
ನವದೆಹಲಿ (ಏ. 05): ಕೊರೋನಾ ಅಂಧಕಾರದಿಂದ ದೇಶವನ್ನು ಹೊಸ ಬೆಳಕಿನೆಡೆಗೆ ಒಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ 9 ಕ್ಕೆ 9 ನಿಮಿಷ ಲೈಟ್ ಆರಿಸಿ ದೀಪ ಬೆಳಗಲು ಕರೆ ನೀಡಿದ್ದಾರೆ. ಆದರೆ ಇದರಿಂದ ದೇಶದ ವಿದ್ಯುತ್ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವೇ ಆಗಿಬಿಡುತ್ತದೆ, ವಿದ್ಯುತ್ ಗ್ರಿಡ್ ಸ್ತಬ್ಧವಾಗಿಬಿಡುತ್ತದೆ ಎಂಬೆಲ್ಲಾ ಆತಂಕವನ್ನು ಕೇಂದ್ರ ಸರ್ಕಾರವೇ ಸ್ಪಷ್ಟವಾಗಿ ಅಲ್ಲಗಳೆದಿದೆ.
ದೇಶದ ಇತಿಹಾಸದಲ್ಲಿ ಹಿಂದೆಂದೂ ಒಮ್ಮೆಗೆ ಇಡೀ ದೇಶದಲ್ಲಿ ವಿದ್ಯುತ್ ದೀಪ ಒಟ್ಟಾಗಿ ಆರಿಸಿದ್ದ ಉದಾಹರಣೆ ಇಲ್ಲ. ಹೀಗಾಗಿಯೇ ಸಹಜವಾಗಿಯೇ ಈ ಬಗ್ಗೆ ದೇಶವ್ಯಾಪಿ ಆತಂಕ, ಕಳವಳ ಉಂಟಾಗಿತ್ತು. ಏಕಾಏಕಿ ವಿದ್ಯುತ್ ಕಡಿತ ಮಾಡಿದರೆ ಮತ್ತು ಏಕಾಏಕಿ ಕೋಟ್ಯಂತರ ಜನ ವಿದ್ಯುತ್ ಬಳಕೆ ಆರಂಭಿಸಿದರೆ ಅದು ವಿದ್ಯುತ್ ಉತ್ಪಾದನಾ ಮತ್ತು ವಿತರಣಾ ವ್ಯವಸ್ಥೆಗೆ ಧಕ್ಕೆ ತರಲಿದೆ. ಹೀಗಾದಲ್ಲಿ ಇಡೀ ದೇಶದಲ್ಲಿ ಮತ್ತೆ ವಿದ್ಯುತ್ ವ್ಯವಸ್ಥೆ ಸರಿಪಡಿಸಲು 2 ದಿನವೇ ಬೇಕಾಗಲಿದೆ ಎಂಬ ಆತಂಕ ವ್ಯಕ್ತವಾಗಿತ್ತು.
ಹಚ್ಚೋಣ ಏಕತಾ ದೀಪ: ಇಂದು ರಾತ್ರಿ 9ರಿಂದ 9 ನಿಮಿಷಗಳ ಕಾಲ ಬೆಳಕಿನ ಅಭಿಯಾನ!
ಈ ಹಿನ್ನೆಲೆಯಲ್ಲಿ ಶನಿವಾರ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಉನ್ನತ ಅಧಿಕಾರಿಗಳು ತುರ್ತು ಸಭೆ ನಡೆಸಿ, ಈ ಕಳವಳಕ್ಕೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ. ಮೋದಿ ಅವರ ಕರೆಯಂತೆ ದೇಶವಾಸಿಗಳು 9 ನಿಮಿಷ ವಿದ್ಯುತ್ ದೀಪ ಆರಿಸಿದರೆ, ವಿದ್ಯುತ್ ಬೇಡಿಕೆ ಕುಸಿಯುವುದು ನಿಜ. ಆದರೆ ಅದರಿಂದ ಒಟ್ಟಾರೆ ವಿದ್ಯುತ್ ವ್ಯವಸ್ಥೆಗೇ ಸಮಸ್ಯೆಯಾಗುತ್ತದೆ ಎಂಬುದೆಲ್ಲ ಸತ್ಯವಲ್ಲ. ಒಂದು ವೇಳೆ 15 ಗಿಗಾ ವ್ಯಾಟ್‌ನಷ್ಟುವಿದ್ಯುತ್ ಏರಿಳಿಕೆಯಾದರೂ ಅದನ್ನು ಎದುರಿಸಲು ಸಿದ್ಧವಾಗಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಅತ್ಯಂತ ಗರಿಷ್ಠ ವಿದ್ಯುತ್ ಬೇಡಿಕೆಯೇ 170 ಗಿಗಾವ್ಯಾಟ್. 21 ದಿನಗಳ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ವಿದ್ಯುತ್ ಬೇಡಿಕೆ ಶೇ.20ರಷ್ಟುಕುಸಿದಿದೆ. ಸದ್ಯ 120ರಿಂದ 130 ಗಿಗಾವ್ಯಾಟ್‌ಗೆ ಬೇಡಿಕೆ ಇದೆ. ಈ ಪೈಕಿ ಗೃಹ ಬಳಕೆಗೆ ಖರ್ಚಾಗುತ್ತಿರುವುದು ಶೇ.10ರಿಂದ 12ರಷ್ಟುಮಾತ್ರ. ಹೀಗಾಗಿ 15 ಗಿಗಾವ್ಯಾಟ್ ಏರಿಳಿತ ಕಂಡುಬಂದರೂ ಅದನ್ನು ಎದುರಿಸುತ್ತೇವೆ. ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬೀದಿ ದೀಪ ಆರಿಸುವಂತಿಲ್ಲ
ಭಾನುವಾರ ರಾತ್ರಿ 9ಕ್ಕೆ ಮನೆಯ ಲೈಟ್‌ಗಳನ್ನು ಮಾತ್ರ ಆರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಬೀದಿ ದೀಪ ಅಥವಾ ಮನೆಯಲ್ಲಿರುವ ವಿದ್ಯುತ್ ಉಪಕರಣ ಆಫ್ ಮಾಡಲು ಅವರು ಸಲಹೆ ಮಾಡಿಲ್ಲ. ಕೇವಲ ದೀಪಗಳನ್ನಷ್ಟೇ ಆರಿಸಬೇಕಾಗುತ್ತದೆ ಎಂದು ವಿದ್ಯುತ್ ಸಚಿವಾಲಯ ಸ್ಪಷ್ಟನೆ ನೀಡಿದೆ.
ಆಸ್ಪತ್ರೆಗಳು ಹಾಗೂ ಇನ್ನಿತರೆ ಅಗತ್ಯ ಸೇವೆಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ವಿದ್ಯುತ್ ದೀಪಗಳು ಆಫ್ ಆಗುವುದಿಲ್ಲ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೀದಿ ದೀಪಗಳು ಆನ್ ಇರುವಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದೆ.
ಫ್ರಿಜ್‌ನಂತಹ ಉಪಕರಣಕ್ಕೆ ಏನೂ ಆಗದು
ದೇಶದ ಜನರೆಲ್ಲಾ ಭಾನುವಾರ ರಾತ್ರಿ 9ಕ್ಕೆ ಏಕಕಾಲಕ್ಕೆ ವಿದ್ಯುತ್ ದೀಪ ಆರಿಸಿದರೆ ಗ್ರಿಡ್‌ನಲ್ಲಿ ಅಸ್ಥಿರತೆ ಉಂಟಾಗುತ್ತದೆ ಹಾಗೂ ವೋಲ್ಟೇಜ್ ವ್ಯತ್ಯಾಸವಾಗುತ್ತದೆ. ಇದರಿಂದ ಫ್ರಿಜ್ ಸೇರಿದಂತೆ ಮನೆಯಲ್ಲಿರುವ ವಿದ್ಯುತ್ ಉಪಕರಣಗಳಿಗೆ ಸಮಸ್ಯೆಯಾಗುತ್ತದೆ ಎಂಬುದೆಲ್ಲಾ ಸುಳ್ಳು ಎಂದು ಕೇಂದ್ರ ವಿದ್ಯುತ್ ಸಚಿವಾಲಯ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ