ತುರ್ತು ಪರಿಸ್ಥಿತಿಗಾಗಿ ಆಕ್ಸಿಜನ್‌ ಬಸ್‌, ಅದರಲ್ಲೇ ಚಿಕಿತ್ಸೆ!

By Kannadaprabha NewsFirst Published May 7, 2021, 7:10 AM IST
Highlights

 ಸರ್ಕಾರಗಳ ಜೊತೆಯಲ್ಲಿ ವಿವಿಧ ಸಾಮಾಜಿಕ ಸಂಘಟನೆಗಳು ಕೂಡಾ ತಮ್ಮದೇ ಆದ ರೀತಿಯಲ್ಲಿ ವಿನೂತನ ಯತ್ನಗಳ ಮೂಲಕ ಸೋಂಕಿತರಿಗೆ ನೆರವಾಗುವ ಯತ್ನ ಆರಂಭಿಸಿದೆ. ಇದೇ ರೀತಿಯಲ್ಲಿ ತಮಿಳುನಾಡಿನಲ್ಲಿ ಸಂಘಟನೆಯೊಂದು ಗಾಲಿಯ ಮೇಲೆ ಆಮ್ಲಜನಕ ಎಂಬ ಸೇವೆ ಆರಂಭಿಸಿದೆ.

ಚೆನ್ನೈ (ಮೇ.07): ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಿದ ಬೆನ್ನಲ್ಲೇ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯ ಇರುವ ಬೆಡ್‌ಗಳ ಸಮಸ್ಯೆಯೂ ತೀವ್ರವಾಗಿ ಕಾಡತೊಡಗಿದೆ. ಈ ಸಮಸ್ಯೆಗೆ ಸರ್ಕಾರಗಳ ಜೊತೆಯಲ್ಲಿ ವಿವಿಧ ಸಾಮಾಜಿಕ ಸಂಘಟನೆಗಳು ಕೂಡಾ ತಮ್ಮದೇ ಆದ ರೀತಿಯಲ್ಲಿ ವಿನೂತನ ಯತ್ನಗಳ ಮೂಲಕ ಸೋಂಕಿತರಿಗೆ ನೆರವಾಗುವ ಯತ್ನ ಆರಂಭಿಸಿದೆ. ಇದೇ ರೀತಿಯಲ್ಲಿ ತಮಿಳುನಾಡಿನಲ್ಲಿ ಸಂಘಟನೆಯೊಂದು ಗಾಲಿಯ ಮೇಲೆ ಆಮ್ಲಜನಕ ಎಂಬ ಸೇವೆ ಆರಂಭಿಸಿದ್ದು ಭಾರೀ ಗಮನ ಸೆಳೆದಿದೆ. ಜೊತೆಗೆ ಸಾಕಷ್ಟುಪ್ರಮಾಣದಲ್ಲಿ ರೋಗಿಗಳ ಜೀವ ಉಳಿಸುವಲ್ಲೂ ನೆರವು ನೀಡುತ್ತಿದೆ.

ಜೈನ್‌ ಇಂಟರ್‌ನ್ಯಾಷನಲ್‌ ಯೋಜನೆ:  ಜೈನ್‌ ಇಂಟರ್‌ನ್ಯಾಷನಲ್‌ ಎಂಬ ಸಂಘಟನೆಯೊಂದು ಸದ್ಯ ಬಳಕೆ ಆಗದೇ ಇರುವ ಶಾಲಾ ವಾಹನಗಳನ್ನು ಬಳಸಿಕೊಂಡು ಅಗತ್ಯವಿದ್ದವರಿಗೆ ಉಚಿತವಾಗಿ ಆಮ್ಲಜನಕ ನೀಡುವ ಯೋಜನೆ ಆರಂಭಿಸಿದೆ. ಮೊದಲ ಹಂತದಲ್ಲಿ ಒಟ್ಟು ನಾಲ್ಕು ಬಸ್‌ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಪ್ರತಿ ವಾಹನದಲ್ಲೂ 6 ಆಮ್ಲಜನಕ ಸಿಲಿಂಡರ್‌ ಮತ್ತು ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ಗಳನ್ನು ಅಳವಡಿಸಿದ್ದು, ಈ ವಾಹನಗಳನ್ನು ಚೆನ್ನೈನ ಪ್ರಮುಖ ಆಸ್ಪತ್ರೆಗಳ ಬಳಿ ನಿಯೋಜಿಸಲಾಗಿದೆ.

"

ಸಿಎಂ ಆಗಿ ಸ್ಟಾಲಿನ್.. ಸಂಪುಟದಲ್ಲಿ ಗಾಂಧಿ..ನೆಹರು ಸಹ ಇದ್ದಾರೆ! ...

ಆಮ್ಲಜನಕ ಸೌಲಭ್ಯ ಇರುವ ಬೆಡ್‌ ಹುಡುಕಿಕೊಂಡು ಬರುವ ಆದರೆ ತಕ್ಷಣಕ್ಕೆ ಅಂಥ ಬೆಡ್‌ ಸಿಗದೇ ಇರುವ ರೋಗಿಗಳು, ಬೆಡ್‌ ಸಿಗುವವರೆಗೂ, ಈ ವಾಹನಗಳಲ್ಲಿ ಇದ್ದು, ಉಚಿತವಾಗಿ ಆಮ್ಲಜನಕ ಪಡೆದುಕೊಳ್ಳಬಹುದು. ಈ ಯೋಜನೆಗೆ ಜನರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದನ್ನು ರಾಜ್ಯದೆಲ್ಲೆಡೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಜೈನ್‌ ಇಂಟರ್‌ ನ್ಯಾಷನಲ್‌ನ ಅಧ್ಯಕ್ಷ ಸುರೇಶ್‌ ಮುತಾ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ನಿತ್ಯದ ಸೋಂಕಿನ ಪ್ರಮಾಣ 20000ದ ಗಡಿದಾಟಿದ್ದು, ಹೆಚ್ಚಿನ ಸೌಕರ್ಯ ಹೊಂದಿರುವ ಆಸ್ಪತ್ರೆ ಬೆಡ್‌ಗಳ ಕೊರತೆ ತೀವ್ರವಾಗಿ ಕಾಣಿಸಿಕೊಳ್ಳತೊಡಗಿದೆ.

ಇದು ಉಚಿತ ಸೇವೆ

ಆಕ್ಸಿಜನ್‌ ಸಿಗದೆ ಸಂಕಷ್ಟಕ್ಕೆ ಒಳಗಾಗಿರುವ ಕೊರೋನಾ ರೋಗಿಗಳಿಗೆ ‘ಗಾಲಿಯ ಮೇಲೆ ಆಮ್ಲಜನಕ’ ಎಂಬ ಈ ಸೇವೆಯನ್ನು ಜೈನ್‌ ಇಂಟರ್‌ನ್ಯಾಷನಲ್‌ ಎಂಬ ಸಂಘಟನೆ ಉಚಿತವಾಗಿ ನೀಡುತ್ತಿದೆ. ಮೊದಲ ಹಂತದಲ್ಲಿ 4 ಬಸ್‌ ಬಳಸಿ, ಪ್ರತಿ ಬಸ್‌ನಲ್ಲಿ 6 ಆಕ್ಸಿಜನ್‌ ಸಿಲಿಂಡರ್‌ ಇಟ್ಟು, ಪ್ರಮುಖ ಆಸ್ಪತ್ರೆಗಳ ಮುಂದೆ ನಿಲ್ಲಿಸಲಾಗಿದೆ. ಆಸ್ಪತ್ರೆಯಲ್ಲಿ ಬೆಡ್‌ ಸಿಗುವವರೆಗೆ ಇದರಲ್ಲಿ ರೋಗಿಗಳು ಆಕ್ಸಿಜನ್‌ ಪಡೆಯಬಹುದು.

ಆಕ್ಸಿಜನ್‌ ನೀಡಲು ನಾನಾ ಉಪಾಯ ಸಿಲಿಂಡರ್‌ ಬ್ಯಾಂಕ್‌

ಒಡಿಶಾದ ಸಂಬಲ್‌ಪುರದಲ್ಲಿ ಸೋಶಿಯಲ್‌ ಸ್ಟಾರ್‌ ಕ್ಲಬ್‌ ಎಂಬ ಸಂಘಟನೆ ಆಮ್ಲಜನಕದ ಸಿಲಿಂಡರ್‌ ಬ್ಯಾಂಕ್‌ ಸ್ಥಾಪಿಸಿದ್ದು, ಅಗತ್ಯವಿರುವವರಿಗೆ ಉಚಿತವಾಗಿ ಸಿಲಿಂಡರ್‌ ಒದಗಿಸುತ್ತಿದೆ.

ಆಕ್ಸಿಜನ್‌ ಲಂಗರ್‌

ದೆಹಲಿ ಸೇರಿ ಹಲವೆಡೆ ಸಿಖ್‌ ಸಂಘಟನೆಗಳು ಗುರುದ್ವಾರದಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಶೇಖರಿಸಿಟ್ಟುಕೊಂಡು ಅಗತ್ಯವಿರುವ ರೋಗಿಗಳಿಗೆ ಲಂಗರ್‌ ಪ್ರಸಾದದ ರೀತಿ ಉಚಿತವಾಗಿ ನೀಡುತ್ತಿವೆ.

ಮನೆಗೇ ಪೂರೈಕೆ

ದೆಹಲಿ ಸೇರಿ ಹಲವೆಡೆ ಯುವ ಕಾಂಗ್ರೆಸ್‌ ಘಟಕ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಬೇಡಿಕೆ ಪರಿಗಣಿಸಿ, ಮನೆ, ಆಸ್ಪತ್ರೆಗಳಿಗೆ ನೇರವಾಗಿ ಆಕ್ಸಿಜನ್‌ ಸಿಲಿಂಡರ್‌ ಪೂರೈಸುತ್ತಿದೆ

ವಾರ್‌ ರೂಮ್‌

ಕೇರಳ ಸರ್ಕಾರ ಆಕ್ಸಿಜನ್‌ ವಾರ್‌ ರೂಮ್‌ಗಳನ್ನು ತೆರೆದಿದೆ. ಈ ಕೇಂದ್ರದ ಮೂಲಕ ಆಮ್ಲಜಕ ಪೂರೈಕೆಯ ಮೇಲೆ ಸಂಪೂರ್ಣ ನಿಗಾ ಇಡಲಾಗುತ್ತದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!