
ಲಖನೌ: ಪಾಕಿಸ್ತಾನದ ಪರ ಗೂಢಚಾರಿಕೆ ಆರೋಪದಲ್ಲಿ ಇತ್ತೀಚೆಗೆ ಉತ್ತರಪ್ರದೇಶದ ವಾರಾಣಸಿಯಲ್ಲಿ ಬಂಧಿಸಲ್ಪಟ್ಟಿದ್ದ ತುಘೈಲ್ ಮಕ್ಸೂದ್, 800ಕ್ಕೂ ಹೆಚ್ಚು ಜನರನ್ನು ಪಾಕ್ ಪರವಾಗಿ ಪರಿವರ್ತಿಸಿದ್ದ ಎಂಬ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಪಂಜಾಬ್, ಹರ್ಯಾಣ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದವರನ್ನು ಹುಡುಕಿ ಹುಡುಕಿ ಬಂಧಿಸಲಾಗುತ್ತಿರುವ ನಡುವೆಯೇ, 800 ಜನ ದೇಶವಿರೋಧಿಗಳು ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.
ತುಫೈಲ್, ಪಾಕಿಸ್ತಾನದ ನಫೀಸಾ ಎಂಬ ಮಹಿಳೆಯೊಂದಿಗೆ 4 ತಿಂಗಳಿಂದ ಸಂಪರ್ಕದಲ್ಲಿದ್ದ. ಆಕೆ ಕಳಿಸುತ್ತಿದ್ದ ಉಗ್ರನಾಯಕರ ಪ್ರಚೋದನಕಾರಿ ಮತ್ತು ಭಾರತ ವಿರೋಧಿ ವಿಡಿಯೋಗಳನ್ನು, ತಾನು ಸೃಷ್ಟಿಸಿದ್ದ 19 ವಾಟ್ಸಾಪ್ ಗ್ರೂಪ್‌ಗಳಲ್ಲಿ ತುಘೈಲ್ ಹರಿಬಿಡುತ್ತಿದ್ದ. ಈ 19 ವಾಟ್ಸಾಪ್ ಗ್ರೂಪ್‌ಗಳಲ್ಲಿ 800ಕ್ಕೂ ಹೆಚ್ಚು ಜನರು ಸದಸ್ಯರಿದ್ದು ಅವರ ಮೇಲೆ ಭದ್ರತಾಪಡೆಗಳು ತಮ್ಮ ನಿಗಾ ಹರಿಸಿವೆ. ತುಘೈಲ್ ಈ ವಾಟ್ಸಾಪ್ ಗ್ರೂಪ್ ಮೂಲಕ ಧರ್ಮದ ಹೆಸರಲ್ಲಿ ಭಾರತೀಯ ಯುವಕರನ್ನು ದೇಶದ ವಿರುದ್ಧ ಎತ್ತಿಕಟ್ಟುತ್ತಿದ್ದ. ಈತ 2047ರ ವೇಳೆಗೆ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯ ಸ್ಥಾಪಿಸಿ, ಷರಿಯತ್ ಕಾನೂನು ಜಾರಿಗೆ ತರುವ ಪರವಾಗಿದ್ದ ಎನ್ನಲಾಗಿದೆ.
ನಫೀಸಾ, 240 ಭಾರತೀಯರೊಂದಿಗೆ ಸಂಪರ್ಕ ಹೊಂದಿದ್ದರೆ, ಮಕ್ಸೂದ್ 600 ಪಾಕಿಸ್ತಾನಿಗಳ ಸಂಪರ್ಕದಲ್ಲಿದ್ದು, ಭಾರತದ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಟೀಕಿಸುತ್ತಲೇ ಭಾರತೀಯರಿದ್ದ ಸ್ಥಳಕ್ಕೆ ಪಾಕಿ ಅಫ್ರಿದಿ ಭೇಟಿ: ಟೀಕೆ
ನವದೆಹಲಿ: ಆಪರೇಷನ್ ಸಿಂದೂರದ ವೇಳೆ ಭಾರತವನ್ನು ಟೀಕಿಸಿ ಭಾರತ ವಿರೋಧಿ ನಿಲುವು ಪ್ರದರ್ಶಿಸಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ದುಬೈನಲ್ಲಿ ನಡೆಯುತ್ತಿದ್ದ ಕೇರಳಿಗರ ಕಾರ್ಯಕ್ರಮಕ್ಕೆ ಕರೆಯದೆಯೂ ಬಂದು ನಾಚಿಕೆಗೇಡಿನ ವರ್ತನೆ ಪ್ರದರ್ಶಿಸಿದ್ದಾರೆ.
ಮೊದಲಿಗೆ ಸ್ವತಃ ಕೇರಳ ಸಮುದಾಯವೇ ಅಫ್ರಿದಿಗೆ ಆಹ್ವಾನ ನೀಡಿತ್ತು ಎಂದು ಹೇಳಲಾಗಿತ್ತಾದರೂ ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ದುಬೈನ ಕೊಚ್ಚಿನ್ ವಿಶ್ವವಿದ್ಯಾಲಯ ಬಿ.ಟೆಕ್ ಹಳೆಯ ವಿದ್ಯಾರ್ಥಿಗಳ ಸಂಘ, ನಾವು ಅಂದು ಕಾರ್ಯಕ್ರಮ ಆಯೋಜಿಸಿದ್ದ ಸ್ಥಳದಲ್ಲೇ ಮತ್ತೊಂದು ಕಾರ್ಯಕ್ರಮಕ್ಕೆ ಅಫ್ರಿದಿ ಆಗಮಿಸಿದ್ದರು. ಈ ವೇಳೆ ಅವರು ಏಕಾಏಕಿ ನಮ್ಮ ಕಾರ್ಯಕ್ರಮದ ವೇದಿಕೆ ಏರಿ ಬಂದರು. ನಾವು ಅವರನ್ನು ಹೊರಹಾಕಲಾಗದ ಸ್ಥಿತಿಯಲ್ಲಿದ್ದೆವು. ಇದು ಉದ್ದೇಶಪೂರ್ವಕ ಘಟನೆ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ