸ್ ಕೊಡುವಷ್ಟು ದಡ್ಡ ನಾನಲ್ಲ’: ನಟ ಪ್ರಕಾಶ್ ರಾಜ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ