ವಿದೇಶಕ್ಕೆ ಯಾಕೆ? ದೇಶದ ಎಲ್ಲರಿಗೂ ಲಸಿಕೆ ನೀಡಿ: ಪ್ರಧಾನಿ ಮೋದಿಗೆ ರಾಹುಲ್ ಪತ್ರ!

By Suvarna NewsFirst Published Apr 9, 2021, 2:40 PM IST
Highlights

ಕೊರೋನಾ ವೈರಸ್ ಹೆಚ್ಚಾಗುತ್ತಿದ್ದಂತೆ ಇದೀಗ ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ಆಗ್ರಹ ಹೆಚ್ಚಾಗುತ್ತಿದೆ. ಜೊತೆಗೆ ಎಲ್ಲರಿಗೂ ಲಸಿಕೆ ನೀಡಿ ಅನ್ನೋ ಕೂಗುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ವಿದೇಶಗಳಿಗೆ ಲಸಿಕೆ ರಫ್ತು ಮಾಡುವ ಬದಲು ದೇಶದ ಎಲ್ಲರಿಗೂ ನೀಡಿ ಎಂದಿದ್ದಾರೆ. ರಾಹುಲ್ ಗಾಂಧಿ ಪತ್ರದ ಸಾರಾಂಶ ಇಲ್ಲಿದೆ.

ನವದೆಹಲಿ(ಏ.09): ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಕರ್ಫ್ಯೂ, ಮೈಕ್ರೋ ಕಂಟೈನ್ಮೆಂಟ್ ಝೋನ್ ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಇದೇ ವೇಳೆ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಮನವಿ ಮಾಡಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಸಿಕೆ ಕುರಿತು ಪ್ರಧಾನಿ ಮೋದಿಗೆ ಮಹತ್ವದ ಪತ್ರ ಬರೆದಿದ್ದಾರೆ.

ಕೊರೋನಾ ಲಸಿಕೆ ಕೊರತೆ: 700ಕ್ಕೂ ಹೆಚ್ಚು ವ್ಯಾಕ್ಸಿನ್ ಸೆಂಟರ್‌ಗೆ ಬೀಗ

ದೇಶದಲ್ಲಿನ ಎಲ್ಲರಿಗೂ ಲಸಿಕೆ ಸಿಗುವಂತೆ ಆಗಬೇಕು. ಲಸಿಕೆ ಉತ್ಪಾದನೆ ಮಾಡುತ್ತಿರುವ ಭಾರತದಲ್ಲೇ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಅರ್ಹ ಎಲ್ಲರಿಗೂ ಲಸಿಕೆ ಸಿಗುವಂತಾಗಬೇಕು. ಹಲವು ರಾಜ್ಯಗಳಲ್ಲಿ ಲಸಿಕೆ ಅಭಾವವಿದೆ. ಅಗತ್ಯವಿರುವ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಬೇಕು ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.

ಲಸಿಕೆ ಕೊರತೆ: ಮಹಾರಾಷ್ಟ್ರದ ಕೆಲ ಲಸಿಕಾ ಕೇಂದ್ರ ಸ್ಥಗಿತ!...

ದೇಶದಲ್ಲಿ ಲಸಿಕೆ ಅಭಾವವಿರುವಾಗ ವಿದೇಶಕ್ಕೆ ರಫ್ತು ಮಾಡುತ್ತಿರುವುದು ಎಷ್ಟು ಸರಿ. ಹೀಗಾಗಿ ವಿದೇಶಕ್ಕೆ ಲಸಿಕೆ ನೀಡುವಿಕೆಗೆ ಅಂತ್ಯ ಹಾಡಿ, ದೇಶದ ಎಲ್ಲಾ ರಾಜ್ಯಗಳಿಗೆ ಲಸಿಕೆ ನೀಡಿ. ಈ ಮೂಲಕ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಸಾಧ್ಯವಿದೆ. ಲಸಿಕೆ ಉತ್ಪಾದನೆಯಲ್ಲಿ ಭಾರತವೇ ಮುಂಚೂಣಿಯಲ್ಲಿದ್ದೂ, ಇದೀಗ ಭಾರತದಲ್ಲಿ ಲಸಿಕೆ ಅಭಾವವಿದೆ ಎಂದರೆ ಕೊರೋನಾ ನಿಯಂತ್ರಣ ಸಾಧ್ಯವೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಸದ್ಯ ಲಸಿಕೆ ಸಾಗುತ್ತಿರುವ ವೇಗ ನೋಡಿದರೆ ಭಾರತದಲ್ಲಿ ಶೇಕಡಾ 75ರಷ್ಟು ಲಸಿಕೆ ನೀಡಲು ವರ್ಷಗಳೇ ತೆಗೆದುಕೊಳ್ಳಲಿದೆ. ವಿದೇಶಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಬದಲು ದೇಶಕ್ಕೆ ನೀಡಿ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.
 

click me!