
ಶ್ರೀನಗರ: ಪಹಲ್ಗಾಂ ಕ್ರೂರದಾಳಿಗೆ ಸಾಕ್ಷಿಯಾದ ಪ್ರತ್ಯಕ್ಷದರ್ಶಿಗಳ ಕೆಲ ಉಗ್ರರ ಫೋಟೋಗಳನ್ನು ತೋರಿಸಿ ಅವರಿಂದ ಪಡೆದ ಮಾಹಿತಿಯ ಆಧಾರದಲ್ಲಿ ಭದ್ರತಾ ಸಂಸ್ಥೆಗಳು 3 ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ದಾಳಿಕೋರರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಜಮ್ಮು ಕಾಶ್ಮೀರ ಪೊಲೀಸರು ಘೋಷಿಸಿದ್ದಾರೆ. ರೇಖಾ ಚಿತ್ರದಲ್ಲಿರುವ ಉಗ್ರರು ಆಸಿಫ್ ಫೌಜಿ (ಮೂಸಾ), ಸುಲೇಮಾನ್ ಶಾ (ಯೂನಸ್) ಮತ್ತು ಅಬು ತಲ್ಹಾ (ಆಸಿಫ್) ಎಂದು ಹೇಳಲಾಗಿದೆ. ಇದೇ ವೇಳೆ, ಅತ್ತ 4 ಉಗ್ರರಿರುವ ಫೋಟೋ ಒಂದು ಹರಿದಾಡುತ್ತಿದ್ದು, ಅದರಲ್ಲಿರುವ ಮೂವರ ಚಹರೆಯೊಂದಿಗೆ ರೇಖಾ ಚಿತ್ರಗಳು ಹೋಲಿಕೆಯಾಗುತ್ತಿವೆ. ಅದರಲ್ಲಿ ಜುನೈದ್ ಎಂಬುವನನ್ನು ಈ ಮೊದಲೇ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ. ಈ ಉಗ್ರರು ಕಳೆದೊಂದು ತಿಂಗಳಿಂದ ಆ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಅಂತೆಯೇ, ಫೂಂಛ್‌ನಲ್ಲಿ ನಡೆದ ದಾಳಿಯ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ನರಮೇಧದ ಮಾಸ್ಟರ್‌ಮೈಂಡ್ ಕಸೂರಿ?
ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್ ಎಂಬಾತ ಪಹಲ್ಗಾಂ ಅಮಾನವೀಯ ದಾಳಿಯ ಮಾಸ್ಟರ್‌ಮೈಂಡ್ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ. ಈತನೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಕೈಜೋಡಿಸಿರುವ ಶಂಕೆಯೂ ಇದೆ. ಗುಪ್ತಚರ ಸಂಸ್ಥೆಗಳ ಪ್ರಕಾರ, ಇತ್ತೀಚೆಗೆ ಗಡಿನುಸುಳಿ ಕಾಶ್ಮೀರದ ಕಣಿವೆ ಪ್ರವೇಶಿಸಿದ್ದ 6-7 ಉಗ್ರರು ಈ ದಾಳಿ ಮಾಡಿದ್ದಾರೆ.
ಭಾರತಕ್ಕೆ ಬೇಕಾಗಿರುವ (ವಾಂಟೆಡ್) ಉಗ್ರ ಹಫೀಜ್ ಸಯೀದ್‌ನ ಸಹಾಯಕನೂ ಆಗಿದ್ದ ಕಸೂರಿಯ ನಿರ್ದೇಶನದ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಘಟನೆ ನಡೆದ ಕೆಲ ಗಂಟೆಗಳ ಬಳಿಕ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಸಂಘಟನೆಯ ಅಧೀನ ಸಂಘಟನೆಯಾದ ದ ರೆಸಿಸ್ಟೆಂನ್ಸ್ ಫ್ರಂಟ್ (ಟಿಆರ್‌ಎಫ್) ಹೊತ್ತುಕೊಂಡಿದೆ.
ಪಹಲ್ಗಾಂಗೆ ಎನ್‌ಐಎ ತಂಡ ಭೇಟಿ
ಜಮ್ ಮುಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಸಂಬಂಧಿಸಿದಂತೆ ಇನ್ಸಪೆಕ್ಟರ್ ಜನರಲ್ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳ ತಂಡ ಬುಧವಾರ ಪಹಲ್ಗಾಂಗೆ ಭೇಟಿ ನೀಡಿದೆ. ಮಂಗಳವಾರ ನಡೆದ ಭೀಕರ ದಾಳಿಯ ತನಿಖೆಯನ್ನು ಈಗಾಗಲೇ ಕಾಶ್ಮೀರದ ಸ್ಥಳೀಯ ಪೊಲೀಸರು ನಡೆಸುತ್ತಿದ್ದಾರೆ. ಉಗ್ರ ದಾಳಿ ಆಗಿರುವ ಕಾರಣ ಪೊಲೀಸರಿಂದ ಹೆಚ್ಚಿನ ಮಾಹಿತಿ ಪಡೆದು ತಾನೂ ತನಿಖೆ ನಡೆಸುವ ಇಂಗಿತ ವ್ಯಕ್ತಪಡಿಸಿದೆ.
ಲಷ್ಕರ್ ಎ ತೊಯ್ಬಾ ಸಂಘಟನೆಯ ನಂಟು ಹೊಂದಿದ್ದ ದ ರೆಸಿಸ್ಟನ್ಸ್ ಫ್ರಂಟ್ (ಟಿಆರ್‌ಎಫ್) ಈ ದಾಳಿಯ ಹೊಣೆ ಹೊತ್ತಿದೆ. 6-7 ಉಗ್ರರು ದಾಳಿ ನಡೆಸಿರುವ ಶಂಕೆಯಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಭುಗಿಲೆದ್ದ ಆಕ್ರೋಶ: ದೇಶವ್ಯಾಪಿ ಜನರ ಕೂಗು ಒಂದೇ
ಮುರ್ಮು, ಮೋದಿ, ನಿರ್ಮಲಾ ಪ್ರವಾಸ ರದ್ದು
ಪಹಲ್ಗಾಂ ಉಗ್ರ ದಾಳಿಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದಿನ ಪ್ರವಾಸಗಳುರದ್ದಾಗಿವೆ.
ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಕಾನ್ಪುರದಲ್ಲಿ 20,000 ಕೋಟಿ ರು. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಡಬೇಕಿತ್ತು. ಅದು ರದ್ದಾಗಿದೆ.ಅತ್ತ ಶುಕ್ರವಾರ ಗುವಾಹಟಿ ವಿವಿಯ 32ನೇ ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಸ್ಸಾಂಗೆ ತೆರಳಬೇಕಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರವಾಸ ರದ್ದಾಗಿದೆ.
ಪ್ರಸ್ತುತ 6 ದಿನಗಳ ಅಮೆರಿಕದಲ್ಲಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಷ್ಟು ಬೇಗ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಮರಳಲಿದ್ದಾರೆ. ಜೊತೆಗೆ, 5 ದಿನಗಳ ಪೆರು ಪ್ರವಾಸವನ್ನೂ ರದ್ದುಗೊಳಿಸಿದ್ದಾರೆ.
ಇದನ್ನೂ ಓದಿ: ನೀನು ಮುಸ್ಲಿಮಾ ಅಂತ ಕೇಳಿದರು, ಇಲ್ಲ ಎನ್ನುತ್ತಿದ್ದಂತೆ ಗುಂಡಿಕ್ಕಿದರು: ಬೆಂಗಳೂರಿನ ಭರತ್ ಅತ್ತೆ ಕಣ್ಣೀರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ