
ಅಮಿತ್ ಶಾ, ಕೇಂದ್ರ ಗೃಹ ಸಚಿವ
ವ್ಯಕ್ತಿಯೊಬ್ಬ ರಾಷ್ಟ್ರೀಯ ನಾಯಕನಾಗುವುದು ಹೇಗೆ? ರಾಷ್ಟ್ರೀಯ ನಾಯಕನೆಂದರೆ ಹೇಗಿರಬೇಕು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಒಂದು ಪ್ರತ್ಯಕ್ಷ ಉದಾಹರಣೆ. ಈ ಹಿಂದೆಲ್ಲಾ, ಯಾವುದೇ ಸಾಧನೆ ಮಾಡದ ಮತ್ತು ತಮಗೆ ಸುರಕ್ಷಿತವೆನ್ನಿಸಿದ ಒಂದೋ, ಎರಡೋ ಲೋಕಸಭಾ ಕ್ಷೇತ್ರಗಳಿಂದ ಗೆದ್ದು ಬರುವವರನ್ನೇ ರಾಷ್ಟ್ರೀಯ ನಾಯಕ ಎಂದು ಬಣ್ಣಿಸಲಾಗುತ್ತಿತ್ತು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರದಲ್ಲಿ ದೇಶಾದ್ಯಂತ ರಾಷ್ಟ್ರೀಯ ನಾಯಕರನ್ನು ಸಹಜವಾಗಿಯೇ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಆಧಾರದಲ್ಲಿ ಗುರುತಿಸಲಾಗುತ್ತಿತ್ತು. ಆದರೆ ನಂತರದ ದಶಕಗಳಲ್ಲಿ ಅಂದರೆ ಮೈತ್ರಿಕೂಟಗಳು ಉತ್ತುಂಗಕ್ಕೆ ಏರಿದ ಸಮಯದಲ್ಲಿ ‘ರಾಷ್ಟ್ರೀಯ ನಾಯಕ’ ಎಂಬ ಪದವನ್ನು ದುರ್ಬಳಕೆ ಮಾಡಲಾಯಿತು. ದೆಹಲಿಯ ಮಾಧ್ಯಮಗಳು ಇಂಥದ್ದೊಂದು ಹಿರಿಮೆಯನ್ನು ತಮ್ಮ ‘ಸ್ನೇಹಿತರು ಮತ್ತು ಆತ್ಮೀಯರಿಗೆ’ ಹಂಚಿಬಿಟ್ಟರು. 2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಲೋಕಸಭೆಗೆ ತನ್ನ ಅತ್ಯಂತ ದೊಡ್ಡ ಬಲದಿಂದ ಆಯ್ಕೆಯಾದ ಬಳಿಕ ಮತ್ತು 2019ರಲ್ಲಿ ಅದನ್ನು ಇನ್ನೂ ದೊಡ್ಡ ಬಹುಮತದೊಂದಿಗೆ ಪುನರಾವರ್ತಿಸಿದ ಬಳಿಕ, ಅರ್ಹತೆ ಇಲ್ಲದ ಮತ್ತು ಸಿದ್ಧಪಡಿಸಿದ ರಾಷ್ಟ್ರೀಯ ನಾಯಕರನ್ನು ದೆಹಲಿ ಮಾಧ್ಯಮಗಳು ಹೇಗೆ ಸೃಷ್ಟಿಸಿದ್ದವು ಎಂಬುದು ಎಲ್ಲರಿಗೂ ಅರಿವಾಯಿತು.
ನಾಯಕನಿಗೆ ಉತ್ತಮ ಬೋಧನೆಯೆಂದರೆ, ಸಾಮಾನ್ಯ ಪ್ರದೇಶಗಳಿಗೆ ಪ್ರಯಾಣಿಸುವುದು, ಸಾಮಾನ್ಯ ಕುಟುಂಬಗಳನ್ನು ಭೇಟಿ ಮಾಡುವುದು, ಅವರ ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಇದನ್ನೆಲ್ಲಾ ಸಾಮಾನ್ಯ ರೀತಿಯಲ್ಲೇ ಮಾಡುವುದು. ಇದನ್ನೆಲ್ಲಾ ನರೇಂದ್ರ ಮೋದಿ ಅತ್ಯಂತ ಪರಿಶ್ರಮದಿಂದ ಕಳೆದ 75 ವರ್ಷಗಳಲ್ಲಿ ಇತರೆ ಯಾವುದೇ ರಾಜಕೀಯ ನಾಯಕರು ಮಾಡಿದ್ದಕ್ಕಿಂತ ಹೆಚ್ಚಿನ ಬಾರಿ ಮಾಡಿಕೊಂಡೇ ಬಂದಿದ್ದಾರೆ.
2014 ಮತ್ತು 2019ರ ಚುನಾವಣೆಗೂ ಮುನ್ನ ದೇಶದಲ್ಲಿ ಭರವಸೆಗೆ ಯಾವುದೇ ಬಹುಮತ ಸಿಕ್ಕಿರಲಿಲ್ಲ ಮತ್ತು ಸಾಧನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಕ್ಕೆಂದೇ ಯಾರಿಗೂ ಬಹುಮಾನ ಸಿಕ್ಕಿರಲಿಲ್ಲ. 1984 ರಿಂದ 2014ರವರೆಗೂ ಯಾವುದೇ ಪಕ್ಷ ಕೂಡಾ ಲೋಕಸಭೆಯಲ್ಲಿ ಬಹುಮತ ಪಡೆದುಕೊಂಡಿರಲಿಲ್ಲ. ಜೊತೆಗೆ 1952 ಮತ್ತು 1984ರ ನಡುವೆ ಬಹುಮತ ಪಡೆದುಕೊಂಡವರೆಲ್ಲಾ ಸ್ವಾತಂತ್ರ್ಯ ಹೋರಾಟದ ಸದ್ಭಾವನೆ, ಕೌಟುಂಬಿಕ ಹಿನ್ನೆಲೆ, ಆಡಳಿತ ವಿರೋಧಿ ಅಲೆ (1977), ಬೆದರಿಕೆ ಮತ್ತು ಕನಿಕರ (1984), ಓಲೈಕೆ, ವಿಭಾಗವಾರು ಪೂರ್ವಾಗ್ರಹ, ವೋಟ್ ಬ್ಯಾಂಕ್ ರಾಜಕೀಯ ಮತ್ತು 1971ರ ಖೊಟ್ಟಿಘೋಷಣೆಗಳಾದ ಗರೀಬಿ ಹಟಾವೋ ಮೂಲಕ ಅಧಿಕಾರಕ್ಕೆ ಬಂದಿದ್ದರು. ಆದರೆ ಇದೀಗ ಎಲ್ಲರೂ 2014 ಚುನಾವಣೆಯನ್ನು ಭಾರತೀಯ ರಾಜಕೀಯದಲ್ಲಿ ನಿರ್ಣಾಯಕ ಬದಲಾವಣೆಯ ಸಮಯ ಎಂದು ಗುರುತಿಸುತ್ತಾರೆ.
ರಾಜ್ಯಗಳ ಜತೆ ಮೋದಿ ನಂಟು ಅದ್ಭುತ:
ರಾಜ್ಯಗಳಲ್ಲಿ ಬಿಜೆಪಿಯ ವಿಜಯಕ್ಕೆ ಮೋದಿಯವರ ಪ್ರಚಾರ ಬಹುದೊಡ್ಡ ಫ್ಯಾಕ್ಟರ್ ಎನಿಸಿದೆ. ಇದಕ್ಕೆ ಇತ್ತೀಚಿನ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಉದಾಹರಣೆ. ರಾಜ್ಯಗಳಲ್ಲಿನ ಪ್ರಚಾರವನ್ನು ಸ್ಥಳೀಯ ವಿಷಯಗಳು ಮತ್ತು ಭಾಷಾ ವೈಶಿಷ್ಟ್ಯಗಳ ಮೂಲಕ ಮೋದಿ ಆವರಿಸಿಕೊಳ್ಳುತ್ತಾರೆ. ಜೊತೆಗೆ ಅವರು ಮೂವರ ಜೊತೆ ಮತ್ತೊಬ್ಬ ಎನ್ನುವಂಥ ನಾಯಕರಾಗಲೀ ಅಥವಾ ಕೆಲವೇ ಕಾರ್ಯಕ್ರಮ, ರಾರಯಲಿಗಳಿಗೆ ಬಂದು ಹೋಗುವ ವ್ಯಕ್ತಿಯ ರೀತಿಯ ಅಲ್ಲ. ಅವರು ಸ್ಥಳೀಯ ರಾಜಕೀಯ ಮತ್ತು ಅದರ ಕಳವಳವನ್ನು ಅತ್ಯಂತ ಆಳವಾಗಿ ಅರಿತುಕೊಳ್ಳುತ್ತಾರೆ ಮತ್ತು ಅಲ್ಲಿಯ ನಾಯಕರನ್ನು ಮಾತುಕತೆಯ ವೇದಿಕೆಗೆ ಕರೆ ತರುತ್ತಾರೆ. ಇದು ಇತರ ಪಕ್ಷಗಳ ರಾಷ್ಟ್ರೀಯ ನಾಯಕರು ಎನಿಸಿಕೊಂಡವರಿಗಿಂತ ಭಿನ್ನವಾದ ವ್ಯಕ್ತಿತ್ವ. ಇತರೆ ಪಕ್ಷಗಳಲ್ಲಿನ ರಾಷ್ಟ್ರೀಯ ನಾಯಕರು ಎನ್ನಿಸಿಕೊಂಡವರು ವಾಸ್ತವ ಸ್ಥಿತಿಯನ್ನೇ ಅರಿಯದೆ ಕೇವಲ ಹಾರಿ ಬಂದು, ಹಾರಿ ಹೋಗುತ್ತಾರೆ.
ಅಪರೂಪದ ಉಡುಗೊರೆ:
ಮೋದಿ ಅವರ ಬಳಿ ಅಪರೂಪದ ಉಡುಗೊರೆಯ ಗುಣವೊಂದಿದೆ. ಅವರು ಪ್ರತಿ ರಾಜ್ಯ ಮತ್ತು ಪ್ರಾಂತ್ಯದೊಂದಿಗೂ ವೈಯಕ್ತಿಕವಾಗಿ ನಂಟು ಹೊಂದಿದ್ದಾರೆ. ಇದನ್ನು ಅರಿಯಲು 2001ಕ್ಕಿಂತ ಮುನ್ನ ‘ತೆರೆದ ಮನಸ್ಸು, ಕೇಳುವ ಕಿವಿ ಮತ್ತು ತೀಕ್ಷ$್ಣ ದೃಷ್ಟಿಯ ಕಣ್ಣು’ಗಳ ಮೂಲಕ ಮೋದಿ ದೇಶವ್ಯಾಪಿ ನಡೆಸಿದ ದಣಿವರಿಯದ ‘ಭಾರತ ಯಾತ್ರೆ’ಯನ್ನು ಒಮ್ಮೆ ಕಾಣಬೇಕು. ಆ ತಪಸ್ಸೇ ಅವರ ನಿಜ ಜೀವನದ ವಿಶ್ವವಿದ್ಯಾಲಯ. ಪ್ರಧಾನಿಯ ಅನುಭವಪೂರ್ಣ ಕಲಿಕೆಯೇ ಅವರ ಅರಿವಿನ ಮೂಲ. ಇದುವೇ ಅವರಿಗೆ ದೆಹಲಿ ಕೇಂದ್ರೀಕೃತ, ರಾಷ್ಟ್ರೀಯ ನಾಯಕರಿಂದ ಹೇರಲ್ಪಟ್ಟಮೇಲ್ಪಟ್ಟದಿಂದ-ಕೆಳಮಟ್ಟದವರೆಗಿನ ಜ್ಞಾನದ ಬದಲಾಗಿ, ತಳಮಟ್ಟದಿಂದ ಉನ್ನತ ಮಟ್ಟದವರೆಗಿನ ವಿಷಯದಲ್ಲಿ ಅಗಾಧ ಜ್ಞಾನ ಹೊಂದಲು ಕಾರಣವಾಗಿರುವುದು. ಬಡ ಕುಟುಂಬಗಳಿಗೆ ಅಡುಗೆ ಅನಿಲ ಸಿಲಿಂಡರ್ ವಿತರಣೆ, ಸ್ವಚ್ಛ ಭಾರತ ಅಭಿಯಾನದಡಿ ಮನೆಯಲ್ಲಿ ಶೌಚಾಲಯ ನಿರ್ಮಾಣ ಯೋಜನೆಗಳು ಮೋದಿ ಅವರ ಇಂಥ ಜ್ಞಾನದ ಮೂಸೆಯಿಂದಲೇ ಹೊರಬಂದಿರುವಂಥದ್ದು.
ಪ್ರಧಾನಿಯಾಗಿ ಆಯ್ಕೆಯಾದ ಬಳಿಕವೂ, ಪಕ್ಷದ ಚಟುವಟಿಕೆ ಮತ್ತು ಅದರ ಬೆಳವಣಿಗೆಯಲ್ಲಿ ಭಾಗಿಯಾಗುವ ಅವರ ಬದ್ಧತೆಯಲ್ಲಿ ಒಂದಿನಿಂತೂ ಕಡಿಮೆಯಾಗಿಲ್ಲ. ಸರ್ಕಾರದ ತೋರುಗಾಣಿಕೆಯ ಲಾಭಕ್ಕಾಗಿ ಪಕ್ಷದ ಹಿತವನ್ನು ಬಲಿಕೊಡುವ ಕೆಲಸವನ್ನು ಅವರು ಮಾಡಲಿಲ್ಲ. ಬದಲಾಗಿ ಎರಡನ್ನೂ ಸಮಾನಾಂತರವಾಗಿ ಕೊಂಡೊಯ್ಯುವ ಯತ್ನ ಮಾಡಿದರು.
ಮಿಸ್‌ಕಾಲ್ ಅಭಿಯಾನಕ್ಕೆ ಮೋದಿ ಪ್ರೇರಣೆ
2015ರಲ್ಲಿ ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ದೇಶವ್ಯಾಪಿ ಸದಸ್ಯತ್ವ ಅಭಿಯಾನದ ಕುರಿತು ಚರ್ಚಿಸಲು ಮೋದಿ ಅವರ ಬಳಿ ಹೋದಾಗ ಅವರ ಮೊದಲ ಪ್ರತಿಕ್ರಿಯೆ ‘ನಾವು ಹಳೆಯ ಮಾದರಿಯಲ್ಲೇ ಸದಸ್ಯತ್ವ ಅಭಿಯಾನ ನಡೆಸಿದರೆ ಅದು ಯಾವುದೇ ಉದ್ದೇಶವನ್ನು ಈಡೇರಿಸದು. ಕಾರಣ ಇಂಥ ಅಭಿಯಾನವು ನಾವು ಈಗಾಗಲೇ ಪ್ರಬಲವಾಗಿರುವ ಪ್ರದೇಶದಲ್ಲೇ ಅತ್ಯಂತ ಸುಲಭವಾಗಿ ಮತ್ತು ಸೋಮಾರಿತನದಿಂದ ಸದಸ್ಯತ್ವ ಅಭಿಯಾನಕ್ಕೆ ಪ್ರೇರೇಪಿಸುತ್ತದೆ. ಹೀಗಾಗಿ ಸದಸ್ಯತ್ವ ಅಭಿಯಾನಕ್ಕೆ ತಂತ್ರಜ್ಞಾನ ಬಳಸಿ ಎಂದು ಮೋದಿ ಸೂಚಿಸಿದರು. ಇದು ಪಕ್ಷದ ಬಗ್ಗೆ ಆಕರ್ಷಿತರಾಗಿರುವ, ಆದರೆ ಕಾರ್ಯಕರ್ತರ ಜೊತೆಗೆ ಹೇಗೆ ಖುದ್ದು ಮಾತನಾಡಿ ಪಕ್ಷ ಸೇರಬಹುದು ಎಂಬುದರ ಬಗ್ಗೆ ಅನುಮಾನ ಹೊಂದಿರುವ ಬಿಜೆಪಿ ಬೆಂಬಲಿಗರನ್ನು ತಲುಪಲು ಸಾಧ್ಯವಾಗುತ್ತದೆ ಎಂಬುದು ಮೋದಿ ಅಭಿಪ್ರಾಯವಾಗಿತ್ತು. ಈ ಸಲಹೆ ಆಧಾರದಲ್ಲೇ ನಾವು ಮಿಸ್‌ಕಾಲ್ ಅಭಿಯಾನ ಆರಂಭಿಸಿದೆವು. ಅದರ ಪರಿಣಾಮ ಯಾವುದೇ ಪ್ರಜಾಪ್ರಭುತ ವ್ಯವಸ್ಥೆಯಲ್ಲಿ, ನಮ್ಮನ್ನು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಿತು. ಜೊತೆಗೆ, ನಾವು ಇದುವರೆಗೆ ತಲುಪಲಾಗದ ಪ್ರದೇಶ ಮತ್ತು ಸಮುದಾಯಕ್ಕೂ ನಮ್ಮ ವ್ಯಾಪ್ತಿ ವಿಸ್ತರಿಸುವಂತೆ ಮಾಡಿತು.
ಮೋದಿ ಆಡಳಿತ ಇನ್ನೂ ಮುಗಿದಿಲ್ಲ. ಆ ದಶಕ ಈಗಿನ್ನೂ ಆರಂಭವಾಗಿದೆ. ನೀವು ಕಾದುನೋಡಿ.. ಸಮಯ ನರೇಂದ್ರ ಮೋದಿಯನ್ನು ಎಲ್ಲಿಗೆ ಕೊಂಡೊಯ್ಯುತ್ತದೆ, ಮೋದಿ ಬಿಜೆಪಿಯನ್ನು ಎಲ್ಲಿಗೆ ಕೊಂಡೊಯ್ಯುತ್ತಾರೆ ಮತ್ತು ಬಿಜೆಪಿ ಮತ್ತು ಮೋದಿ ಭಾರತವನ್ನು ಎಲ್ಲಿಗೆ ಕೊಂಡೊಯ್ಯುತ್ತಾರೆ ಎಂದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ