ತಾಜ್‌ಮಹಲಲ್ಲಿ ಬೀಗ ಹಾಕಿದ 22 ಕೋಣೆಗಳನ್ನು ತೆರೆಸಿ, ಹಿಂದು ವಿಗ್ರಹಗಳಿರಬಹುದು: ಅರ್ಜಿ

By Suvarna News  |  First Published May 9, 2022, 5:53 AM IST

* ಜಗತ್ತಿನ 7 ಅದ್ಭುತಗಳಲ್ಲಿ ಒಂದಾಗಿರುವ ತಾಜ್‌ಮಹಲ್‌ನಲ್ಲಿ ಬೀಗ ಹಾಕಿ ಮುಚ್ಚಿರುವ 22 ಕೋಣೆ

 * ಹಿಂದು ವಿಗ್ರಹಗಳನ್ನು ಬಚ್ಚಿಟ್ಟಿರಬಹುದು, ಪರಿಶೀಲಿಸಿ

*  ಅಲಹಾಬಾದ್‌ ಹೈಕೋರ್ಟ್‌ಗೆ ಬಿಜೆಪಿ ನಾಯಕ ಮೊರೆ


ಆಗ್ರಾ/ಪ್ರಯಾಗ್‌ರಾಜ್‌(ಮೇ.09): ಜಗತ್ತಿನ 7 ಅದ್ಭುತಗಳಲ್ಲಿ ಒಂದಾಗಿರುವ ತಾಜ್‌ಮಹಲ್‌ನಲ್ಲಿ ಬೀಗ ಹಾಕಿ ಮುಚ್ಚಿರುವ 22 ಕೋಣೆಗಳಿದ್ದು, ಬೀಗ ತೆರೆಸಬೇಕು. ಆ ಕೋಣೆಗಳಲ್ಲಿ ಹಿಂದು ವಿಗ್ರಹ ಹಾಗೂ ಧರ್ಮಗ್ರಂಥಗಳನ್ನು ಬಚ್ಚಿಡಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಉತ್ತರಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಬೀಗ ತೆರೆಯಲು ಭಾರತೀಯ ಪುತಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕು. ಕೋಣೆಗಳನ್ನು ಪರಿಶೀಲನೆ ನಡೆಸಲು ಹಾಗೂ ಹಿಂದು ವಿಗ್ರಹ, ಧರ್ಮಗ್ರಂಥಗಳ ಕುರುಹು ಹುಡುಕಲು ಸಮಿತಿಯೊಂದನ್ನು ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅಯೋಧ್ಯೆ ಜಿಲ್ಲಾ ಬಿಜೆಪಿ ಮಾಧ್ಯಮ ಉಸ್ತುವಾರಿ ಡಾ| ರಜನೀಶ್‌ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Tap to resize

Latest Videos

‘ತಾಜ್‌ಮಹಲ್‌ ಕುರಿತು ಪುರಾತನ ವಿವಾದವೊಂದಿದೆ. ಅಲ್ಲಿ ಬೀಗ ಹಾಕಲ್ಪಟ್ಟ20 ಕೋಣೆಗಳು ಇದ್ದು, ಅಲ್ಲಿಗೆ ಹೋಗಲು ಯಾರನ್ನೂ ಬಿಡುತ್ತಿಲ್ಲ. ಆ ಕೋಣೆಗಳಲ್ಲಿ ಹಿಂದು ವಿಗ್ರಹ, ಧರ್ಮಗ್ರಂಥಗಳು ಇವೆ ಎನ್ನಲಾಗಿದೆ. ಆ ಬಗ್ಗೆ ಪರಿಶೀಲನೆ ನಡೆಸಲಿ ಎಂದು ಅರ್ಜಿ ಸಲ್ಲಿಸಿದ್ದೇನೆ. ಬೀಗ ತೆರೆದು ಕೊಠಡಿ ವೀಕ್ಷಿಸಿ, ವಿವಾದಕ್ಕೆ ತೆರೆ ಎಳೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಡಾ| ರಜನೀಶ್‌ ತಿಳಿಸಿದ್ದಾರೆ.

ವಿವಾದಗಳ ಮಹಲ್‌

- ಅದು ತಾಜ್‌ ಮಹಲ್‌ ಅಲ್ಲ, ತೇಜೋ ಮಹಲ್‌ ಎಂಬ ಹಲವು ವಾದಗಳಿವೆ

- ತಾಜ್‌ಮಹಲ್‌ ಮೂಲತಃ ಶಿವನ ದೇಗುಲ ಎಂದು 2015ರರಲ್ಲಿ 6 ವಕೀಲರು ಅರ್ಜಿ ಸಲ್ಲಿಸಿದ್ದರು

- ಈ ವಾದವನ್ನು 2017ರಲ್ಲಿ ಬಿಜೆಪಿಯ ಪ್ರಮುಖ ನಾಯಕ ವಿನಯ್‌ ಕಟಿಹಾರ್‌ ಪುರಸ್ಕರಿಸಿದ್ದರು

- ತಾಜ್‌ಮಹಲ್‌ಗೆ ತೆರಳಿ ಹಿಂದು ಕುರುಹು ಶೋಧಿಸಲು ಯೋಗಿ ಆದಿತ್ಯನಾಥ್‌ಗೂ ಕೋರಿದ್ದರು

- ತಾಜ್‌ಮಹಲ್‌ ಅನ್ನು ಶಹಜಹಾನ್‌ ಕಟ್ಟಿಸಿಲ್ಲ ಎಂದು ಕಾರವಾರ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದರು

- ರಾಜ ಜಯಸಿಂಹನಿಂದ ತಾಜ್‌ಮಹಲ್‌ ಅನ್ನು ಶಹಜಹಾನ್‌ ಖರೀದಿಸಿದ್ದ ಎಂದು 2019ರಲ್ಲಿ ತಿಳಿಸಿದ್ದರು

- ಇತಿಹಾಸಕಾರರು ಹಾಗೂ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ವಾದಗಳನ್ನೂ ಹಲವು ಬಾರಿ ತಿರಸ್ಕರಿಸಿದೆ

- ಮೊಘಲ್‌ ಸಾಮ್ರಾಟ ಶಹಜಹಾನ್‌ ಕಟ್ಟಿಸಿದ್ದ ಸ್ಮಾರಕ ಎಂದು 2018ರಲ್ಲಿ ಕೋರ್ಚ್‌ಗೂ ಇಲಾಖೆ ತಿಳಿಸಿತ್ತು

click me!