
ಪಿಟಿಐ ನವದೆಹಲಿ (ನ.9): ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1 ರಿಂದ 19 ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದಾರೆ.
‘ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕರೆಯುವ ಸರ್ಕಾರದ ಪ್ರಸ್ತಾಪವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ’ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.
3 ವಾರಗಳ ಈ ಅಧಿವೇಶನದಲ್ಲಿ ಒಟ್ಟು 15 ದಿನ ಕಲಾಪ ನಡೆಯಲಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿರುವ ಸಮಯದಲ್ಲಿ ಅಧಿವೇಶನ ಬಿರುಗಾಳಿಯಿಂದ ಕೂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರಕ್ರಿಯೆಯ ವಿರುದ್ಧ ಹಲವಾರು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕೂಡ ಅಧಿವೇಶನದ ಮೇಲೆ ಪರಿಣಾಮ ಬೀರಲಿದೆ.ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಹೇರಿಕೆ ಕ್ರಮಗಳು ಕೂಡ ಪ್ರತಿಧ್ವನಿಸುವ ಸಂಭವವಿದೆ.
ಕಳೆದ ವರ್ಷ, ಅಧಿವೇಶನವು ನ.25 ರಿಂದ ಡಿ. 20 ರವರೆಗೆ ನಡೆದಿತ್ತು. ಇದನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಅಧಿವೇಶನ ಈ ಸಲ ಅಸಾಮಾನ್ಯವಾಗಿ ವಿಳಂಬವಾಗಿದೆ ಮತ್ತು ಮೊಟಕುಗೊಂಡಿದೆ. ಏಕೆಂದರೆ ಸರ್ಕಾರಕ್ಕೆ ಮಾಡಲು ಯಾವುದೇ ಕೆಲಸವಿಲ್ಲ, ಯಾವುದೇ ಮಸೂದೆಗಳನ್ನು ಅಂಗೀಕರಿಸುವ ಅಗತ್ಯವಿಲ್ಲ ಮತ್ತು ವುದೇ ಚರ್ಚೆಗಳಿಗೆ ಅವಕಾಶವಿಲ್ಲ’ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ