
ನವದೆಹಲಿ (ಜು.17): ಅನೇಕ ಕಾಯಿಲೆಗಳಿಗೆ ಲಸಿಕೆಗಳನ್ನು ಕಂಡುಹಿಡಿದಿರುವ ಭಾರತದಲ್ಲಿ, ಹುಟ್ಟಿದಾಗಿನಿಂದ ಒಂದೂ ಲಸಿಕೆಯನ್ನು ಪಡೆಯದಿರುವ 9 ಲಕ್ಷಕ್ಕೂ ಅಧಿಕ ಮಕ್ಕಳಿದ್ದಾರೆ ಎಂಬ ಆಘಾತಕಾರಿ ವಿಚಾರವು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯೂನಿಸೆಫ್ ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ.
2024ರ ವರದಿ ಪ್ರಕಾರ, ಲಸಿಕೆಯನ್ನೇ ಪಡೆಯದ 21 ಲಕ್ಷ ಮಕ್ಕಳು ನೈಜೀರಿಯಾದಲ್ಲಿದ್ದರೆ, ಭಾರತ ಇಂತಹ 9 ಲಕ್ಷ ಮಕ್ಕಳೊಂದಿಗೆ 2ನೇ ಸ್ಥಾನದಲ್ಲಿದೆ.
ಭಾರತ ನಿರಾಕರಣೆ:
146 ಕೋಟಿ ಜನಸಂಖ್ಯೆಯಿರುವ ಭಾರತವನ್ನು 23 ಕೋಟಿ ಜನರಿರುವ ನೈಜೀರಿಯಾಗೆ ಹೋಲಿಸಿದ್ದನ್ನು ಉಲ್ಲೇಖಿಸಿರುವ ಕೇಂದ್ರ ಆರೋಗ್ಯ ಇಲಾಖೆ, ‘ಜನಸಂಖ್ಯೆಯ ಗಾತ್ರದ ಕಾರಣ ನೈಜೀರಿಯಾ ಜತೆ ಭಾರತವನ್ನು ಹೋಲಿಸುವುದು ಸರಿಯಲ್ಲ. ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯಿರುವ ಭಾರತ ಯಾವಾಗಲೂ ಮೊದಲ 10 ದೇಶಗಳಲ್ಲಿ ಗುರುತಿಸಿಕೊಳ್ಳುತ್ತದೆ ’ ಎಂದು ಹೇಳಿದೆ.
ಆತಂಕದ ನಡುವೆ ಶುಭಸುದ್ದಿ:
ಕಳೆದ ವರ್ಷಕ್ಕೆ ಹೋಲಿಸಿದರೆ, ಶೂನ್ಯ ಡೋಸ್ ಪಡೆದ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದು ಸಮಾಧಾನದ ಸಂಗತಿ. 2023ರಲ್ಲಿ 1,592,000 ಇದ್ದ ಈ ಸಂಖ್ಯೆ, 2024ರಲ್ಲಿ 909,000ಕ್ಕೆ ತಲುಪಿದೆ. ಅರ್ಥಾತ್, 683000ರಷ್ಟು ಇಳಿಕೆ ಕಂಡಿದೆ. ಜತೆಗೆ, ಜಾಗತಿಕ ಸರಾಸರಿಗೆ ಹೋಲಿಸಿದರೆ, ಭಾರತದಲ್ಲಿ ರೋಗನಿರೋಧಕ ಲಸಿಕೆ ಪಡೆದಿರುವವರ ಸಂಖ್ಯೆ ಅಧಿಕವಿದೆ.
‘ಇದು, ಸಾರ್ವಜನಿಕ ಆರೋಗ್ಯದ ಆದ್ಯತೆಯಾಗಿ ರೋಗನಿರೋಧಕ ಶಕ್ತಿಯನ್ನು ನೀಡುವುದು ಮತ್ತು ಲಸಿಕೆಯಿಂದ ತಡೆಗಟ್ಟಬಹುದಾದ ಕಾಯಿಲೆಗಳಿಂದ ಪ್ರತಿ ಮಗುವನ್ನು ರಕ್ಷಿಸುವ ಭಾರತದ ಬದ್ಧತೆಗೆ ಸಾಕ್ಷಿ’ ಎಂದು ಯೂನಿಸೆಫ್‌ನ ಆರೋಗ್ಯ ಮುಖ್ಯಸ್ಥ ಡಾ। ವಿವೇಕ್ ಸಿಂಗ್ ಹೇಳಿದ್ದಾರೆ.
ಮಕ್ಕಳಲ್ಲಿ ಅನಾರೋಗ್ಯ ಮತ್ತು ಮರಣ ಪ್ರಮಾಣವನ್ನು ತಗ್ಗಿಸುವ ವಿಚಾರದಲ್ಲೂ ಭಾರತ ಮಾದರಿ ಎನ್ನಲಾಗಿದೆ. ಅಂತೆಯೇ, 2024ರಲ್ಲಿ ಭಾರತದಲ್ಲಿ ಶೇ.96ರಷ್ಟು ಡಿಟಿಪಿ(ಮಕ್ಕಳಿಗೆ 7 ವರ್ಷದ ವರೆಗೆ ನೀಡಲಾಗುವ ಲಸಿಕೆ)ಯ ಮೊದಲ ಡೋಸ್ ನೀಡಲಾಗಿದೆ. ಕಳೆದ ವರ್ಷ ಇದೆಶೇ.93ರಷ್ಟಿತ್ತು. ಜಾಗತಿಕ ಸರಾಸರಿ ಶೇ.89ರಷ್ಟಿದೆ. ಜತೆಗೆ, ಶೇ.97ರಷ್ಟು ಎಂಸಿವಿ ಲಸಿಕೆಯ ಮೊದಲ ಡೋಸ್ ನೀಡುವಿಕೆಯನ್ನು ಭಾರತ ಸಾಧಿಸಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ