ಪಾಕಿಸ್ತಾನ, ಚೀನಾ ಒಗ್ಗಟ್ಟನ್ನು ಲಘುವಾಗಿ ಪರಿಗಣಿಸಲಾಗದು| ಚೀನಾ ಗಡಿಯಲ್ಲಿ ನಮ್ಮ ಯೋಧರು ಯುದ್ಧ ಸನ್ನದ್ಧ| - ಚೀನಾ, ಪಾಕ್ ನಡುವೆ ಸಹಕಾರ ಹೆಚ್ಚಿದೆ: ಸೇನಾ ಮುಖ್ಯಸ್ಥ
ನವದೆಹಲಿ(ಜ.13): ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಇತ್ಯರ್ಥಗೊಳ್ಳುವ ವಿಶ್ವಾಸವಿದೆ. ಆದರೆ ಇದೇ ವೇಳೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನಾ ಪಡೆಗಳು ಅತ್ಯುನ್ನತ ಮಟ್ಟದ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆ ತಿಳಿಸಿದ್ದಾರೆ.
ಪಾಕಿಸ್ತಾನ ಹಾಗೂ ಚೀನಾ ಒಗ್ಗೂಡಿರುವುದು ಭಾರತದ ರಾಷ್ಟ್ರೀಯ ಭದ್ರತೆಗೆ ಬಲು ಅಪಾಯಕಾರಿ. ಈ ಎರಡೂ ದೇಶಗಳ ಒಗ್ಗಟ್ಟನ್ನು ಲಘುವಾಗಿ ಪರಿಗಣಿಸಲಾಗದು ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಲಡಾಖ್ ಗಡಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಅತ್ಯುನ್ನತ ಸನ್ನದ್ಧ ಸ್ಥಿತಿಯಲ್ಲಿವೆ. ಅದೇ ಪರಿಸ್ಥಿತಿಯಲ್ಲಿ ಮುಂದುವರಿಯಲಿವೆ. ಪರಸ್ಪರ ಹಾಗೂ ಸಮಾನ ಭದ್ರತೆಯ ಆಧಾರದ ಮೇಲೆ ಈ ಬಿಕ್ಕಟ್ಟಿಗೆ ಪರಿಹಾರ ಸಿಗುವ ವಿಶ್ವಾಸವಿದೆ. ಎರಡೂ ದೇಶಗಳು ಗಡಿಯಿಂದ ಯೋಧರನ್ನು ವಾಪಸ್ ಕರೆಸಿಕೊಂಡಿಲ್ಲ ಎಂದು ಹೇಳಿದರು.
ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯ ಎತ್ತರದ ಸ್ಥಳಗಳನ್ನು ಭಾರತ ವಶಪಡಿಸಿಕೊಂಡಿದ್ದು, ರಾಷ್ಟ್ರೀಯ ಹಿತಾಸಕ್ತಿ ಹಾಗೂ ಗುರಿಯ ಆಧಾರದ ಮೇಲೆ ಆ ಪ್ರದೇಶಗಳನ್ನು ತನ್ನ ಹಿಡಿತದಲ್ಲೇ ಇಟ್ಟುಕೊಳ್ಳಲಿದೆ ಎಂದು ವಿವರಿಸಿದರು.
ಚೀನಾ, ಪಾಕ್ ಡೇಂಜರ್:
ಪಾಕಿಸ್ತಾನ ಹಾಗೂ ಚೀನಾ ಒಗ್ಗೂಡಿ ದೊಡ್ಡ ಅಪಾಯ ಒಡ್ಡಿವೆ. ಈ ಒಗ್ಗಟ್ಟಿನ ಬೆದರಿಕೆಯನ್ನು ಕಡೆಗಣಿಸಲಾಗದು. ಎರಡೂ ಗಡಿಯಲ್ಲಿ ಎದುರಾಗುವ ಬೆದರಿಕೆಯನ್ನು ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ. ಚೀನಾ ಹಾಗೂ ಪಾಕಿಸ್ತಾನ ನಡುವೆ ಮಿಲಿಟರಿ ಮತ್ತು ಮಿಲಿಟರಿಯೇತರ ಕ್ಷೇತ್ರಗಳಲ್ಲೂ ಸಹಕಾರ ವೃದ್ಧಿಯಾಗಿದೆ. ಭಯೋತ್ಪಾದನೆಯನ್ನು ಸರ್ಕಾರದ ನೀತಿಯಾಗಿ ಪಾಕಿಸ್ತಾನ ಬಳಸಿಕೊಳ್ಳುತ್ತಿದೆ. ಆದರೂ ಈ ಪಿಡುಗನ್ನು ಭಾರತ ಪರಿಣಾಮಕಾರಿಯಾಗಿ ಎದುರಿಸಲಿದೆ. ಅತ್ಯಂತ ನಿಖರವಾಗಿ ನಮಗೆ ಇಷ್ಟಬಂದ ಸಮಯದಲ್ಲಿ ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರತಿಕ್ರಿಯಿಸುವ ಹಕ್ಕನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.