
ಮುಂಬೈ (ಜುಲೈ.17): ‘ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’ ಎಂದು ವಿವಾದ ಸೃಷ್ಟಿಸಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು, ‘ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮುಂಬೈ- ಬೆಂಗಳೂರು ಇಂಡಿಗೋ ವಿಮಾನದಲ್ಲಿ ನಾರಾಯಣ ಮೂರ್ತಿ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆಕಸ್ಮಿಕವಾಗಿ ಭೇಟಿ ಆಗಿದ್ದರು. ಈ ಸಂದರ್ಭದಲ್ಲಿ ಇನ್ಫಿ ಮೂರ್ತಿ ಜತೆಗೆ ನಡೆದ ಸಂವಾದವನ್ನು ಸೂರ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಇಂದು ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗುವಾಗ ಮೂರ್ತಿ ಅವರ ಜೊತೆಗೆ ಸ್ಫೂರ್ತಿದಾಯಕ ಮಾತುಕತೆ ನಡೆಯಿತು. ಆ 2 ತಾಸು ಕಲಿಕಾ ಪರ್ವವಾಗಿತ್ತು. ಸಂಭಾಷಣೆಯ ಕೊನೆಯಲ್ಲಿ ಅವರಿಗೆ, ‘ನೀವು ಹಾಕಿರುವ ವಾರಕ್ಕೆ 70 ಗಂಟೆಗಳ ಗುರಿ ತಲುಪಲು ಶ್ರಮಿಸುತ್ತೇನೆ’ ಎಂದು ಹಾಸ್ಯಮಯವಾಗಿ ಹೇಳಿದೆ. ಅದಕ್ಕೆ ಅವರು ವಾರಕ್ಕೆ 100 ಗಂಟೆಗಳ ಕೆಲಸ ಮಾಡುವ ನನಗೆ ತಿಳಿದಿರುವ ಏಕೈಕ ವ್ಯಕ್ತಿ ಮೋದಿ ಎಂದರು’ ಎಂದು ಸೂರ್ಯ ಬರೆದಿದ್ದಾರೆ.
ಈ ಹಿಂದೆ ನಾರಾಯಣ ಮೂರ್ತಿ, ‘ ಭಾರತದ ಕೆಲಸದ ಸಂಸ್ಕೃತಿ ಬದಲಾಗಬೇಕು. ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ನಾನು ವಾರಕ್ಕೆ 70 ಗಂಟೆ ದುಡಿಯುತ್ತೇನೆ’ ಎಂದಿದ್ದರು. ಇದಾದ ಬಳಿಕ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎನ್.ಎನ್. ಸುಬ್ರಹ್ಮಣ್ಯನ್ ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಿ ಎಂದು ಸಲಹೆ ನೀಡಿದ್ದರು. ಇದಕ್ಕೆ ನೀತಿ ಆಯೋಗದ ಮಾಜಿ ಮುಖ್ಯಸ್ಥ ಅಮಿತಾಭ್ ಕಾಂತ್ ಕೂಡ ಧ್ವನಿಗೂಡಿಸಿ ಭಾರತೀಯರು ವಾರಕ್ಕೆ 80-90 ಗಂಟೆ ದುಡಿಯಬೇಕು ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ