
ನವದೆಹಲಿ(ಅ.31): ಕೊರೋನಾ ಸೋಂಕು ತಡೆಯಲು ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿ ಒಗ್ಗೂಡಿ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್’ ಲಸಿಕೆ ಭಾರತದಲ್ಲಿ ಈ ವರ್ಷಾಂತ್ಯಕ್ಕೆ ತುರ್ತು ಬಳಕೆಗೆ ಲಭ್ಯವಾಗುವ ಸುಳಿವನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ನೀಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅದಾರ್ ಪೂನಾವಾಲಾ ‘ಸಾಮಾನ್ಯ ಲೆಕ್ಕಾಚಾರದ ಅನ್ವಯ, ಭಾರತದಲ್ಲಿ ಪ್ರಯೋಗಗಳು ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದ್ದು, ಜನವರಿಯಲ್ಲಿ ನಾವು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಬಹುದು. ಆದರೆ ಬ್ರಿಟನ್‌ನಲ್ಲಿ ಈಗಾಗಲೇ ಮೂರನೇ ಹಂತದ ಪರೀಕ್ಷೆ ಅಂತಿಮ ಹಂತಕ್ಕೆ ಬಂದಿದೆ. ಹೀಗಾಗಿ ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೋವಿಶೀಲ್ಡ್ ಸುರಕ್ಷಿತವಾಗಿದೆ ಎಂದು ತಿಳಿದುಬಂದರೆ ಅದನ್ನು ಭಾರತೀಯರಿಗೂ ನೀಡಲು ಅನುಮತಿ ಕೋರಿ ಡಿಸೆಂಬರ್‌ನಲ್ಲೇ ತುರ್ತು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಪೂನಾವಾಲಾ ಅವರು ಟೀವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಯೂರೋಪ್ ಮತ್ತೆ ಕೊರೋನಾ ಹಾಟ್‌ಸ್ಪಾಟ್; WHO
ಬ್ರಿಟನ್ ಮತ್ತು ಭಾರತದಲ್ಲಿ ಈಗಾಗಲೇ ಸಾವಿರಾರು ಜನರ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಈವರೆಗೂ ಯಾವುದೇ ಸುರಕ್ಷತಾ ದೋಷ ಕಂಡುಬಂದಿಲ್ಲ. ಹೀಗಾಗಿ ಜನವರಿ ಅಥವಾ ಇದೇ ಡಿಸೆಂಬರ್‌ಗೆ ಲಸಿಕೆ ಆರಂಭಿಸಬಹುದು. ಆದರೆ ಇದಕ್ಕೆ ಭಾರತ ಸರ್ಕಾರದ ಅನುಮತಿ ಕೂಡ ಅಗತ್ಯ ಎಂದು ಹೇಳಿದ್ದಾರೆ. ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿಗಳು ಒಗ್ಗೂಡಿ ‘ಕೋವಿಶೀಲ್ಡ್’ ಲಸಿಕೆಯ ಪ್ರಯೋಗದಲ್ಲಿ ತೊಡಗಿವೆ. ಭಾರತದಲ್ಲಿ ಲಸಿಕೆಯ ಪ್ರಯೋಗ ಮತ್ತು ಉತ್ಪಾದನೆಯ ಹಕ್ಕನ್ನು ಸೀರಂ ಇನ್ಸ್‌ಟಿಟ್ಯೂಟ್ ಪಡೆದುಕೊಂಡಿದೆ.
ಕೈಗೆಟಕುವ ದರ: ಲಸಿಕೆಯ ಬೆಲೆ ಬಗ್ಗೆ ಭಾರತ ಸರ್ಕಾರದ ಜತೆ ಸಮಾಲೋಚನೆ ನಡೆದಿದೆ. ಆದರೆ ಕೈಗೆಟಕುವ ದರದಲ್ಲಿ ನೀಡಲಾಗುವುದು. ಮೊದಲು ವೈದ್ಯರು, ಯುವಕರು ಹಾಗೂ ವೃದ್ಧರಿಗೆ ಇದನ್ನು ನೀಡುವ ಯೋಚನೆ ಇದೆ.
ತಿಂಗಳಿಗೆ 7 ಕೋಟಿ ಡೋಸ್: ಭಾರತದಲ್ಲಿ ಸೀರಂ ಇನ್ಸ್‌ಟಿಟ್ಯೂಟ್ ತಿಂಗಳಿಗೆ 7 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಂತರ 10 ಕೋಟಿ ಡೋಸ್‌ಗಳಿಗೂ ಸಾಮರ್ಥ್ಯ ವಿಸ್ತರಿಸಲಾಗುವುದು. ಕೋವಿಶೀಲ್ಡ್ 2 ಡೋಸ್‌ನ ಲಸಿಕೆ ಆಗಿದ್ದು, ಮೊದಲ ಡೋಸ್ ಪಡೆದ 28 ದಿನಕ್ಕೆ 2ನೇ ಡೋಸ್ ಪಡೆಯಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ