
ನವದೆಹಲಿ: 'ಮೋದಿ ಉಪನಾಮ' ಮಾನಹಾನಿ ಪ್ರಕರಣದಲ್ಲಿ ತಮಗೆ ವಿಧಿಸಿದ ಎರಡು ವರ್ಷಗಳ ಜೈಲುಶಿಕ್ಷೆಗೆ ತಡೆ ಕೋರಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಪ್ರಕರಣದ ದೂರುದಾರರಾದ ಗುಜರಾತ್‌ನ (Gujarat) ಮಾಜಿ ಸಚಿವ ಪೂರ್ಣೇಶ್ ಮೋದಿ (Purnesh Modi) ಮತ್ತು ಗುಜರಾತ್ ಸರ್ಕಾರಕ್ಕೆ ಸುಪ್ರಿಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆಯನ್ನು ಆ.4ಕ್ಕೆ ನಿಗದಿಪಡಿಸಿದೆ.
ಲೋಕಸಭೆ ಚುನಾವಣೆಗೂ ಮುನ್ನ ಕೋಲಾರದ ರಾಲಿಯಲ್ಲಿ ‘ಮೋದಿ ಎಂಬ ಸರ್‌ನೇಮ್ ಹೊಂದಿದವರೆಲ್ಲ ಕಳ್ಳರೇ ಯಾಕಾಗಿರುತ್ತಾರೆ’ ಎಂದು ರಾಹುಲ್ ಪ್ರಶ್ನಿಸಿದ್ದರು. ಅದರ ವಿರುದ್ಧ ಪೂರ್ಣೇಶ್ ಮೋದಿ ಹೂಡಿದ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್‌ಗೆ ಎರಡು ವರ್ಷ ಜೈಲುಶಿಕ್ಷೆಯಾಗಿತ್ತು. ಹೀಗಾಗಿ ವಯನಾಡ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದಾಗಿತ್ತು. ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿತ್ತು. ಅದನ್ನು ರಾಹುಲ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಅರ್ಜಿ ವಿಚಾರಣೆ ವೇಳೆ ರಾಹುಲ್ ಪರ ವಾದಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ (Abhishek singhwi), ರಾಹುಲ್ ಈಗಾಗಲೇ 111 ದಿನ ಪರಿತಪಿಸಿದ್ದಾರೆ. ಸಂಸತ್ತಿನ ಒಂದು ಅಧಿವೇಶನದಿಂದ ವಂಚಿತರಾಗಿದ್ದಾರೆ. ಈಗ ನಡೆಯುತ್ತಿರುವ ಇನ್ನೊಂದು ಅಧಿವೇಶನದಿಂದಲೂ ವಂಚಿತರಾಗುವ ಸಾಧ್ಯತೆಯಿದೆ. ಅವರು ಪ್ರತಿನಿಧಿಸುತ್ತಿದ್ದ ವಯನಾಡ್ ಕ್ಷೇತ್ರಕ್ಕೆ ಯಾವ ಕ್ಷಣದಲ್ಲಿ ಬೇಕಾದರೂ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕೂಡಲೇ ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಪೂರ್ಣೇಶ್ ಮತ್ತು ಗುಜರಾತ್ ಸರ್ಕಾರಕ್ಕೆ ನ್ಯಾ.ಬಿ.ಆರ್.ಗವಾಯಿ ಹಾಗೂ ಪಿ.ಕೆ.ಮಿಶ್ರಾ ಪೀಠ ನೋಟಿಸ್ ಜಾರಿಗೊಳಿಸಿತು.
ರಾಹುಲ್ ಗಾಂಧಿಗೆ ಶಿಕ್ಷೆ ತಗ್ಗಿಸದ ಹೈಕೋರ್ಟ್: ಅನರ್ಹತೆ ತಡೆಯಾಜ್ಞೆ ಅರ್ಜಿ ತಿರಸ್ಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ