ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು; 35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್

Published : Apr 24, 2025, 09:23 AM ISTUpdated : Apr 24, 2025, 09:32 AM IST
ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು; 35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್

ಸಾರಾಂಶ

ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ ಕಾಶ್ಮೀರದ ಪ್ರಮುಖ ಪತ್ರಿಕೆಗಳು ಕಪ್ಪು ಮುಖಪುಟ ಪ್ರಕಟಿಸಿವೆ. 35 ವರ್ಷಗಳಲ್ಲಿ ಮೊದಲ ಬಾರಿಗೆ ಕಣಿವೆ ರಾಜ್ಯ ಬಂದ್ ಆಚರಿಸಲಾಗಿದೆ.

ಶ್ರೀನಗರ: 26 ಮಂದಿಯನ್ನು ಬಲಿಪಡೆದ ಪಹಲ್ಗಾಮ್‌ ಉಗ್ರ ದಾಳಿ ಕುರಿತ ಸುದ್ದಿಯನ್ನು ಕಾಶ್ಮೀರದ ಅನೇಕ ಪ್ರಮುಖ ಪತ್ರಿಕೆಗಳು ಬುಧವಾರ ತಮ್ಮ ಮುಖಪುಟವನ್ನು ಕಪ್ಪುಬಣ್ಣದಲ್ಲಿ ಪ್ರಕಟಿಸುವ ಮೂಲಕ ತೀವ್ರ ಖಂಡನೆ ವ್ಯಕ್ತಪಡಿಸಿವೆ.

ಗ್ರೇಟರ್ ಕಾಶ್ಮೀರ್‌, ಕಾಶ್ಮೀರ್‌ ಉಜ್ಮಾ, ಅಫ್ತಾಬ್‌ ಮತ್ತು ತೈಮೀಲ್‌ ಇರ್ಶದ್‌ ಹೀಗೆ ಇಂಗ್ಲಿಷ್‌, ಹಿಂದಿ, ಉರ್ದು ಪತ್ರಿಕೆಗಳು 26 ಮಂದಿಯನ್ನು ಬಲಿಪಡೆದ ಅಮಾನುಷ ಕೃತ್ಯಕ್ಕೆ ಕಪ್ಪುಮುಖಪುಟದಲ್ಲಿ ಕೆಂಪು ಅಥವಾ ಬಿಳಿ ಬಣ್ಣದಲ್ಲಿ ಹೆಡ್‌ಲೈನ್‌ ಪ್ರಕಟಿಸುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿವೆ. ಕಾಶ್ಮೀರವನ್ನು ದಶಕಗಳ ಕಾಲ ಕಾಡಿದ ಹಿಂಸಾಚಾರವನ್ನು ಸ್ಮರಿಸುವ ಹೆಡ್‌ಲೈನ್‌ ನೀಡಿವೆ.

ಕಾಶ್ಮೀರದ ಪ್ರಮುಖ ಇಂಗ್ಲಿಷ್‌ ಪತ್ರಿಕೆಯಾದ ಗ್ರೇಟರ್‌ ಕಾಶ್ಮೀರ್‌, "ಭಯಾನಕ: ಕಾಶ್ಮೀರ ನಾಶವಾಯಿತು, ಕಾಶ್ಮೀರಿಗರು ಶೋಕದಲ್ಲಿದ್ದಾರೆ" ಎಂಬ ಹೆಡ್‌ಲೈನ್‌ ಪ್ರಕಟಿಸಿದೆ. ಜತೆಗೆ, ಮುಖಪುಟದಲ್ಲೇ "ಹುಲ್ಲಿನ ಮೈದಾನದಲ್ಲಿ ನರಸಂಹಾರ-ಕಾಶ್ಮೀರದ ಆತ್ಮವನ್ನು ರಕ್ಷಿಸಿ" ಎಂಬ ತಲೆಬರಹದಡಿ ಸಂಪಾದಕೀಯವನ್ನೂ ಬರೆದಿದೆ. ಉಗ್ರರ ಕೃತ್ಯವನ್ನು ಕಟುಪದಗಳಲ್ಲಿ ಟೀಕಿಸಿರುವ ಪತ್ರಿಕೆಯು, ಭವಿಷ್ಯದಲ್ಲಿ ಈ ರೀತಿಯ ದಾಳಿ ತಡೆಯಬೇಕಾದ ಕ್ರಮಗಳ ಕುರಿತೂ ಎಚ್ಚರಿಸಿದೆ.

35 ವರ್ಷಗಳಲ್ಲಿ ಮೊದಲ ಬಾರಿ ಕಾಶ್ಮೀರ ಬಂದ್ 
ಜಮ್ಮು ಕಾಶ್ಮೀರದ ಪಹಲ್ಗಾಂ ಜಿಲ್ಲೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಅಟ್ಟಹಾಸವನ್ನು ಖಂಡಿಸಿ ಜಮ್ಮು ಕಾಶ್ಮೀರದಲ್ಲಿ ಬುಧವಾರ ಬಂದ್‌ಗೆ ಕರೆ ನೀಡಲಾಗಿತ್ತು. ಬರೋಬ್ಬರಿ 35 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯ ಸ್ತಬ್ಧಗೊಂಡಿತು. ಶ್ರೀನಗರದಲ್ಲಿ ಹೆಚ್ಚಿನ ಅಂಗಡಿಗಳು, ವ್ಯಾಪಾರ ಮಳಿಗೆಗಳು ಬಂದ್‌ಗೆ ಬೆಂಬಲ ಘೋಷಿಸಿ ಮುಚ್ಚಲ್ಪಟ್ಟಿದ್ದವು. ನಗರದಾ ದ್ಯಂತ ಅಗತ್ಯ ವಸ್ತುಗಳು ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್‌ ಆಗಿತ್ತು. ಇನ್ನು ಸಾರ್ವಜನಿಕ ಸಾರಿಗೆ ಸಂಚಾರವೂ ವಿರಳವಾಗಿತ್ತು. 

ಉಗ್ರರ ಅಟ್ಟಹಾಸ ಖಂಡಿಸಿ ಖಾಸಗಿ ಶಾಲೆಗಳಿಗೆ ಕೂಡ ರಜೆಯನ್ನು ಘೋಷಿಸಲಾಗಿತ್ತು. ಶ್ರೀನಗರ ಮಾತ್ರವಲ್ಲದೇ ಇತರ ಜಿಲ್ಲಾ ಕೇಂದ್ರಗಳಲ್ಲಿಯೂ ಬಂದ್‌ ಬಿಸಿ ತಟ್ಟಿತ್ತು.ಇನ್ನು ಘಟನೆಯನ್ನು ಖಂಡಿಸಿ ಹಲವೆಡೆ ಶಾಂತಿಯುತ ಪ್ರತಿಭಟನೆಗಳು ನಡೆದವು. ಬಂದ್‌ಗೆ ಎನ್‌ಸಿ, ಪಿಡಿಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಕೂಡ ಬೆಂಬಲ ನೀಡಿದ್ದವು. ಘನಘೋರ ದುರಂತದ ಬಳಿಕ ಜಮ್ಮು ಕಾಶ್ಮೀರದ ಪ್ರವಾಸಿ ತಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕ್ಷಮೆ ಕೇಳಿದ ಮೆಹಬೂಬಾ
‘ಈ ದಾಳಿ ಇಡೀ ಕಾಶ್ಮೀರಿಯತೆ ಮೇಲಿನ ದಾಳಿ. ಅಮಾಯಕರು ಬಲಿಯಾಗಿದ್ದಾರೆ. ಕಾಶ್ಮೀರ ನೆಲದಲ್ಲಿ ಇಂಥ ಘಟನೆ ನಡೆದಿದ್ದಕ್ಕೆ ದೇಶದ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ. ಆದರೆ ಧರ್ಮದ ದೃಷ್ಟಿಯಿಂದ ಈ ಘಟನೆಯನ್ನು ನೋಡಬಾರದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀನು ಮುಸ್ಲಿಮಾ ಅಂತ ಕೇಳಿದರು, ಇಲ್ಲ ಎನ್ನುತ್ತಿದ್ದಂತೆ ಗುಂಡಿಕ್ಕಿದರು: ಬೆಂಗಳೂರಿನ ಭರತ್‌ ಅತ್ತೆ ಕಣ್ಣೀರು

ಬಂದ್‌ ಆಚರಿಸಿ ಉಗ್ರರ ವಿರುದ್ಧ ಕ್ರಮಕ್ಕೆ ಆಗ್ರಹ
2016ರಲ್ಲಿ ಉರಿ ದಾಳಿ ಬಳಿಕ ನಡೆಸಲಾದ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ 2019ರಲ್ಲಿ ಪುಲ್ವಾಮಾ ದಾಳಿ ಬಳಿಕ ಮಾಡಲಾದ ಬಾಲಾಕೋಟ್‌ ವಾಯು ದಾಳಿ ರೀತಿಯಲ್ಲೇ ಈ ಸಲವೂ ಉಗ್ರರ ಮೇಲೆರಗಿ ಬಿಸಿ ಮುಟ್ಟಿಸಬೇಕು. 26 ಜನರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬ ಬಲವಾದ ಆಗ್ರಹ ದೇಶಾದ್ಯಂತ ಕೇಳಿಬಂದಿದೆ. ಈ ಸಂಬಂಧ ಬುಧವಾರ ಭಾರತದಾದ್ಯಂತ ಪ್ರತಿಭಟನೆ, ಮೆರವಣಿಗೆ, ಖಂಡನಾ ಸಭೆಗಳು ನಡೆದಿವೆ. 35 ವರ್ಷ ಬಳಿಕ ಮೊದಲ ಬಾರಿ ಕಾಶ್ಮೀರದಲ್ಲೂ ಬಂದ್‌ ಆಚರಿಸಿ ಉಗ್ರರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಘಿದೆ.

ಪ್ರಧಾನಿಗಳ ನೇತೃತ್ವದಲ್ಲಿ ಉನ್ನತ ಸಭೆ
ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ‘ಉಗ್ರರನ್ನು ಮಾತ್ರವಲ್ಲ, ಅವರಿಗೆ ತೆರೆಮರೆಯಲ್ಲಿ ಕುಮ್ಮಕ್ಕು ನೀಡಿದವರನ್ನೂ ಬಿಡುವುದಿಲ್ಲ’ ಎಂದಿದ್ದಾರೆ. ಅಲ್ಲದೆ, ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ ಅವರು 2 ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಓರ್ವ ಮುಸ್ಲಿಂ ಆಗಿ ನಾಚಿಕೆಯಾಗುತ್ತಿದೆ, ಪಹಲ್ಗಾಮ್ ದಾಳಿ ಖಂಡಿಸಿ ಭಾವುಕರಾದ ಗಾಯಕ ಸಲೀಮ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!