
ನವದೆಹಲಿ: 2024ರಲ್ಲಿ 2.06 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ ಎಷ್ಟು ಮಂದಿ ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳ ಪೌರತ್ವ ಪಡೆದಿದ್ದಾರೆ ಎಂಬ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಈ ಸಂಬಂಧಿತ ಅಂಕಿಅಂಶಗಳನ್ನು ಮಂಡಿಸಿದರು.
ದತ್ತಾಂಶ ಪ್ರಕಾರ, 2020ರಲ್ಲಿ 85,256 ಮಂದಿ, 2021ರಲ್ಲಿ 1,63,370 ಮಂದಿ, 2022ರಲ್ಲಿ 2,25,620 ಮಂದಿ, 2023ರಲ್ಲಿ 2,16,219 ಮಂದಿ ಮತ್ತು 2024ರಲ್ಲಿ 2,06,378 ಮಂದಿ ಭಾರತೀಯ ಪೌರತ್ವ ತ್ಯಜಿಸಿದ್ದಾರೆ. ಹೀಗೆ ಕಳೆದ 5 ವರ್ಷದಲ್ಲಿ ಒಟ್ಟು 8 ಲಕ್ಷದ 96 ಸಾವಿರಕ್ಕೂ ಅಧಿಕ ಮಂದಿ ಭಾರತೀಯ ಪೌರತ್ವವನ್ನು ತೊರೆದಿದ್ದಾರೆ. ಈ ಹಿಂದೆ ಅತೀ ಹೆಚ್ಚು ಅಂದರೆ 2011ರಲ್ಲಿ 1,22,819 ಮಂದಿ, 2012ರಲ್ಲಿ 1,20,923 ಮಂದಿ, 2013ರಲ್ಲಿ 1,31,405 ಮಂದಿ ಹಾಗೂ 2014ರಲ್ಲಿ 1,29,328 ಮಂದಿ ಪೌರತ್ವ ತ್ಯಜಿಸಿದ್ದರು. ಭಾರತೀಯ ಪೌರತ್ವ ತ್ಯಜಿಸುವುದು ಅಥವಾ ವಿದೇಶಿ ಪೌರತ್ವ ಪಡೆಯುವ ಕಾರಣಗಳು ವೈಯಕ್ತಿಕವಾಗಿದ್ದು, ಆ ವ್ಯಕ್ತಿಗೇ ಮಾತ್ರ ತಿಳಿದಿರುತ್ತದೆ" ಎಂದು ಸಿಂಗ್ ಹೇಳಿದರು.
ಜ್ಞಾನ ಆರ್ಥಿಕತೆಯ ಯುಗದಲ್ಲಿ ಸರ್ಕಾರವು ಜಾಗತಿಕ ಕೆಲಸದ ಸ್ಥಳದ ಸಾಮರ್ಥ್ಯವನ್ನು ಗುರುತಿಸಿರುವುದಾಗಿ ಅವರು ತಿಳಿಸಿದರು. "ಇದು ಭಾರತೀಯ ವಲಸಿಗರೊಂದಿಗಿನ ನಮ್ಮ ಸಂಬಂಧದಲ್ಲಿ ಪರಿವರ್ತನಾ ಬದಲಾವಣೆಯನ್ನು ತಂದಿದೆ. ಯಶಸ್ವಿ ಹಾಗೂ ಪ್ರಭಾವಶಾಲಿ ವಲಸಿಗರು ತಮ್ಮ ನೆಟ್‌ವರ್ಕ್ ಮತ್ತು ಮೃದು ಶಕ್ತಿಯ ಮೂಲಕ ಭಾರತಕ್ಕೆ ಪ್ರಯೋಜನಕಾರಿಯಾಗುತ್ತಾರೆ. ಸರ್ಕಾರದ ಪ್ರಯತ್ನಗಳು ಜ್ಞಾನ ಮತ್ತು ಪರಿಣತಿ ಹಂಚಿಕೆಯ ಮೂಲಕ ಈ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದರತ್ತ ಕೇಂದ್ರೀಕರಿಸಿದ್ದವೆ" ಎಂದು ಸಿಂಗ್ ಸ್ಪಷ್ಟಪಡಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಒಟ್ಟಾರೆ 3,43,56,193 ವಿದೇಶಿ ಭಾರತೀಯರಿದ್ದು, ಅವರಲ್ಲಿ 1,71,81,071 ಮಂದಿ ಭಾರತೀಯ ಮೂಲದ ವ್ಯಕ್ತಿಗಳು (PIO) ಮತ್ತು 1,71,75,122 ಮಂದಿ ಅನಿವಾಸಿ ಭಾರತೀಯರು (NRI) ಸೇರಿದ್ದಾರೆ ಎಂದು ತಿಳಿಸಿದೆ.
2023ರಲ್ಲಿ ಮಾತ್ರ 2 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿ ವಿದೇಶಿ ರಾಷ್ಟ್ರೀಯತೆಯನ್ನು ಪಡೆದಿದ್ದಾರೆ. ಈ ಪ್ರವೃತ್ತಿ 2019ರಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದುವರೆಗೆ ಒಟ್ಟು ಸಂಖ್ಯೆ ಒಂದು ಮಿಲಿಯನ್‌ನ್ನು ಮೀರಿದೆ. ಇದರ ಹಿಂದೆ ವೃತ್ತಿ, ಶಿಕ್ಷಣ, ಕುಟುಂಬ ಹಾಗೂ ಜೀವನಮಟ್ಟಕ್ಕೆ ಸಂಬಂಧಿಸಿದ ಅನೇಕ ಕಾರಣಗಳಿವೆ.
ಭಾರತವು ದ್ವಿಪೌರತ್ವವನ್ನು ಅನುಮತಿಸದಿರುವುದರಿಂದ, ಮತ್ತೊಂದು ದೇಶದ ಪೌರತ್ವ ಪಡೆಯುವವರು ಭಾರತೀಯ ರಾಷ್ಟ್ರೀಯತೆಯನ್ನು ಔಪಚಾರಿಕವಾಗಿ ತ್ಯಜಿಸಲೇಬೇಕು. ಆದರೆ ಅನೇಕ ದೇಶಗಳು ದ್ವಿಪೌರತ್ವವನ್ನು ಅನುಮತಿಸುತ್ತಿದ್ದು, ತಮ್ಮ ತಾಯ್ನಾಡಿನೊಂದಿಗೆ ಸಂಪರ್ಕವನ್ನು ಉಳಿಸಿಕೊಂಡು ವಿದೇಶಿ ಪೌರತ್ವವನ್ನು ಪಡೆಯಲು ಇದು ಆಕರ್ಷಕ ಆಯ್ಕೆಯಾಗುತ್ತಿದೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು, ಹೆಚ್ಚಿನ ಸಂಬಳ ಮತ್ತು ಆರ್ಥಿಕ ಸ್ಥಿರತೆಯನ್ನು ಪಡೆಯುವ ಉದ್ದೇಶದಿಂದ ಅನೇಕ ಭಾರತೀಯರು ವಿದೇಶಕ್ಕೆ ತೆರಳುತ್ತಿದ್ದಾರೆ.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಮಟ್ಟದ ಶಿಕ್ಷಣ ಹಾಗೂ ಸಂಶೋಧನಾ ಅವಕಾಶಗಳು ದೊರಕುತ್ತವೆ. ಅಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅಲ್ಲಿ ನೆಲೆಸಲು ಆಯ್ಕೆ ಮಾಡುವುದು ಸಾಮಾನ್ಯ.
ಕುಟುಂಬ ಸದಸ್ಯರು ಈಗಾಗಲೇ ವಿದೇಶದಲ್ಲಿ ನೆಲೆಸಿರುವುದರಿಂದ, ಅದೇ ದೇಶಕ್ಕೆ ಸ್ಥಳಾಂತರವಾಗಿ ಪೌರತ್ವ ಪಡೆಯಲು ಅನೇಕರು ಬಯಸುತ್ತಾರೆ.
ಭಾರತದಲ್ಲಿ ದ್ವಿಪೌರತ್ವಕ್ಕೆ ಅನುಮತಿ ಇಲ್ಲ. ಅನೇಕ ದೇಶಗಳಲ್ಲಿ ಈ ಪದ್ದತಿ ಇದೆ. ಇದರಿಂದ ತಾಯ್ನಾಡಿನೊಂದಿಗೆ ಸಂಬಂಧ ಕಳೆದುಕೊಳ್ಳದೇ ಬೇರೆ ದೇಶದ ಪೌರತ್ವ ಪಡೆಯಲು ಅವಕಾಶ ಸಿಗುತ್ತದೆ.
ಕಡಿಮೆ ಮಾಲಿನ್ಯ, ಉತ್ತಮ ಮೂಲಸೌಕರ್ಯ, ಆರೋಗ್ಯ ಸೌಲಭ್ಯಗಳು ಮತ್ತು ಉನ್ನತ ಜೀವನಮಟ್ಟದಂತಹ ಅಂಶಗಳು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಚ್ಚು ಲಭ್ಯವಿರುವುದರಿಂದ, ಅನೇಕರು ಅಲ್ಲಿ ನೆಲೆಸಲು ಆಸಕ್ತಿ ತೋರುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ