ಬಿಜೆಪಿ ‘ರಾಷ್ಟ್ರಭಕ್ತಿ’ ಪರ, ವಿಪಕ್ಷ ‘ಕುಟುಂಬ ಭಕ್ತಿ’ ಪರ: ಪ್ರಧಾನಿ ಮೋದಿ ವ್ಯಂಗ್ಯ

By Suvarna NewsFirst Published Apr 7, 2022, 8:18 AM IST
Highlights

ರಷ್ಯಾ-ಉಕ್ರೇನ್‌ ಸಮರವು ಇಂದು ವಿಶ್ವವನ್ನು ಇಭ್ಭಾಗ ಮಾಡಿದೆ. ಆದರೆ ಭಾರತ ಮಾತ್ರ ದೇಶದ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತಿದ್ದು, ವಿಭಿನ್ನ ನಿಲುವು ತಾಳಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ

ನವದೆಹಲಿ (ಏ. 7): ಬಿಜೆಪಿ ‘ರಾಷ್ಟ್ರಭಕ್ತಿ’ ಪರ ನಿಲ್ಲುತ್ತದೆ. ಆದರೆ ವಿರೋಧಿಗಳು‘ಕುಟುಂಬ ರಾಜಕಾರಣ’ದ ಪರ ನಿಲ್ಲುತ್ತಾರೆ. ಆದರೆ ಇಂಥ ಕುಟುಂಬ ರಾಜಕೀಯವು ಪ್ರಜಾಪ್ರಭುತ್ವದ ದೊಡ್ಡ ಶತ್ರು ಎಂಬುದರ ಅರಿವು ಈಗ ಜನರಿಗೆ ಆಗತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಹಾಗೂ ಇತರ ವಿಪಕ್ಷಗಳ ಹೆಸರೆತ್ತದೇ ಕುಟುಕಿದ್ದಾರೆ.ಇದೇ ವೇಳೆ, ರಷ್ಯಾ-ಉಕ್ರೇನ್‌ ಯುದ್ಧದಿಂದ ಉದ್ಭವಿಸಿದ ಪರಿಸ್ಥಿತಿ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ‘ಈ ಸಮರವು ಇಂದು ವಿಶ್ವವನ್ನು ಇಭ್ಭಾಗ ಮಾಡಿದೆ. ಆದರೆ ಭಾರತ ಮಾತ್ರ ದೇಶದ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತಿದ್ದು, ವಿಭಿನ್ನ ನಿಲುವು ತಾಳಿದೆ’ ಎಂದಿದ್ದಾರೆ. ಈ ಮೂಲಕ ಯುದ್ಧ ವಿಚಾರದಲ್ಲಿ ತಮ್ಮ ತಟಸ್ಥ ಧೋರಣೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯ 42ನೇ ಸಂಸ್ಥಾಪನಾ ದಿನದ ನಿಮಿತ್ತ ಬುಧವಾರ ಆನ್‌ಲೈನ್‌ನಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಹೆಸರೆತ್ತದೇ ಪರಿವಾರವಾದದ ವಿರುದ್ಧ ಹರಿಹಾಯ್ದರು. ‘ಕುಟುಂಬ ಆಡಳಿತವು ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರುತ್ತದೆ. ಪರಸ್ಪರರ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಯತ್ನಿಸುತ್ತದೆ. ಅಲ್ಲದೆ, ಅನೇಕ ಪ್ರತಿಭಾವಂತರಿದ್ದರೂ ಅಂಥವರು ಕುಟುಂಬ ರಾಜಕಾರಣದಿಂದ ಮೇಲೆ ಬರಲಾಗದೇ ಬಲಿಪಶುವಾಗಿದ್ದಾರೆ. ಇಂಥದ್ದನ್ನು ಮೊದಲು ಚುನಾವಣಾ ವಿಷಯ ಮಾಡಿದ್ದೇ ಬಿಜೆಪಿ. ಇಂಥ ಪಕ್ಷಗಳು ಮಾಡುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತಿದ್ದಾರೆ. ಕೆಲವರು ಪ್ರಾಣಾರ್ಪಣೆಯನ್ನೂ ಮಾಡಿದ್ದಾರೆ. ಆದರೆ ಪ್ರಜಾಸತ್ತೆ ವಿರೋಧಿಗಳನ್ನು ಸೋಲಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಹೇಳಿದರು. ಈ ಮೂಲಕ ಇತ್ತೀಚಿನ ಪ.ಬಂಗಾಳ ರಾಜಕೀಯ ಹಿಂಸಾಚಾರದ ಬಗ್ಗೆ ಪರೋಕ್ಷ ಉಲ್ಲೇಖ ಮಾಡಿದರು.

Latest Videos

ಇದನ್ನೂ ಓದಿ: ಆಪರೇಷನ್‌ ಗಂಗಾ ಮೋದಿ ಛಲಕ್ಕೆ ಸಾಕ್ಷಿ: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌

‘ನಾವು ಮತಬ್ಯಾಂಕ್‌ ರಾಜಕೀಯ ಮಾಡುವುದಿಲ್ಲ. ತಾರತಮ್ಯ ರಹಿತವಾಗಿ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಎಲ್ಲರಿಗೂ ಯೋಜನೆಗಳ ಫಲ ಸಿಗಬೇಕು ಎಂಬ ಇರಾದೆ ನಮ್ಮದು. ಆದರೆ ಕೆಲವು ಪಕ್ಷಗಳು ಮತಬ್ಯಾಂಕ್‌ ರಾಜಕೀಯಕ್ಕೆ ಕಟ್ಟು ಬಿದ್ದು ಸಮಾಜದ ಕೆಲವು ವರ್ಗಗಳನ್ನು ನಿರ್ಲಕ್ಷಿಸುತ್ತವೆ. ಮತ ಬ್ಯಾಂಕ್‌ ರಾಜಕೀಯದ ಅಡ್ಡಪರಿಣಾಮವೇ ಭ್ರಷ್ಟಾಚಾರ ಹಾಗೂ ತಾರತಮ್ಯ. ಇಂಥ ಧೋರಣೆಗಳ ಬಗ್ಗೆ ಜನರಿಗೆ ಅರಿವಾಗತೊಡಗಿದೆ’ ಎಂದರು.

‘ಬಿಜೆಪಿಗೆ ರಾಜನೀತಿ ಹಾಗೂ ರಾಷ್ಟ್ರನೀತಿ ಬೇರೆಬೇರೆ ಅಲ್ಲ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬುದು ನಮ್ಮ ಮಂತ್ರ. ಇಂಥ ತಾರತಮ್ಯರಹಿತ ಕೆಲಸಕ್ಕಾಗಿ ಇಂದು ಜನರು ಬಿಜೆಪಿಗೆ ಮತ ನೀಡುತ್ತಿದ್ದಾರೆ. ಸಮಾಜದ ಎಲ್ಲ ವರ್ಗದ ಜನ ಇಂದು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಇದರ ಫಲವಾಗಿಯೇ ಇತ್ತೀಚೆಗೆ ಬಿಜೆಪಿ 4 ರಾಜ್ಯಗಳಲ್ಲಿ ಮತ್ತೆ ಗೆದ್ದಿದೆ ಹಾಗೂ 3 ದಶಕದ ಬಳಿಕ ರಾಜ್ಯದಭೆಯಲ್ಲಿ 100 ಸದಸ್ಯರ ಬಲ ಗಳಿಸಿದ ಸಾಧನೆ ಮಾಡಿದೆ’ ಎಂದು ಹೇಳಿದರು.

ಇದೇ ವೇಳೆ, ಕೋವಿಡ್‌ ಲಸಿಕಾಕರಣ, ಬಡವರಿಗೆ ಉಚಿತ ಪಡಿತರ, ಎಲ್‌ಪಿಜಿ ಯೋಜನೆಗಳು- ಇಂಥ ಮುಂತಾದ ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.

ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್

- ‘ಕುಟುಂಬ ರಾಜಕೀಯ’ ದೇಶಕ್ಕೆ ದೊಡ್ಡ ಶತ್ರು ಎಂದು ಜನರಿಗೆ ಅರಿವಾಗತೊಡಗಿದೆ

- ಕುಟುಂಬ ರಾಜಕೀಯದಲ್ಲಿ ಸಂವಿಧಾನಕ್ಕೆ ಗೌರವವಿಲ್ಲ, ಅಲ್ಲಿ ಕೇವಲ ಭ್ರಷ್ಟಾಚಾರ

- ಅನೇಕ ಪ್ರತಿಭಾವಂತರು ಇಂಥ ರಾಜಕೀಯದ ಬಲಿಪಶುವಾದರು

- ಇಂಥ ಪರಿವಾರವಾದಕ್ಕೆ ಸವಾಲು ಹಾಕಿದ್ದು ಬಿಜೆಪಿ ಮಾತ್ರ

- ಪ್ರಜಾಸತ್ತೆ ವಿರೋಧಿಗಳನ್ನು ಸೋಲಿಸುವವರೆಗೆ ನಮ್ಮ ಹೋರಾಟ ನಿಲ್ಲಲ್ಲ

- ತಾರತಮ್ಯ ರಹಿತ ಕೆಲಸದ ಕಾರಣ ಜನರು ನಮ್ಮನ್ನು ಆಶೀರ್ವದಿಸಿದ್ದಾರೆ

- ರಷ್ಯಾ-ಉಕ್ರೇನ್‌ ಯುದ್ಧ ಜಗತ್ತನ್ನು 2 ಹೋಳು ಮಾಡಿದೆ

- ಆದರೆ ಭಾರತ ರಾಷ್ಟ್ರ ಹಿತಕ್ಕೆ ಆದ್ಯತೆ ನೀಡಿ ವಿಭಿನ್ನ ನಿಲುವು ತಾಳಿದೆ

ಇದನ್ನೂ ಓದಿ: ಭಾರತ ಹಿಂದೆಂದಿಗಿಂತಲೂ ಈಗ ಹೆಚ್ಚು ಸದೃಢ: ಪ್ರಧಾನಿ ಮೋದಿ

click me!