* ದೇವಸ್ಥಾನಗಳ ಹಣ ಹಿಂದೂಗಳ ಅಭಿವೃದ್ಧಿಗೇ ಬಳಸಬೇಕು
* ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ತರಬೇಕು: ಭಾಗವತ್
* ದೇಗುಲಗಳಿಗೆ ಹಿಂದೂ ಆಡಳಿತ: ಆರೆಸ್ಸೆಸ್ ಆಗ್ರಹ
ನಾಗಪುರ(ಅ.16): ದೇಶದ ಹಲವು ರಾಜ್ಯಗಳಲ್ಲಿ ಹಿಂದೂ ದೇಗುಲಗಳ(Hindu Temples) ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್(RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat), ದೇಶದಲ್ಲಿನ ಎಲ್ಲಾ ಹಿಂದೂ ದೇಗುಲಗಳನ್ನು ಹಿಂದೂಗಳ ವಶಕ್ಕೆ ಒಪ್ಪಿಸಬೇಕು. ದೇಗುಲಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಆಗ್ರಹ ಮಾಡಿದ್ದಾರೆ.
ವಿಜಯದಶಮಿ(Vijayadashami) ಪ್ರಯುಕ್ತ ನಾಗ್ಪುರದ ರೇಶಿಮ್‌ಬಾಘ್ ಮೈದಾನದಲ್ಲಿ ಮಾತನಾಡಿದ ಮೋಹನ್ ಭಾಗವತ್, ‘ದಕ್ಷಿಣದ ರಾಜ್ಯಗಳಲ್ಲಿ ದೇಗುಲಗಳು ಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿವೆ. ದೇಶದ ಉಳಿದೆಡೆ ಕೆಲವನ್ನು ಸರ್ಕಾರಗಳು ನಿಯಂತ್ರಿಸುತ್ತಿದ್ದರೆ, ಕೆಲವನ್ನು ಭಕ್ತರು ನಿರ್ವಹಿಸುತ್ತಿದ್ದಾರೆ. ಎಲ್ಲಿ ಆಡಳಿತ ಸರಿ ಇಲ್ಲವೋ ಅಲ್ಲಿ ದೇಗುಲಗಳ ಆಸ್ತಿ ಲೂಟಿಯಾಗುತ್ತಿದೆ. ಕೆಲವೊಂದು ದೇಗುಲಗಳಲ್ಲಂತೂ ಆಡಳಿತದ ಯಾವುದೇ ವ್ಯವಸ್ಥೆಗಳೇ ಇಲ್ಲ. ಅಂಥ ಕಡೆ ಚರ ಮತ್ತು ಸ್ಥಿರಾಸ್ತಿಗಳನ್ನು ಲೂಟಿ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಭಕ್ತರೇ ನಿರ್ವಹಿಸಿ ಅತ್ಯುತ್ತಮವಾಗಿ ನಿರ್ವಹಿಸುತ್ತಿರುವ ದೇಗುಲಗಳಿಗೆ ಜಮ್ಮುವಿನ ಮಾತಾ ವೈಷ್ಣೋದೇವಿ, ಮಹಾರಾಷ್ಟ್ರದ ಬುಲ್ಡಾನಾದಲ್ಲಿರುವ ಗಜಾನನ ಮಹಾರಾಜ್ ದೇಗುಲ, ದೆಹಲಿ ಜ್ಞಾನದೇವಾಲಯ ಮೊದಲಾದ ದೇಗುಲಗಳು ಉದಾಹರಣೆಯಾಗಿವೆ. ಹೀಗಾಗಿ ಎಲ್ಲಾ ಹಿಂದೂ ದೇಗುಲಗಳ ಹಕ್ಕನ್ನು ಹಿಂದೂಗಳಿಗೆ ನೀಡಬೇಕು’ ಎಂದು ಭಾಗವತ್ ಆಗ್ರಹಿಸಿದರು.
ಇದೇ ವೇಳೆ ‘ಹಿಂದೂ ದೇವರ ಬಗ್ಗೆ ಯಾವುದೇ ನಂಬಿಕೆ ಇಲ್ಲದ ಹಿಂದೂಯೇತರ ವ್ಯಕ್ತಿಗಳ ಅಭಿವೃದ್ಧಿಗಾಗಿ ದೇಗುಲಗಳ ಹಣ ಬಳಕೆಯಾಗುತ್ತಿದೆ. ಹಿಂದೂಗಳಿಗೂ ಈ ಹಣದ ಅವಶ್ಯಕತೆ ಇದೆಯಾದರೂ, ಅವರಿಗೆ ಈ ಹಣ ಸಿಗುತ್ತಿಲ್ಲ. ದೇಗುಲಗಳಿಗೆ ದೇವರೇ ಮಾಲೀಕ. ಅರ್ಚಕ ಕೇವಲ ವ್ಯವಸ್ಥಾಪಕರಿದ್ದಂತೆ ಎಂದು ಸ್ವತಃ ಸುಪ್ರೀಂಕೋರ್ಟ್ ತೀರ್ಪು ನೀಡಿರುವಾಗ, ಸರ್ಕಾರಗಳು ಸೀಮಿತ ಅವಧಿಗೆ ಮಾತ್ರವೇ ದೇಗುಲಗಳ ನಿರ್ವಹಣೆ ಮಾಡಿ ಬಳಿಕ ಅದರ ಮಾಲೀಕತ್ವವನ್ನು ಭಕ್ತರಿಗೇ ವಹಿಸಬೇಕು’ ಎಂದು ಭಾಗವತ್ ಒತ್ತಾಯಿಸಿದರು.
ಜನಸಂಖ್ಯೆ ನಿಯಂತ್ರಣ:
ಇದೇ ವೇಳೆ ದೇಶದಲ್ಲಿನ ಜನಸಂಖ್ಯಾ ಸ್ಫೋಟದ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ ಅವರು, ಸರ್ಕಾರ ಜನಸಂಖ್ಯಾ ನಿಯಂತ್ರಣಕ್ಕಾಗಿ ಮುಂದಿನ 50 ವರ್ಷಗಳ ಯೋಜನೆ ಇಟ್ಟುಕೊಂಡು ಕಾನೂನು ಜಾರಿಗೊಳಿಸಬೇಕು. 1951ರಲ್ಲಿ ಹಿಂದೂಗಳ ಸಂಖ್ಯೆ ಶೇ.88ರಷ್ಟಿತ್ತು, ಮುಸ್ಲಿಮರ ಸಂಖ್ಯೆ ಶೇ.9.8ರಷ್ಟಿತ್ತು. ಆದರೆ 2011ರ ಜನಗಣತಿ ವೇಳೆ ಹಿಂದೂಗಳ ಸಂಖ್ಯೆ ಶೇ.83.8ಕ್ಕೆ ಇಳಿದಿದ್ದರೆ, ಮುಸ್ಲಿಮರ ಸಂಖ್ಯೆ ಶೇ.14.23ಕ್ಕೆ ಏರಿಕೆಯಾಗಿದೆ ಎಂದು ಅಂಕಿ-ಸಂಖ್ಯೆ ಸಮೇತ ವಿವರಿಸಿದ ಅವರು, ಬಾಂಗ್ಲಾದಿಂದ ವಲಸೆ ಬಂದು ಭಾರತದ ಗಡಿ ಜಿಲ್ಲೆಗಳಲ್ಲಿ ನೆಲೆಸುತ್ತಿರುವವರ ಬಗ್ಗೆಯೂ ಗಮನ ಸೆಳೆದರು. ತಮ್ಮ ಭಾಷಣದಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಬಗ್ಗೆಯೂ ಉಲ್ಲೇಖಿಸಿದ ಅವರು, 370 ವಿಧಿ ರದ್ದಾದ ಮೇಲೆ ಬಾಲಮುದುರಿಕೊಂಡಿದ್ದ ಉಗ್ರರು ಈಗ ಮತ್ತೆ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ತಾಲಿಬಾನಿಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದ ಭಾಗವತ್, ಕ್ರಿಪ್ಟೋಕರೆನ್ಸಿ, ಒಟಿಟಿ ಪ್ಲಾಟ್‌ಫಾಮ್‌ರ್ ಮತ್ತು ಡ್ರಗ್ಸ್ ನಿಯಂತ್ರಣದ ಅಗತ್ಯತೆ ಬಗ್ಗೆಯೂ ಮಾತನಾಡಿದರು.
ಭಾಗವತ್ ಒತ್ತಾಯಗಳು
1. ದೇಶದ ಎಲ್ಲ ಹಿಂದೂ ದೇಗುಲಗಳ ಮಾಲೀಕತ್ವವನ್ನು ಹಿಂದೂಗಳ ವಶಕ್ಕೊಪ್ಪಿಸಬೇಕು
2. ಹಿಂದೂ ದೇವರ ಬಗ್ಗೆ ನಂಬಿಕೆ ಇಲ್ಲದವರ ಅಭಿವೃದ್ಧಿಗೆ ದೇಗುಲ ಹಣ ಬಳಸಬಾರದು
3. ದಕ್ಷಿಣದ ರಾಜ್ಯಗಳಲ್ಲಿ ದೇಗುಲಗಳಲ್ಲಿ ಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿವೆ
4. ದೇಶದ ಉಳಿದೆಡೆ ಕೆಲವು ದೇಗುಲಗಳನ್ನು ಸರ್ಕಾರವೇ ನಿಯಂತ್ರಣ ಮಾಡುತ್ತಿದೆ
5. ಸರ್ಕಾರಗಳು ಸೀಮಿತ ಅವಧಿಗಷ್ಟೆದೇಗುಲ ನಿರ್ವಹಿಸಿ ಬಳಿಕ ಭಕ್ತರಿಗೇ ವಹಿಸಬೇಕು
ಜನಸಂಖ್ಯೆ ಕಾನೂನು ತನ್ನಿ
1951ರಲ್ಲಿ ದೇಶದಲ್ಲಿ ಹಿಂದೂಗಳ ಸಂಖ್ಯೆ ಶೇ.88ರಷ್ಟಿತ್ತು, ಮುಸ್ಲಿಮರ ಸಂಖ್ಯೆ ಶೇ.9.8ರಷ್ಟಿತ್ತು. ಆದರೆ 2011ರ ಜನಗಣತಿ ವೇಳೆ ಹಿಂದೂಗಳ ಸಂಖ್ಯೆ ಶೇ.83.8ಕ್ಕೆ ಇಳಿದಿದ್ದರೆ, ಮುಸ್ಲಿಮರ ಸಂಖ್ಯೆ ಶೇ.14.23ಕ್ಕೆ ಏರಿಕೆಯಾಗಿದೆ. ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕಾಗಿ ಮುಂದಿನ 50 ವರ್ಷಗಳ ಯೋಜನೆ ಇಟ್ಟುಕೊಂಡು ಕಾನೂನು ಜಾರಿಗೊಳಿಸಬೇಕು.
- ಮೋಹನ್ ಭಾಗವತ್, ಆರ್‌ಎಸ್‌ಎಸ್ ಮುಖ್ಯಸ್ಥ