
ನವದೆಹಲಿ(ಏ.13): ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಸೋಮವಾರ ಇನ್ನೊಂದು ಹೆಜ್ಜೆ ಮುಂದಿರಿಸಿದೆ. ರಷ್ಯಾದ ‘ಸ್ಪುಟ್ನಿಕ್-5’ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗೆ ಬಳಸಬಹುದು ಎಂದು ಭಾರತದ ಔಷಧ ಪ್ರಾಧಿಕಾರದ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಈ ಶಿಫಾರಸನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಜಿಸಿಐ) ಪರಿಶೀಲಿಸಿ ಅಂತಿಮ ಒಪ್ಪಿಗೆ ಸೂಚಿಸಿದರೆ, ಭಾರತದಲ್ಲಿ 3ನೇ ಲಸಿಕೆ ದೊರಕಿದಂತಾಗುತ್ತದೆ. ಈಗಿನ ಮಟ್ಟಿಗೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗಷ್ಟೇ ಅನುಮತಿಯಿದ್ದು, ಅವನ್ನು ಮಾತ್ರ ಜನರಿಗೆ ನೀಡಲಾಗುತ್ತಿದೆ. ಈ ಎರಡೂ ಲಸಿಕೆ ಬಳಕೆಗೆ 2020ರ ಜ.3ರಂದು ಅನುಮತಿ ನೀಡಲಾಗಿತ್ತು.
ಸೋಮವಾರ ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ತಜ್ಞರ ಸಮಿತಿ, ಸ್ಪುಟ್ನಿಕ್-5 ಲಸಿಕೆಯ ಬಳಕೆಗೆ ‘ಡಾ| ರೆಡ್ಡೀಸ್ ಲ್ಯಾಬ್’ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಶಿಫಾರಸು ಮಾಡಿದೆ. ತುರ್ತು ಬಳಕೆಗೆ ಅನುಮತಿ ಸಿಕ್ಕ ತಕ್ಷಣವೇ ರಷ್ಯಾದಿಂದ ಲಸಿಕೆ ತರಿಸಿಕೊಂಡು ಭಾರತದಲ್ಲಿ ವಿತರಣೆ ಆರಂಭಿಸಲಾಗುವುದು ಎಂದು ಮೂಲಗಳು ಹೇಳಿವೆ. ಭಾರತದಲ್ಲಿ ಈಗ 2 ಲಸಿಕೆ ಮಾತ್ರ ಇರುವ ಕಾರಣ ಅಲ್ಲಲ್ಲಿ ಲಸಿಕೆಯ ಕೊರತೆ ಕಾಣಿಸಿಕೊಳ್ಳುತ್ತಿದೆ. ಸ್ಪುಟ್ನಿಕ್ ಬಂದರೆ ಈ ಕೊರತೆ ನೀಗುವ ಸಾಧ್ಯತೆ ಇದೆ.
ಸ್ಪುಟ್ನಿಕ್-5 ಲಸಿಕೆಯ ಎಲ್ಲ 3 ಹಂತದ ಪ್ರಯೋಗ ಪೂರ್ಣಗೊಂಡಿದೆ. ಈ ಲಸಿಕೆಯನ್ನು ಭಾರತದಲ್ಲಿ ಡಾ| ರೆಡ್ಡೀಸ್ ಲ್ಯಾಬ್ ಜನರ ಮೇಲೆ ಪ್ರಯೋಗ ನಡೆಸುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲೇ ರಷ್ಯಾ ಜತೆ ಡಾ| ರೆಡ್ಡೀಸ್ ಕಂಪನಿ ಒಪ್ಪಂದ ಮಾಡಿಕೊಂಡಿತ್ತು.
ರಷ್ಯಾದಲ್ಲಿ 19,866 ಸ್ವಯಂಸೇವಕರ ಮೇಲೆಯೂ ಸೇರಿದಂತೆ 3 ಹಂತದ ಲಸಿಕಾ ಪ್ರಯೋಗದ ದತ್ತಾಂಶವನ್ನು ಸ್ಪುಟ್ನಿಕ್-5 ನೀಡಿದ್ದು, ಲಸಿಕೆಯು ಶೇ.91.6ರಷ್ಟುಪರಿಣಾಮಕಾರಿ ಎಂದಿದೆ. ಸ್ಪುಟ್ನಿಕ್ ವಿಶ್ವದ ಮೊದಲ ಕೊರೋನಾ ಲಸಿಕೆ ಎಂಬ ಹಿರಿಮೆ ಹೊಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ