ಟಿಎಂಸಿ ನಾಯಕ ಬಂಧನದ ಬೆನ್ನಲ್ಲೇ ಪರೇಶ್‌ ರಾವಲ್‌ಗೆ ಕೋಲ್ಕತ್ತಾ ಪೊಲೀಸರಿಂದ ಸಮನ್ಸ್‌..!

By BK AshwinFirst Published Dec 6, 2022, 9:04 PM IST
Highlights

ಗುಜರಾತ್‌ನ ಜನರು ಹಣದುಬ್ಬರವನ್ನು ಸಹಿಸಿಕೊಳ್ಳುತ್ತಾರೆ, ಆದರೆ ಪಕ್ಕದಲ್ಲಿರುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ಸಹಿಸುವುದಿಲ್ಲ ಎಂದು ಪರೇಶ್‌ ರಾವಲ್‌ ಹೇಳಿದ್ದರು. 
 

ಗುಜರಾತ್‌ನಲ್ಲಿ (Gujarat) ನಡೆದ ಚುನಾವಣಾ ರ‍್ಯಾಲಿಯಲ್ಲಿ (Election Rally) ಬೆಂಗಾಲಿಗಳ (Bengalis) ಬಗ್ಗೆ ನೀಡಿದ್ದ ಹೇಳಿಕೆಯ ಕುರಿತು ನಟ ಹಾಗೂ ಬಿಜೆಪಿ (BJP) ನಾಯಕ ಪರೇಶ್ ರಾವಲ್‌ಗೆ (Paresh Rawal) ಕೋಲ್ಕತ್ತಾ ಪೊಲೀಸರು (Kolkata Police) ವಿಚಾರಣೆಗೆ ಹಾಜರಾಗಲು ಸಮನ್ಸ್‌ ನೀಡಿದ್ದಾರೆ. ಡಿಸೆಂಬರ್ 12 ರಂದು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಕೋಲ್ಕತ್ತಾ ಪೊಲೀಸರು ಪರೇಶ್ ರಾವಲ್‌ಗೆ ಸಮನ್ಸ್ ನೀಡಿದ್ದಾರೆ. ಪರೇಶ್ ರಾವಲ್ ವಿರುದ್ಧ ಮಾಜಿ ಸಂಸದ ಹಾಗೂ ಸಿಪಿಐ(ಎಂ) (CPI (M)) ಮುಖಂಡ ಮೊಹಮ್ಮದ್‌ ಸಲೀಂ ದೂರು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಬೇಕೆಂದು ಬಯಸಿದ್ದರು. ಇದರಲ್ಲಿ ದ್ವೇಷ ಉತ್ತೇಜಿಸುವುದು, ಉದ್ದೇಶಪೂರ್ವಕ ಅವಮಾನ, ಸಾರ್ವಜನಿಕ ಕಿಡಿಗೇಡಿತನ ಇತ್ಯಾದಿ ಆರೋಪಗಳು ಸೇರಿದ್ದವು.

ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿ ಪರ ಪ್ರಚಾರ ಮಾಡುವಾಗ, ಗುಜರಾತ್‌ನ ಜನರು ಹಣದುಬ್ಬರವನ್ನು ಸಹಿಸಿಕೊಳ್ಳುತ್ತಾರೆ. ಆದರೆ ಪಕ್ಕದಲ್ಲಿರುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದರು. ಮತ್ತು, ಕುಕ್ಕಿಂಗ್‌ ಫಿಶ್‌ ಅಥವಾ ಬೇಯಿಸುತ್ತಿರುವ ಮೀನು ಎಂಬ ಪದವನ್ನು ಅವರನ್ನು ಬಳಸಿದ್ದು, ಬಂಗಾಳಿಗಳನ್ನು ಕೆರಳಿಸಿದೆ. 

ಇದನ್ನು ಓದಿ: ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ, ಟಿಎಂಸಿ ನಾಯಕನ ಬಂಧಿಸಿದ ಪೊಲೀಸ್!

ಗ್ಯಾಸ್ ಸಿಲಿಂಡರ್‌ಗಳು ದುಬಾರಿಯಾಗಿದೆ, ಆದರೆ ಅವುಗಳ ಬೆಲೆ ಕಡಿಮೆಯಾಗುತ್ತದೆ, ಜನರಿಗೆ ಉದ್ಯೋಗವೂ ಸಿಗುತ್ತದೆ. ಆದರೆ ರೋಹಿಂಗ್ಯಾ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದೆಹಲಿಯಲ್ಲಿ ನಿಮ್ಮ ಸುತ್ತಲೂ ವಾಸಿಸಲು ಪ್ರಾರಂಭಿಸಿದರೆ ಏನಾಗುತ್ತದೆ? ಗ್ಯಾಸ್ ಸಿಲಿಂಡರ್‌ಗಳನ್ನು ನೀವೇನು ಮಾಡುತ್ತೀರಿ? ಬಂಗಾಳಿಗಳಿಗೆ ಮೀನು ಬೇಯಿಸುತ್ತೀರಾ..? ಎಂದು ಪರೇಶ್ ರಾವಲ್ ಕಳೆದ ವಾರ ವಲ್ಸಾದ್‌ನಲ್ಲಿ ಹೇಳಿದ್ದರು. ಬಿಜೆಪಿ ನಾಯಕನ ಈ ಹೇಳಿಕೆಯು ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್  ಆಕ್ರೋಶ ವ್ಯಕ್ತಪಡಿಸಿತ್ತು.

ಅವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಬಳಿಕ ಹಿರಿಯ ನಟ ಪರೇಶ್‌ ರಾವಲ್‌ ಕ್ಷಮೆ ಕೇಳಿದರು ಹಾಗೂ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಲು ಅವರು ಪ್ರಯತ್ನ ನೀಡಿದರು. ಆದರೂ, ಬಂಗಾಳಿಗಳು ಎಂಬ ಪದ ಬಳಸಿದಾಗ ನಾನು ಅಕ್ರಮ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳ ಬಗ್ಗೆ ಮಾತನಾಡಿದ್ದೆ ಎಂದು ಹೇಳುವ ಮೂಲಕ ಗದ್ದಲವನ್ನು ಮತ್ತಷ್ಟು ಜಾಸ್ತಿ ಮಾಡಿದರು.

ಇದನ್ನೂ ಓದಿ: 'ನಮ್ಮ ರಾಷ್ಟ್ರಪತಿ ನೋಡೋಕೆ ಹೇಗಿದ್ದಾರೆ ಗೊತ್ತಲ್ಲ...' ಟಿಎಂಸಿ ನಾಯಕನ ವಿವಾದಿತ ಹೇಳಿಕೆಗೆ ಬಿಜೆಪಿ ಆಕ್ಷೇಪ!

ನವೆಂಬರ್‌ನಲ್ಲಿ ಗುಜರಾತ್‌ನ ಮೊರ್ಬಿಗೆ ಪ್ರಧಾನಿ ಮೋದಿಯವರ ಭೇಟಿಯಿಂದ ರಾಜ್ಯ ಸರ್ಕಾರಕ್ಕೆ 30 ಕೋಟಿ ರೂ. ನಷ್ಟವಾಗಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಅವರನ್ನು ಬಂಧಿಸಿದ ದಿನವೇ ಪರೇಶ್ ರಾವಲ್‌ಗೆ ಸಮನ್ಸ್‌ ನೀಡಲಾಗಿದೆ. 

ಗುಜರಾತ್ ಚುನಾವಣೆ ಮುಗಿದು ಇದೀಗ ಫಲಿತಾಂಶದ ಕುತೂಹಲ ಹೆಚ್ಚಾಗಿದೆ. ಆದರೆ ರಾಜಕೀಯ ಕೆಸರೆರೆಚಾಟ ಮಾತ್ರ ಮುಗಿದಿಲ್ಲ. ಹೀಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಪ್ರಚಾರ ಮಾಡಲು ಹೋದ ಟಿಎಂಸಿ ನಾಯಕ ಸಾಕೇತ್ ಗೋಖಲೆ ಬಂಧನವಾಗಿದ್ದಾರೆ. 

ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಮೊರ್ಬಿ ಸೇತುವೆ ದುರಂತ ಕುರಿತು ಸಾಕೇತ್ ಗೋಖಲೆ ಸುಳ್ಳು ಹರಡಿದ್ದರು. ದುರಂತ ಸ್ಥಳಕ್ಕೆ ಅರ್ಧ ಗಂಟೆಯ ಭೇಟಿಗೆ ಮೋದಿ 30 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಕುರಿತು ಆರ್‌ಟಿಐನಡಿ ಮಾಹಿತಿ ಪಡೆಯಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದರು. ಆದರೆ ಈ ಮಾಹಿತಿ ಸುಳ್ಳು ಎಂದು ಭಾರತದ ಪ್ರಸಾರ ಮತ್ತು ಮಾಹಿತಿ ಇಲಾಖೆ ಅಧಿಕೃತ ಟ್ವಿಟ್ಟರ್‌ ಹೇಳಿತ್ತು. ಇದರಿಂದ ಸಾಕೇತ್ ಗೋಖಲೆ ವಿರುದ್ದ ದೂರು ದಾಖಲಾಗಿತ್ತು. ದೂರಿನ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಾಕೇತ್ ಗೋಖಲೆಯನ್ನು ಬಂಧಿಸಿದ್ದಾರೆ. ಇದಕ್ಕೆ ತಿರುಗೇಟು ಎನ್ನುವಂತೆ ಬಿಜೆಪಿ ನಾಯಕ ಪರೇಶ್‌ ರಾವಲ್‌ಗೆ ಕೋಲ್ಕತ್ತ ಪೊಲೀಸರು ಸಮನ್ಸ್‌ ನೀಡಿದ್ದಾರೆ. 
 

click me!