
1997 ರಿಂದ 2012ರ ಒಳಗೆ ಹುಟ್ಟಿದ ಮಕ್ಕಳನ್ನು ಜೆನ್ ಝೀ (Gen Z)ಗಳು ಎನ್ನುತ್ತಾರೆ. ಇದರ ಅರ್ಥ ಇವರ ವಯಸ್ಸು ಈಗ 13 ರಿಂದ 28 ವರ್ಷ. ಜೆನ್ ಝೀ ಎನ್ನುವ ಶಬ್ದ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಹಾಗೂ ಇಂಥದ್ದೊಂದು ಶಬ್ದ ಇದೆ ಎನ್ನುವುದು ತಿಳಿದದ್ದು ನೇಪಾಳದಲ್ಲಿ ದಂಗೆ ಸೃಷ್ಟಿಯಾದಾಗ, ಇಡೀ ನೇಪಾಳವನ್ನು ಮಾತ್ರವಲ್ಲದೇ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು ಈ ಯುವ ಸಮೂಹ. ಅಲ್ಲಿಯ ರಾಜಕೀಯ ಪರಿಸ್ಥಿತಿ, ಭ್ರಷ್ಟಾಚಾರ ಸೇರಿದಂತೆ ಹಲವು ಅನಿಷ್ಟಗಳಿಂದ ಹಲವು ವರ್ಷಗಳಿಂದ ಬೇಸತ್ತು ಹೋಗಿದ್ದ ಯುವ ಸಮೂಹವು, ಇಂಟರ್ನೆಟ್ ಸ್ಥಗಿತಗೊಳಿಸಿದ್ದನ್ನೇ ನೆಪವಾಗಿಸಿಕೊಂಡು ನಡೆಸಿದ ಮಾರಾಮಾರಿ ಅಷ್ಟಿಷ್ಟಲ್ಲ. ಆದ ಸಾವುನೋವುಗಳಿಗೆ ಲೆಕ್ಕವೇ ಇಲ್ಲ. ಅದನ್ನೇ ಮಾದರಿಯಾಗಿಟ್ಟುಕೊಂಡು ಭಾರತದಲ್ಲಿಯೂ ಇಂಥದ್ದೊಂದು ದಂಗೆಯನ್ನು ಸದ್ದಿಲ್ಲದೇ ಸೃಷ್ಟಿಸಲು ಒಂದಷ್ಟು ವರ್ಗದಿಂದ ಪಿತೂರಿ ನಡೆದಿತ್ತು ಎಂದೂ ಹೇಳಲಾಗುತ್ತಿದೆ!
ಅದೇನೇ ಇರಲಿ, ಒಟ್ಟಿನಲ್ಲಿ ಜೆನ್ ಝೀ ಮಕ್ಕಳು ಎಂದರೆ ಹೇಳುವ ಮಾತನ್ನು ಕೇಳದವರು, ಹಿರಿಯರು ಎಂದರೆ ಅಸಡ್ಡೆ ತೋರುವವರು, ದಂಗೆ ಸೃಷ್ಟಿಸುವವರು, ಪಬ್, ಕ್ಲಬ್ ಎಂದುಕೊಂಡು ದಿನ ಕಳೆಯುವವರು, ಇಡೀ ದಿನ ಸೋಷಿಯಲ್ ಮೀಡಿಯಾ- ಮೊಬೈಲ್ನಲ್ಲಿ ಮುಳುಗಿರುವವರು ಎಂದೆಲ್ಲಾ ಬೈದುಕೊಳ್ಳುವುದು, ಹೀಯಾಳಿಸುವುದು ಇದೆ. ಆದರೆ ಇಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಭಾರತದ ಹಲವಾರು ನಗರಳಲ್ಲಿ ಈ ಜೆನ್ ಝೀಗಳು ಹೊಸ ವಾತಾವರಣವನ್ನೇ ಸೃಷ್ಟಿಸಿದ್ದಾರೆ. ನಡುರಾತ್ರಿ ಕ್ಲಬ್‌ಗಳಲ್ಲಿ ಇವರು ಮಾಡುತ್ತಿರುವುದೇನು ನೋಡಿದರೆ, ಅವುಗಳ ವೈರಲ್ ವಿಡಿಯೋ ನೋಡಿದ್ರೆ ಬಹುತೇಕ ಮಂದಿ ನಂಬುವುದೂ ಕಷ್ಟವಾಗಬಹುದು.
ಈ ಮಕ್ಕಳೆಲ್ಲರೂ ಕ್ಲಬ್ನಲ್ಲಿ ಇರುವುದು ನಿಜವೇ. ಆದರೆ ಬಹುತೇಕ ಕಡೆಗಳಲ್ಲಿ 'ಭಜನ್ ಕ್ಲಬ್ಬಿಂಗ್' ಎಂಬ ಹೊಸ ಟ್ರೆಂಡ್ ಶುರುವಾಗಿದೆ. ಇಲ್ಲಿ ಅರೆಬರೆ ಡ್ರೆಸ್ನಲ್ಲಿ ಅಶ್ಲೀಲ ನೃತ್ಯಗಳು, ಕುಡಿತ ಮೋಜು ಮಸ್ತಿ, ಜೋರಾದ ಡಿಜೆಗಳ ಬದಲಿಗೆ, ಯುವಕರು ಆಧ್ಯಾತ್ಮಿಕತೆಯು ಲಯವನ್ನು ಪೂರೈಸುವ ಭಾವಪೂರ್ಣ ಸಂಗೀತವನ್ನು ಹಾಡುತ್ತಿದ್ದಾರೆ. ಇಂಥದ್ದೊಂದು ಭಜನ್ ಕ್ಲಬ್ಬಿಂಗ್ ಹವಾ ಈಗ ಜೋರಾಗಿದೆ. ಇದೊಂದು ಉದಯೋನ್ಮುಖ ಸಾಮಾಜಿಕ ಮತ್ತು ಅಧ್ಯಾತ್ಮಿಕ ಚಳವಳಿಯಾಗಿದ್ದು, ಇಲ್ಲಿ ಯುವಕರು ಹಾಡಲು ಮತ್ತು ಭಕ್ತಿಗೀತೆಗಳಿಗೆ ಒಟ್ಟಾಗಿ ದನಿಗೂಡಿಸಲು ಸೇರುತ್ತಾರೆ. ಆಗಾಗ್ಗೆ ಸಮಕಾಲೀನ ಬೀಟ್‌ಗಳು ಮತ್ತು ವಾದ್ಯಗಳೊಂದಿಗೆ ಈ ಸಂಗೀತದಲ್ಲಿ ಬೆಸೆದುಕೊಳ್ಳುತ್ತಾರೆ.
ಮಂದ ಬೆಳಕಿನ ಕೊಠಡಿಗಳು, ಕಾಲ್ಪನಿಕ ದೀಪಗಳು, ನೆಲದ ಮೇಲೆ ಚಾಪೆಗಳು ಇವಿಷ್ಟೇ ಇಲ್ಲಿರುವ ವಸ್ತುಗಳು. ಇದರ ಜೊತೆ ಅಲ್ಲಿ ಮೊಳಗುವುದು ಶ್ರೀ ಕೃಷ್ಣ ಗೋವಿಂದ್ ಹರೇ ಮುರಾರಿ ಅಥವಾ ರಾಮ್ ರಾಮ್ ಜೈ ರಾಜಾ ರಾಮ್‌ನಂತಹ ಗಾಯನಗಳು. ಒಂದು ರೀತಿಯಲ್ಲಿ ಇಲ್ಲಿ ಭಕ್ತಿಯ ವಾತಾವರಣವೇ ಸೃಷ್ಟಿಯಾಗಿರುತ್ತದೆ. ಮುಂಬೈ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಇದೀಗ ಹೆಚ್ಚು ಟ್ರೆಂಡಿಂಗ್ ಆಗಿದ್ದು, ಬೆಂಗಳೂರಿನಂಥ ಮಹಾನಗರಗಳಲ್ಲಿಯೂ ಜೆನ್ ಝೀಗಳು ಇದರತ್ತ ಒಲವು ತೋರುತ್ತಿರುವುದು ವರದಿಯಾಗಿದೆ.
ಇಂಥ ಭಜನೆ ಕ್ಲಬ್ ರಾತ್ರಿಗಳನ್ನು ಆಯೋಜಿಸುತ್ತಿರುವ ಬ್ಯಾಕ್‌ಸ್ಟೇಜ್ ಸಿಬ್ಲಿಂಗ್ಸ್ (@backstagesiblings) ನಂತಹ ಗುಂಪುಗಳು ಎಲ್ಲೆಡೆ ಭಕ್ತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಯುವ ಸಮುದಾಯವನ್ನು ಇಲ್ಲಿ ಸೆಳೆಯಲಾಗುತ್ತಿದೆ. ಕೆಲಸದ ಒತ್ತಡ, ಓದಿನ ಒತ್ತಡದ ಜೊತೆಗೆ ಮನಸ್ಸಿನ ಒತ್ತಡವನ್ನು ಇದೇ ಮಾರ್ಗದಲ್ಲಿ ನಿವಾರಿಸಿಕೊಳ್ಳುವ ವ್ಯವಸ್ಥೆ ಮಾಡಕಾಗುತ್ತಿದೆ. ಇದರ ಹಲವಾರು ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇಲ್ಲಿ ಕೆಳಗೆ ಒಂದಿಷ್ಟು ವಿಡಿಯೋಗಳ ಲಿಂಕ್ ಕೊಡಲಾಗಿದೆ. ಜೆನ್ ಝಿಗಳು ಹೇಗೆ ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಇಲ್ಲಿ ನೋಡಬಹುದಾಗಿದೆ.
ಇದರ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ