'ಉದ್ವಿಗ್ನತೆಯ ದುರುದ್ದೇಶವೇ ಪಾಕ್‌, ಚೀನಾ ಗಡಿ ತಂಟೆಗೆ ಕಾರಣ'

By Kannadaprabha NewsFirst Published Oct 13, 2020, 9:21 AM IST
Highlights

ಉದ್ವಿಗ್ನತೆಯ ದುರುದ್ದೇಶವೇ ಪಾಕ್‌, ಚೀನಾ ಗಡಿ ತಂಟೆಗೆ ಕಾರಣ: ರಾಜನಾಥ್‌ ಆಕ್ರೋಶ| ಚೀನಾಕ್ಕೆ ಗಡಿ ಸಮಸ್ಯೆ ಇತ್ಯರ್ಥ ಆಗುವುದು ಬೇಕಿಲ್ಲ

ನವದೆಹಲಿ(ಅ.13): ಭಾರತದ ಉತ್ತರ ಮತ್ತು ಪೂರ್ವ ಗಡಿ ಸರಹದ್ದು ಪ್ರದೇಶಗಳನ್ನು ಸದಾ ಉದ್ವಿಗ್ನತೆಯಲ್ಲಿಡುವ ದುರುದ್ದೇಶದಿಂದಲೇ ನೆರೆಯ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಗಡಿ ವಿವಾದವನ್ನು ಸೃಷ್ಟಿಸುತ್ತಿವೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕಿಡಿಕಾರಿದ್ದಾರೆ.

ಗಡಿ ಮುಂಚೂಣಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವಂತೆ ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ(ಬಿಆರ್‌ಒ) ನಿರ್ಮಾಣ ಮಾಡಿದ 44 ಸೇತುವೆಗಳನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಿ ಮಾತನಾಡಿ ರಾಜನಾಥ್‌, ‘ನಾವು ಚೀನಾ ಮತ್ತು ಪಾಕಿಸ್ತಾನದ ಜೊತೆಗೆ 7 ಸಾವಿರ ಕಿ.ಮೀ ವ್ಯಾಪ್ತಿಯ ಗಡಿಯನ್ನು ಹೊಂದಿದ್ದೇವೆ. ಉಭಯ ದೇಶಗಳು ದುರುದ್ದೇಶದಿಂದ ಗಡಿ ವಿವಾದವನ್ನು ಕೆದಕುತ್ತಿವೆ. ತನ್ಮೂಲಕ ಉತ್ತರ ಮತ್ತು ಪೂರ್ವ ಗಡಿ ಸರಹದ್ದು ಪ್ರದೇಶಗಳಲ್ಲಿ ಪ್ರತೀ ನಿತ್ಯ ತ್ವೇಷಮಯ ವಾತಾವರಣ ನಿರ್ಮಿಸುತ್ತಿವೆ. ಅಲ್ಲದೆ, ಈ ರಾಷ್ಟ್ರಗಳಿಗೆ ಗಡಿ ಸಮಸ್ಯೆ ಇತ್ಯರ್ಥವಾಗುವುದು ಬೇಕಿಲ್ಲ. ಭಾರತ ದೃಢ ನಿಶ್ಚಯದೊಂದಿಗೆ ಗಡಿಯಲ್ಲಿನ ಪರಿಸ್ಥಿತಿ ಎದುರಿಸುವುದರ ಜೊತೆಗೆ ಅಭಿವೃದ್ಧಿಗೂ ಆದ್ಯತೆ ನೀಡಿದೆ’ ಎಂದರು.

ಕೊರೋನಾ ವೈರಸ್‌ ಹಾಗೂ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಹೊರತಾಗಿಯೂ ಭಾರತ ಎಲ್ಲಾ ವಲಯಗಳಲ್ಲಿ ಐತಿಹಾಸಿಕ ಬದಲಾವಣೆಗಳನ್ನು ತಂದಿದೆ. ಗಡಿಯಲ್ಲಿನ ಮೂಲಭೂತ ಸೌಕರ್ಯ ಸುಧಾರಣೆಯಲ್ಲಿ ಬಿಆರ್‌ಒ ಸಾಧನೆ ಬಗ್ಗೆ ಹಾಡಿ ಹೊಗಳಿದ ರಾಜನಾಥ್‌, ಒಂದೇ ಸಲಕ್ಕೆ 44 ಸೇತುವೆಗಳನ್ನು ನಿರ್ಮಿಸಿರುವುದು ಒಂದು ದಾಖಲೆ. ಈ ಸೇತುವೆಗಳು ನಾಗರಿಕರು ಮತ್ತು ಸೇನೆಯ ಸಂಚಾರಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

click me!