ವಿಪಕ್ಷಗಳ ವಾಟ್ಸಾಪ್‌ಗೆ ಕೇಂದ್ರದ ಮಸೂದೆ ಆಫ್, ಸಂಸದರಿಗೆ ಸ್ವತಃ ಸೂಚನೆ ನೀಡುತ್ತಿದ್ದ ಖರ್ಗೆ!

Published : Apr 20, 2026, 06:18 AM IST
india women reservation bill 2026

ಸಾರಾಂಶ

ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಲು ವಿಪಕ್ಷಗಳು ವಾಟ್ಸಾಪ್ ಗ್ರೂಪ್‌ಗಳ ಮೂಲಕ ರಣತಂತ್ರ ಹೆಣೆದಿದ್ದವು. ಈ ಯಶಸ್ವಿ ಒಗ್ಗಟ್ಟಿನ ನಡುವೆ, ಪ್ರಧಾನಿ ಮೋದಿ ಅವರು ಟಿಎಂಸಿ ಮತ್ತು ಕಾಂಗ್ರೆಸ್ ಮಹಿಳೆಯರಿಗೆ ದ್ರೋಹ ಮಾಡಿವೆ ಎಂದು ಪಶ್ಚಿಮ ಬಂಗಾಳದ ರ್‍ಯಾಲಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ಏ.20): ಶನಿವಾರ ಲೋಕಸಭೆಯಲ್ಲಿ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು (ಮಹಿಳಾ ಮೀಸಲು ತಿದ್ದುಪಡಿ ಮಸೂದೆ) ಅಪರೂಪದ ಒಗ್ಗಟ್ಟಿನಿಂದ ಸೋಲಿಸಿದ ವಿಪಕ್ಷಗಳು, ಇದನ್ನು ಸಾಧ್ಯವಾಗಿಸಲು ಮುಂಚಿನಿಂದಲೇ ರಣತಂತ್ರ ಹೆಣೆದಿದ್ದವು. ಮಸೂದೆಗೆ ಸೋಲುಣಿಸಲು ವಾಟ್ಸಾಪ್‌ ಗ್ರೂಪ್‌ ರಚಿಸಿ ಕಾರ್ಯತಂತ್ರ ರೂಪಿಸಲಾಗಿತ್ತು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

ಕೇಂದ್ರ ಸರ್ಕಾರ ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡನೆ ವಿಧೇಯಕ ಮಂಡನೆ ಮತ್ತು ಅದರ ಅಂಗೀಕಾರಕ್ಕೆ ಯತ್ನಿಸುತ್ತಿರುವ ವಿಷಯ ಗೊತ್ತಾಗುತ್ತಲೇ ವಿಪಕ್ಷಗಳು ಹಲವು ವಾಟ್ಸಾಪ್ ಗ್ರೂಪ್‌ ರಚಿಸಿದ್ದವು. ಅದರಲ್ಲಿ ಸಂಸದರ ಕಡ್ಡಾಯ ಹಾಜರಾತಿ, ಸರ್ಕಾರದ ಸಂಭಾವ್ಯ ಕ್ರಮಗಳಿಗೆ ಪ್ರತಿತಂತ್ರ ರೂಪಿಸುವುದು ಮತ್ತು ಕ್ಷೇತ್ರ ಮರುವಿಂಗಡಣೆ ಬಗ್ಗೆ ಪ್ರತಿ ನಿರೂಪಣೆಗಳನ್ನು (ಕೌಂಟರ್‌ ನರೇಟಿವ್‌) ಚರ್ಚಿಸಲಾಗುತ್ತಿತ್ತು. ಯಾವುದೇ ಸಂಸದ ಗೈರು ಹಾಜರಾಗುವ ಸಾಧ್ಯತೆ ಇದೆಯೇ ಎಂದು ನಿಗಾ ಇಡಲಾಗಿತ್ತು. ಕೊನೆಯ ಕ್ಷಣದಲ್ಲಿ ಯಾವುದೇ ಗೊಂದಲವಾಗದಂತೆ ಸಮಗ್ರ ಮಾಹಿತಿ ಹಂಚಿಕೊಂಡು, ಸಂಪೂರ್ಣ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿತ್ತು.

ಸ್ವತಃ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಪಕ್ಷಗಳ ಸಂಸದರಿಗೆ, ‘ಯಾವುದೇ ಪ್ರಚೋದನೆಗೆ ಬಲಿಯಾಗಬೇಡಿ. ನಮ್ಮ ಪಕ್ಷ ಅಥವಾ ನಾಯಕರ ವಿರುದ್ಧ ಸರ್ಕಾರದವರು ಅವಹೇಳನಕಾರಿಯಾಗಿ ಮಾತನಾಡಿದರೂ ತಾಳ್ಮೆ ಕಳೆದುಕೊಳ್ಳಬೇಡಿ. ಸಭಾತ್ಯಾಗ ಮಾಡಬೇಡಿ. ಸರ್ಕಾರದಿಂದ ಎಂಥ ಹೇಳಿಕೆಗಳು ಬಂದರೂ ಶಾಂತವಾಗಿ ವರ್ತಿಸಿ’ ಎಂದು ಸೂಚನೆ ನೀಡಿದ್ದರು. ಹೀಗಾಗಿ ವಿಪಕ್ಷಗಳು ಅಂದುಕೊಂಡಂತೆಯೇ ಒಗ್ಗಟ್ಟಿನಿಂದ ವರ್ತಿಸಿ, ಮಸೂದೆಯನ್ನು ಸೋಲಿಸುವಲ್ಲಿ ಸಫಲವಾದವು ಎಂದು ತಿಳಿದುಬಂದಿದೆ.

ವಾಟ್ಸಾಪ್‌ ರಣನೀತಿ ಹೇಗೆ?

  • ಕೇಂದ್ರವು ಮಸೂದೆ ಮಂಡಿಸುವ ನಿರ್ಧಾರ ಮಾಡಿದ ಬೆನ್ನಲ್ಲೇ ವಿಪಕ್ಷಗಳು ಒಗ್ಗಟ್ಟು
  • ವಾಟ್ಸಾಪ್ ಗ್ರೂಪ್ ರಚಿಸಿ ಎಲ್ಲ ವಿಪಕ್ಷಗಳ ಸಂಸದರ ಸೇರ್ಪಡೆ, ಅದರಲ್ಲಿ ಸಂವಹನ
  • ಸಂಸದರ ಕಡ್ಡಾಯ ಹಾಜರಾತಿ ಮೇಲೆ ನಿಗಾ , ಸರ್ಕಾರದ ಕ್ರಮಗಳಿಗೆ ಪ್ರತಿತಂತ್ರ
  • ಕೊನೆಯ ಕ್ಷಣದಲ್ಲಿ ಯಾವುದೇ ಗೊಂದಲವಾಗದಂತೆ ಸಮಗ್ರ ಮಾಹಿತಿ ವಿನಿಮಯ
  • ಗ್ರೂಪ್‌ನಲ್ಲಿ ಖುದ್ದು ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಪ್ರತಿಪಕ್ಷ ನಾಯಕ ಖರ್ಗೆ

ಮಹಿಳಾ ವಿರೋಧಿ ಟಿಎಂಸಿಗೆ ಚುನಾವಣೆಯಲ್ಲಿ ಶಿಕ್ಷೆ: ಮೋದಿ

ಬಂಕುರಾ (ಏ.20): ಮಹಿಳಾ ಮೀಸಲು ತಿದ್ದುಪಡಿ ವಿಧೇಯಕ ಸೋಲಿಸಿದ ವಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಮಸೂದೆ ಅಂಗೀಕಾರ ತಡೆಯುವ ಮೂಲಕ ಟಿಎಂಸಿ ಮಹಿಳೆಯರಿಗೆ ದ್ರೋಹ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ಆಡಳಿತ ಪಕ್ಷವನ್ನು ಶಿಕ್ಷಿಸುತ್ತಾರೆ’ ಎಂದು ಎಚ್ಚರಿಸಿದ್ದಾರೆ.

ಭಾನುವಾರ ಬಂಕುರಾ ಜಿಲ್ಲೆಯ ಬಿಷ್ಣುಪುರದಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಮೋದಿ, ‘ಟಿಎಂಸಿ ಮಹಿಳಾ ಸಬಲೀಕರಣ ಮತ್ತು ಮೀಸಲಾತಿ ಬಯಸುವುದಿಲ್ಲ. ಬಂಗಾಳದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಮತ್ತು ಶಾಸಕರಾಗುವುದನ್ನು ಅದು ಇಷ್ಟಪಡುವುದಿಲ್ಲ. ಏಕೆಂದರೆ ರಾಜ್ಯದ ಮಹಿಳೆಯರು ಟಿಎಂಸಿಯ ಮಹಾಜಂಗಲ್‌ರಾಜ್ ಅನ್ನು ಪ್ರಶ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ಕಾಂಗ್ರೆಸ್ ಜೊತೆ ಪಿತೂರಿ ನಡೆಸಿ ಮಸೂದೆಯನ್ನು ವಿರೋಧಿಸಿದರು. ಬಂಗಾಳದ ಮಹಿಳೆಯರು ಈ ಚುನಾವಣೆಯಲ್ಲಿ ಟಿಎಂಸಿಯನ್ನು ಶಿಕ್ಷಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.==

ಇದೇ ವೇಳೆ, ‘ನಾನು ಎಲ್ಲಾ ಟಿಎಂಸಿ ಗೂಂಡಾಗಳು, ಸಂಘಟಿತ ಜಾಲಗಳಿಗೆ ಕೊನೆಯ ಅವಕಾಶವನ್ನು ನೀಡುತ್ತಿದ್ದೇನೆ. ಏ.23 ಮತ್ತು 29ರ ಒಳಗೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಶರಣಾಗಿ. ಮೇ 4ರ ನಂತರ ಯಾರನ್ನೂ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ನುಸುಳುಕೋರರಿಗೆ ಟಿಎಂಸಿ ಸಹಾಯ

‘ಬಿಜೆಪಿಯ ಹೆಗ್ಗುರುತು ಮಹಿಳಾ ಸಬಲೀಕರಣ ಮತ್ತು ಅವರ ಸುರಕ್ಷತೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಹೆಣ್ಣುಮಕ್ಕಳ ಪಾತ್ರ ವಿಸ್ತರಿಸಬೇಕೆಂದು ಮತ್ತು ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ರಾಜಕೀಯಕ್ಕೆ ಪ್ರವೇಶಿಸಬೇಕೆಂದು ನಾವು ಬಯಸುತ್ತೇವೆ. ಆದರೆ ಸಂಸತ್ತಿನಲ್ಲಿ ಏನಾಯಿತು ಎಂದು ನೀವು ನೋಡಿದ್ದೀರಿ. ಟಿಎಂಸಿ ಬಂಗಾಳದ ಸಹೋದರಿಯರಿಗೆ ಮತ್ತೊಮ್ಮೆ ದ್ರೋಹ ಮಾಡಿದೆ’ ಎಂದು ಕಿಡಿ ಕಾರಿದರು.

‘ಟಿಎಂಸಿ ಒಳನುಸುಳುಕೋರರಿಗೆ ಅನುಕೂಲ ಕಲ್ಪಿಸಲು ಪ್ರತಿಯೊಂದು ಕಾನೂನು ಮತ್ತು ನಿಯಮವನ್ನು ಉಲ್ಲಂಘಿಸುತ್ತದೆ. ಆದರೆ ಮಹಿಳಾ ಸಬಲೀಕರಣವನ್ನು ವಿರೋಧಿಸುತ್ತದೆ. ಧರ್ಮಾಧರಿತ ಮೀಸಲಾತಿಯನ್ನು ಉತ್ತೇಜಿಸುತ್ತಿರುವ ಪಕ್ಷವೂ ಇದೇ ಆಗಿದೆ. ಹಾಗೆ ಮಾಡುವುದರ ಮೂಲಕ, ಅದು ಸಂವಿಧಾನದ ಚೈತನ್ಯವನ್ನು ದುರ್ಬಲಗೊಳಿಸುತ್ತಿದೆ’ ಎಂದರು.

ಬುಡಕಟ್ಟು ವಿರೋಧಿ ಟಿಎಂಸಿ

‘ಬುಡಕಟ್ಟು ವಿರೋಧಿ ಟಿಎಂಸಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದೆ. ಟಿಎಂಸಿ ಮತ್ತು ಕಾಂಗ್ರೆಸ್ ಎರಡೂ ಬುಡಕಟ್ಟು ವಿರೋಧಿಗಳು. ಅದಕ್ಕಾಗಿಯೇ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿದವು. ಬುಡಕಟ್ಟು ಸಮುದಾಯಗಳ ಸಬಲೀಕರಣಕ್ಕೆ ನಾವು ಬದ್ಧರಾಗಿರುವುದರಿಂದ ಬಿಜೆಪಿ ದೇಶಕ್ಕೆ ಮೊದಲ ಬುಡಕಟ್ಟು ರಾಷ್ಟ್ರಪತಿಯನ್ನು ನೀಡಿತು’ ಎಂದರು.

ಅಧಿಕಾರಕ್ಕೆ ಬಂದರೆ ಸ್ತ್ರೀಯರಿಗೆ ನೆರವು

‘ಟಿಎಂಸಿ ಸರ್ಕಾರದ ಭ್ರಷ್ಟಾಚಾರದಿಂದಾಗಿ, ಪಶ್ಚಿಮ ಬಂಗಾಳದ ಮಹಿಳೆಯರಿಗೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರು ಪಡೆಯುವ ಸೌಲಭ್ಯಗಳು ಸಿಗುತ್ತಿಲ್ಲ. ಕ್ರೂರ ಸರ್ಕಾರ ಇಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ನಿಲ್ಲಿಸಿದೆ. ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ, ಮಹಿಳೆಯರಿಗೆ 5 ಲಕ್ಷ ರು.ಗಳವರೆಗೆ ಉಚಿತ ಚಿಕಿತ್ಸೆ ಸಿಗಲಿದೆ. ಗರ್ಭಿಣಿಯರಿಗೆ 21,000 ರು. ಸಹಾಯಧನ, ಹೆರಿಗೆಯಾದ ಸ್ತ್ರೀಯರಿಗೆ 5,000 ರು. ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 50,000 ರು. ನೀಡಲಾಗುವುದು’ ಎಂದು ಭರವಸೆ ನೀಡಿದರು.

  • ಟಿಎಂಸಿಯಿಂದ ಬಂಗಾಳ ಸ್ತ್ರೀಯರಿಗೆ ದ್ರೋಹ
  • ಕಾಂಗ್ರೆಸ್ ಜೊತೆ ಸೇರಿ ಆಡಳಿತ ಪಕ್ಷ ಪಿತೂರಿ
  • ಬಂಗಾಳದ ಚುನಾವಣಾ ರ್‍ಯಾಲಿಯಲ್ಲಿ ವಾಗ್ದಾಳಿ
  • ಮಹಿಳಾ ಮಸೂದೆ ವಿರೋಧಿಸಿದ್ದಕ್ಕೆ ಆಕ್ರೋಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಮಿಳುನಾಡು ಪಟಾಕಿ ಕಾರ್ಖಾನೆ ಸ್ಫೋಟಕ್ಕೆ 23 ಕಾರ್ಮಿಕರು ಬಲಿ
ಗ್ಯಾರಂಟಿ ಸಂಕಷ್ಟ: ಹಿಮಾಚಲ ನೌಕರರಿಗೆ ಮಾತ್ರವಲ್ಲ, ಸಿಎಂ ವೇತನಕ್ಕೂ ದುಡ್ಡಿಲ್ಲ!